ತಡವಾಗಿ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷರ ಕಾರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು
ಸಚಿವರುಗಳಾದ ಸುನಿಲ್ ಕುಮಾರ್, ಅಂಗಾರ, ಶಾಸಕ ಮಠಂದೂರು ಅವರಿಗೂ ಘೇರಾವ್ ಹಾಕಿದ ಕಾರ್ಯಕರ್ತರು
ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ದುಷ್ಕರ್ಮಿಗಳ ಕತ್ತಿ ಏಟಿಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಯುವ ಮೋರ್ಛಾ ಸದಸ್ಯ ಪ್ರವೀಣ್ ನೆಟ್ಟಾರು ಅವರ ಮೃತದೇಹ ಜು.27ರಂದು ಬೆಳ್ಳಾರೆಗೆ ಆಗಮಿಸಿದ ವೇಳೆ ಅಲ್ಲಿಗೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಕಾರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಹಿಂದೂ ಕಾರ್ಯಕರ್ತರಾಗಿದ್ದ ಪ್ರವೀಣ್ ಪೂಜಾರಿ ಅವರು ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದು, ಅವರನ್ನು ಬೈಕ್ ನಲ್ಲಿ ಬಂದ ಮೂರು ಜನ ದುಷ್ಕರ್ಮಿಗಳು ಕತ್ತಿಯಲ್ಲಿ ತೀವ್ರ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಆ ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರವೀಣ್ ಅವರು ಕೊನೆಯುಸಿರೆಳೆದಿದ್ದು, ರಾತ್ರಿಯೇ ಆಸ್ಪತ್ರೆಯ ಮುಂಭಾಗದಲ್ಲಿ ಹಿಂದೂಪರ ಹಾಗೂ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.
ಈ ಘಟನೆ ನಿನ್ನೆ ರಾತ್ರಿಯೇ ಸಂಭವಿಸಿದ್ದರೂ, ಯಾವುದೇ ಬಿಜೆಪಿ ಮುಖಂಡರು, ಸಚಿವರುಗಳು ಸ್ಥಳಕ್ಕೆ ಬಂದಿರಲಿಲ್ಲವೆನ್ನಲಾಗಿದೆ.
ಜು.27ರಂದು ಮಧ್ಯಾಹ್ನ ಪ್ರವೀಣ್ ಪೂಜಾರಿ ಅವರ ಮೃತದೇಹದ ಮೆರವಣಿಗೆಯು ಬೆಳ್ಳಾರೆಗೆ ಆಗಮಿಸಿದ ಸಂದರ್ಭದಲ್ಲಿ ಅಲ್ಲಿಗೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಕಾರಿಗೆ ಮುತ್ತಿಗೆ ಹಾಕಿದ ಹಿಂದೂಪರ ಕಾರ್ಯಕರ್ತರು ಕಾರನ್ನು ಪಲ್ಟಿ ಮಾಡಲು ಯತ್ನಿಸಿದ ಘಟನೆ ವರದಿಯಾಗಿದೆ.
ಈ ವೇಳೆ ಅಲ್ಲಿಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ , ಸಚಿವ ಎಸ್. ಅಂಗಾರ, ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೂ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ಸಂಭವಿಸಿದೆ.