ಎನ್ಐಎ ತನಿಖೆಗೆ ಮುಖಂಡರ ಆಗ್ರಹ
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆಗೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಹಲವು ಕೋನಗಳಲ್ಲಿ ಪೊಲೀಸರ ತನಿಖೆ ಮುಂದುವರಿಯುತ್ತಿದೆ. ವೈಯಕ್ತಿಕ ದ್ವೇಷ, ರಾಜಕೀಯ ದ್ವೇಷ, ಕೋಮು ದ್ವೇಷ ವಿಚಾರಗಳನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿರುವುದಾಗಿ ತಿಳಿದು ಬಂದಿದೆ.
ಪ್ರವೀಣ್ ವೈಯಕ್ತಿಕವಾಗಿ ಯಾರೊಂದಿಗೂ ದ್ವೇಷ ಕಟ್ಟಿಕೊಂಡವರಲ್ಲ ಎಂದು ಪರಿಸರದವರು ಹೇಳುತ್ತಾರೆ. ರಾಜಕೀಯವಾಗಿಯೂ ಯಾರೊಂದಿಗೂ ಅಷ್ಟಾಗಿ ವೈಮನಸ್ಸು ಹೊಂದಿದವರಲ್ಲ ಎಂಬ ಅಭಿಪ್ರಾಯವೂ ಇದೆ. ಕೋಮು ದ್ವೇಷದ ಕಾರಣಕ್ಕಾಗಿ ಕೊಲೆ ನಡೆದಿರಬಹುದೇ ಎಂಬ ಶಂಕೆಯನ್ನು ಮೂಲವಾಗಿಟ್ಟು ತನಿಖೆ ಮುಂದುವರಿದಿದೆ.
ಕೆಲವು ದಿನಗಳ ಹಿಂದಷ್ಟೇ ಬೆಳ್ಳಾರೆ ಸಮೀಪದ ಕಳಂಜದಲ್ಲಿ ಗುಂಪು ಹಲ್ಲೆಗೊಳಗಾಗಿ ಕಾಸರಗೋಡು ಮೂಲದ ಮಸೂದ್ ಎಂಬ ಯುವಕ ಸಾವಿಗೀಡಾಗಿದ್ದ. ಈ ಹತ್ಯೆ ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು. ಈ ಘಟನೆಯ ಆರೋಪಿಗಳು ಬಂಧಿಸಲ್ಪಟ್ಟು ಈಗ ನ್ಯಾಯಾಂಗ ಕಸ್ಟಡಿಯಲ್ಲಿದ್ದಾರೆ. ಈ ಆರೋಪಿಗಳಲ್ಲಿ ಕೆಲವರು ಹಿಂದೂ ಸಂಘಟನೆಯೊಂದರ ಕಾರ್ಯಕರ್ತರಾಗಿದ್ದವರೂ ಇದ್ದರು.
ಈ ದ್ವೇಷದಿಂದ ಪ್ರತೀಕಾರದ ಕೊಲೆ ನಡೆದಿರಬಹುದೇ ಎಂಬ ಮಾಹಿತಿ ಆಧಾರದಲ್ಲೂ ತನಿಖೆ ಮುಂದುವರಿದಿದೆ. ಆದರೆ ಮಸೂದ್ ಕೊಲೆಗೂ ಪ್ರವೀಣ್ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಲಾಗುತ್ತಿದ್ದು, ಇಂತಹ ಘಟನೆಯನ್ನು ಜೀವಂತವಾಗಿಡಲು ಈ ಘಟನೆ ನಡೆದಿರಬಹುದೇ ಎಂಬ ಶಂಕೆಗಳೂ ಮೂಡಿದೆ.
ಪ್ರವೀಣ್ ಬುಧವಾರ ರಾತ್ರಿ 8.45ರ ವೇಳೆ ತನ್ನ ಚಿಕನ್ ಸೆಂಟರ್ನಲ್ಲಿ ಇರುವ ವೇಳೆ ಈ ದುಷ್ಕರ್ಮಿಗಳ ದಾಳಿ ನಡೆದಿದೆ. ತನ್ನ ಚಿಕನ್ ಸೆಂಟರ್ನೊಳಗೆ ಮುಸುಕುಧಾರಿಯಾದ ಓರ್ವ ಬರುತ್ತಿದ್ದುದನ್ನು ಕಂಡ ಪ್ರವೀಣ್ ಪಕ್ಕದ ಅಂಗಡಿಯತ್ತ ಓಡಿ ಬಂದಿದ್ದಾರೆ. ಈ ವೇಳೆ ಎದುರು ಕಡೆಯಿಂದ ಬಂದ ಮತ್ತಿಬ್ಬರು ತಲವಾರಿನಿಂದ ಕಡಿದಿದ್ದಾರೆ. ತಲೆಯ ಹಿಂಭಾಗಕ್ಕೆ ಗಂಭೀರ ಏಟು ಬಿದ್ದ ಪ್ರವೀಣ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಆಂಬ್ಯುಲೆನ್ಸ್ನಲ್ಲಿ ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಈ ಹತ್ಯಾ ಘಟನೆಯನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ನ.ಸೀತಾರಾಮ ಒತ್ತಾಯಿಸಿದ್ದಾರೆ.