ನಾಯಕರ ವಿರುದ್ಧ ಕಾರ್ಯಕರ್ತರ ಆಕ್ರೋಶ
ಲಾಠಿ ಪ್ರಹಾರ : ಹಲವು ಕಾರ್ಯಕರ್ತರಿಗೆ ಗಾಯ
ಸಂಸದರ ಕಾರು ಪಲ್ಟಿ ಮಾಡಲು ಮುಂದಾದ ಆಕ್ರೋಶಿತರು
ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಪಾರ್ಥೀವ ಶರೀರದ ಅಂತಿಮ ಯಾತ್ರೆಯ ವೇಳೆ ಅಂತಿಮ ದರ್ಶನಕ್ಕೆ ಆಗಮಿಸಿದ ಸಚಿವರು, ಸಂಸದರು ಹಾಗೂ ನಾಯಕರ ವಿರುದ್ಧ ಹಿಂದೂ ಸಂಘಟನೆಯ ಕಾರ್ಯಕರ್ತರ ಗುಂಪೊಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಈ ಮಧ್ಯೆ ಪೊಲೀಸರು ಲಘು ಲಾಠಿ ಪ್ರಹಾರವನ್ನೂ ನಡೆಸಿದ್ದು, ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಪುತ್ತೂರಿನಿಂದ ಬೆಳಿಗ್ಗೆ ಪ್ರವೀಣ್ ಮೃತದೇಹ ಹೊತ್ತ ಆಂಬ್ಯುಲೆನ್ಸ್ ನಿಂತಿಕಲ್ಲು ಮಾರ್ಗವಾಗಿ ಬೆಳ್ಳಾರೆಗೆ ಬಂದು ಬೆಳ್ಳಾರೆ ಬಸ್ ನಿಲ್ದಾಣದ ಬಳಿ ಅಂತಿಮ ದರ್ಶನಕ್ಕೆಂದು ಇರಿಸಲಾಗಿತ್ತು. ಸಚಿವ ಎಸ್.ಅಂಗಾರ, ಡಾ.ಪ್ರಭಾಕರ ಭಟ್ ಕಲ್ಲಡ್ಕ ಸೇರಿದಂತೆ ಗಣ್ಯರು ಅಲ್ಲಿದ್ದರು. ಸಹಸ್ರಾರು ಮಂದಿ ಈ ವೇಳೆ ಅಂತಿಮ ದರ್ಶನಕ್ಕಾಗಿ ಅಲ್ಲಿಗೆ ಬಂದಿದ್ದರು. ರಾಮ ನಾಮ ಜಪ ಮೊಳಗುತ್ತಿತ್ತು. ಈ ಹೊತ್ತಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಸಂಸದ ನಳಿನ್ಕುಮಾರ್ ಕಟೀಲ್, ಉಸ್ತುವಾರಿ ಸಚಿವ ವಿ. ಸುನಿಲ್ಕುಮಾರ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್ ಮೊದಲಾದವರು ಅಲ್ಲಿಗೆ ಆಗಮಿಸಿದರು.
ಇದ್ದಕ್ಕಿದ್ದಂತೆ ಕಾರ್ಯಕರ್ತರ ಆಕ್ರೋಶ ಮೊಳಗತೊಡಗಿತು. ಈ ನಾಯಕರು ಹರಸಾಹಸಪಟ್ಟು ಅಂತಿಮ ದರ್ಶನ ಪಡೆದು ಪಕ್ಕಕ್ಕೆ ಹೋಗಿ ನಿಂತರು. ಕಾರ್ಯಕರ್ತರು ಏರು ದನಿಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾರಂಭಿಸಿದರು. ಬಿಜೆಪಿಗೆ, ನಾಯಕರಿಗೆ ಧಿಕ್ಕಾರವನ್ನೂ ಕೂಗತೊಡಗಿದರು. ಸಂಘಟನೆಯ ಕೆಲವು ಮುಖಂಡರು ಧ್ವನಿವರ್ಧಕದಲ್ಲಿ ಶಾಂತಚಿತ್ತರಾಗಿರುವಂತೆ ಮನವಿ ಮಾಡಿಕೊಂಡರೂ ಕಾರ್ಯಕರ್ತರು ಗಣನೆಗೆ ತೆಗೆದುಕೊಳ್ಳಲಿಲ್ಲ.
ಪ್ರತಿ ಬಾರಿ ಹತ್ಯೆಯಾದಗಲೂ ಅವರ ಹೆಸರಿನಲ್ಲಿ ಓಟು ಪಡೆಯುತ್ತೀರಿ. ನಮ್ಮದೇ ಸರಕಾರವಿದ್ದರೂ ನಮಗೆ ನ್ಯಾಯ ದೊರಕುತ್ತಿಲ್ಲ ಎಂದು ಕಾರ್ಯಕರ್ತರು ಕೂಗತೊಡಗಿದರು. ಈ ಹಂತದಲ್ಲಿ ಡಾ. ಪ್ರಭಾಕರ ಭಟ್ ಕೂಡಾ ಧ್ವನಿವರ್ಧಕದಲ್ಲಿ ಮನವಿ ಮಾಡಿಕೊಂಡರೂ ಪರಿಸ್ಥಿತಿ ಶಾಂತವಾಗಲಿಲ್ಲ. ಕೊನೆಗೆ ಅವರು ನಾಯಕರು ಹಾಗೂ ಪೊಲೀಸರ ಬೆಂಗಾವಲಿನಲ್ಲಿ ಹರಸಾಹಸಪಟ್ಟು ರಸ್ತೆಗೆ ಬಂದಾಗ ಅವರ ಕಾರಿಗೆ ಕಾರ್ಯಕರ್ತರು ಅಡ್ಡನಿಂತರು. ಹೀಗಾಗಿ ಅವರು ಬೇರೊಂದು ವಾಹನದಲ್ಲಿ ತೆರಳಬೇಕಾಯಿತು. ಬಳಿಕ ಕಾರ್ಯಕರ್ತರ ಆಕ್ರೋಶ ಸಂಸದರು ಹಾಗೂ ಸಚಿವರತ್ತ ತಿರುಗಿತು. ರಸ್ತೆಯಲ್ಲಿ ನಿಂತಿದ್ದ ಸಂಸದರ ಕಾರನ್ನು ಎತ್ತಿ ಪಲ್ಟಿ ಮಾಡುವ ಕೆಲಸಕ್ಕೂ ಮುಂದಾದರು. ನಾಯಕರು ಹಾಗೂ ಪೊಲೀಸರು ಅದನ್ನು ತಡೆದರು. ಈ ಮಧ್ಯೆ ಸಮೀಪದ ಅಂಗಡಿಯ ಕಪಾಟಿನ ಗಾಜುಗಳು ಒಡೆಯಿತು.
ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಕೆಲವು ಕಾರ್ಯಕರ್ತರ ಕೋಪಕ್ಕೆ ಸ್ಥಳೀಯ ನಾಯಕರು ಕೂಡಾ ಈಡಾಗಬೇಕಾಯಿತು. ಕೈಕೈ ಮಿಲಾಯಿಸುವ ಹಂತಕ್ಕೂ ಬಂತು. ಕೊನೆಗೆ ಎಲ್ಲರೂ ದೂರ ಬಂದು ನಿಂತರು. ಅಲ್ಲಿಗೂ ಬಂದ ಕಾರ್ಯಕರ್ತರು ಸಚಿವರು ಹಾಗೂ ನಾಯಕರೊಂದಿಗೆ ಪ್ರಶ್ನೆಮಾಡುತ್ತಿದ್ದಾಗ ಇತರ ಕೆಲವು ನಾಯಕರಿಗೂ, ಕಾರ್ಯಕರ್ತರಿಗೂ ಮಾತಿನ ಚಕಮಕಿ ನಡೆಯಿತು. ಬಹಳ ಹೊತ್ತಿನ ಬಳಿಕ ಕೆಲವು ನಾಯಕರು ಪೊಲೀಸರ ಸಹಕಾರ ಪಡೆದು ಸಂಸದರು ಹಾಗೂ ಸಚಿವರನ್ನು ವಾಹನಗಳಲ್ಲಿ ಕರೆದೊಯ್ಯಲು ಯಶಸ್ವಿಯಾದರು.
ನಾಯಕರನ್ನು ಹಿಂಬಾಲಿಸುತ್ತಿದ್ದ ಕಾರ್ಯಕರ್ತರ ಗುಂಪು ಅವರು ಹೋದ ಬಳಿಕ ಬೆಳ್ಳಾರೆಯ ಮಸೀದಿ ಮುಂಭಾಗದಲ್ಲಿ ಜಮಾಯಿಸಿತು. ಇದರಲ್ಲಿ ಕೆಲವರು ಮಸೀದಿಯತ್ತ ಕಲ್ಲು ತೂರುವ ಪ್ರಯತ್ನ ಮಾಡಿದಾಗ ಪೊಲೀಸರು ಲಾಠಿ ಪ್ರಹಾರಕ್ಕೆ ಮುಂದಾದರು. ಕಾರ್ಯಕರ್ತರು ಚದುರಿ ಓಡಿದರು. ಈ ಹಂತದಲ್ಲಿ ಕೆಲವು ಕಾರ್ಯಕರ್ತರಿಗೆ ಏಟಾಯಿತು. ಲಾಠಿ ಪ್ರಹಾರದಿಂದ ಮತ್ತೆ ಕೆರಳಿದ ಕಾರ್ಯಕರ್ತರ ತಂಡಗಳು ಪೊಲೀಸರೊಂದಿಗೂ ವಾಗ್ಯುದ್ಧಕ್ಕೆ ಮುಂದಾದರು. ಕೊನೆಗೂ ಪೊಲೀಸರು ಮತ್ತು ಸ್ಥಳೀಯ ನಾಯಕರು ಅವರನ್ನು ಸಮಾಧಾನಿಸುವ ಪ್ರಯತ್ನ ಮಾಡಿದರು.
ಕೊನೆಗೆ ಪೊಲೀಸರು ಈ ಭಾಗದಲ್ಲಿ ೧೪೪ ಸೆಕ್ಷನ್ ಇರುವುದರಿಂದ ಎಲ್ಲರೂ ಸ್ಥಳದಿಂದ ತೆರಳುವಂತೆ ಧ್ವನಿವರ್ಧಕದಲ್ಲಿ ಸೂಚನೆ ನೀಡಿದರು. ಆಗ ಜನ ತೆರಳಿ ಪರಿಸ್ಥಿತಿ ಶಾಂತಗೊಳ್ಳತೊಡಗಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಹೃಷಿಕೇಶ್ ಸೋನಾವಣೆ, ಪುತ್ತೂರು ಎಎಸ್ಪಿ ಡಾ. ಗಾನ ಕುಮಾರ್ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ನಿಂತಿನಲ್ಲಿನಿಂದ ಅಂತಿಮ ಯಾತ್ರೆ ಹೊರಟ ಬಳಿಕ ವೀಡಿಯೋ ಚಿತ್ರೀಕರಿಸುತ್ತಿದ್ದಾರೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ಬೈಕ್ಗೆ ಹಾಗೂ ಬಸ್ಸೊಂದರ ಗಾಜಿಗೆ ಹಾನಿ ಮಾಡಿದ ಘಟನೆಯೂ ನಡೆದಿದೆ.