ಪ್ರವೀಣ್ ಪತ್ನಿಗೆ ಸರಕಾರಿ ಉದ್ಯೋಗ ಮತ್ತು ಹೊಸ ಮನೆ ಕಟ್ಟಿಕೊಡುವ ಭರವಸೆ
ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬೆಳ್ಳಾರೆಯ ಪ್ರವೀಣ್ ಪೂಜಾರಿ ನೆಟ್ಟಾರು ಅವರ ಮನೆಗೆ ಇಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ , ಸಚಿವ ಎಸ್. ಅಂಗಾರ, ಶಾಸಕ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಶಾಸಕರುಗಳಾದ ಬಂಟ್ವಾಳದ ರಾಜೇಶ್ ನಾಯಕ್ ಉಳಿಪಾಡಿಗುತ್ತು , ಬೆಳ್ತಂಗಡಿಯ ಹರೀಶ್ ಪೂಂಜಾ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮೊದಲಾದವರು ಭೇಟಿ ನೀಡಿ ಮನೆಯವರನ್ನು ಸಂತೈಸಿದರು.
ಪ್ರವೀಣ ಪತ್ನಿ , ತಾಯಿ ಮತ್ತು ತಂದೆಯ ಹಾಗೂ ಕುಟುಂಬಿಕರ ನೋವನ್ನು ಆಲಿಸಿದ ನಾಯಕರುಗಳು ಪರಸ್ಪರ ಸಮಾಲೋಚಿಸಿ ಪ್ರವೀಣ್ ನೆಟ್ಟಾರು ಪತ್ನಿಗೆ ಸರಕಾರಿ ಉದ್ಯೋಗದ ಭರವಸೆ ನೀಡಿದರಲ್ಲದೆ, ಪ್ರವೀಣರ ಮನೆಯನ್ನು ಹೊಸದಾಗಿ ನಿರ್ಮಿಸಿ ಕೊಡುವುದಾಗಿ ಹೇಳಿದರು.
ಅದಕ್ಕಿಂತ ಮೊದಲು ಸಚಿವ ಅಂಗಾರರನ್ನು , ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯರನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದ ಪ್ರವೀಣರ ಮನೆಯವರು ಮತ್ತು ತಮ್ಮ ಆಕ್ರೋಶವನ್ನು ಹೊರಗೆಡಹಿದ್ದರು.
ಬಳಿಕ ಬಿ.ವೈ.ವಿಜಯೇಂದ್ರರು ಬರುವಾಗ ಸಚಿವ ಅಂಗಾರ, ಶಾಸಕ ಬೋಪಯ್ಯರು ಕೂಡಾ ಜತೆಗೆ ಬಂದರು.
ಆ ಸಂದರ್ಬದಲ್ಲಿ ಕೂಡ ಮನೆಯವರು ಹಾಗೂ ಪ್ರವೀಣರ ಪತ್ನಿ ತಮ್ಮ ನೋವು ತೋಡಿಕೊಂಡರು. ಸರಕಾರದಿಂದ ಪರಿಹಾರ ಕೊಡುವುದಲ್ಲದೆ ಪ್ರವೀಣ್ ಪತ್ನಿಗೆ ಸರಕಾರಿ ಉದ್ಯೋಗ ಕೊಡಿಸಬೇಕೆಂಬ ಬೇಡಿಕೆಯನ್ನು ಬಂಧುಗಳು ವಿಜಯೇಂದ್ರ ರ ಮುಂದಿಟ್ಟರು. ” ನನ್ನ ಪತಿಯ ಹತ್ಯೆಯೇ ಕೊನೆಯ ಹತ್ಯೆಯಾಗಬೇಕು. ಅಪರಾಧಿಗಳನ್ನು ಇನ್ಯಾವತ್ತೂ ಹೊರಗೆ ಬರದಂತೆ ನೋಡಿಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಅನುಸರಿಸುವ ಎನ್ ಕೌಂಟರ್ ಕ್ರಮವನ್ನು ಇಲ್ಲಿಯೂ ಜಾರಿಗೊಳಿಸಬೇಕು ” ಎಂದು ಬಂಧುಗಳು ಒತ್ತಾಯಿಸಿದರು.
ಬಳಿಕ ಕೆಲವೇ ಮಂದಿ ನಾಯಕರೊಂದಿಗೆ ಮನೆಯ ಕೊಠಡಿಯೊಳಗೆ ಸಮಾಲೋಚಿಸಿದ ವಿಜಯೇಂದ್ರರು ಹೊರಗೆ ಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ” ಹತ್ಯೆಕೋರರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಪ್ರವೀಣ್ ಪತ್ನಿೆ ಸರಕಾರಿ ಉದ್ಯೋಗ ಕೊಡಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಮನೆ ಶಿಥಿಲಾವಸ್ಥೆಯಲ್ಲಿದ್ದು ಹೊಸದಾಗಿ ಅದರ ನಿರ್ಮಾಣದ ವ್ಯವಸ್ಥೆ ಮಾಡಲಾಗುವುದು ಎಂದರು.