ಇಬ್ಬರೂ ಪಿ.ಎಫ್.ಐ. ಕಾರ್ಯಕರ್ತರು; ಕೊಲೆಗೆ ಸಹಕಾರ ನೀಡಿದ ಆರೋಪ
ಬೆಳ್ಳಾರೆಯಲ್ಲಿ ಜಿಲ್ಲಾ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಪೊಲೀಸರು ಬಂಧಿಸಿರುವ ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ. ಇವರಿಬ್ಬರೂ ಕೊಲೆಗೆ ಸಹಕಾರ ನೀಡಿದವರೆನ್ನಲಾಗಿದೆ.
ಹತ್ಯೆ ಘಟನೆಯ ಮರುದಿನವೇ ಹಲವು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಈ ಪೈಕಿ ಇಬ್ಬರ ಬಂಧನವನ್ನು ಎಡಿಜಿಪಿ ಅಲೋಕ್ಕುಮಾರ್ ಹಾಗೂ ಎಸ್.ಪಿ. ಋಷಿಕೇಶ್ ಸೋನಾವಣೆ ಇಂದು ಮಧ್ಯಾಹ್ನ ಖಚಿತಪಡಿಸಿದ್ದರು.
ಬೆಳ್ಳಾರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜಾಕೀರ್ ಸವಣೂರು ಮತ್ತು ಮೊಹಮ್ಮದ್ ಶಫೀಕ್ ಬೆಳ್ಳಾರೆ ಇವರನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆಯುತ್ತಿದೆ. ಆರೋಪಿಗಳು ಪಿಎಫ್ಐ ಸಂಘಟನೆಗೆ ಒಳಪಟ್ಟವರೆಂಬ ಮಾಹಿತಿ ಲಭಿಸಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಇನ್ನಷ್ಟು ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಬಂಧಿತ ಆರೋಪಿಗಳನ್ನು ಬೆಳ್ಳಾರೆ ಠಾಣೆಯಲ್ಲಿಯೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸಂಜೆ ವೇಳೆಗೆ ಪುತ್ತೂರಿಗೆ ಕೊಂಡೊಯ್ದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಇಬ್ಬರು ಆರೋಪಿಗಳಿಗೂ ನ್ಯಾಯಾಂಗ ಕಸ್ಟಡಿ ವಿಧಿಸಿದರು.
ಈಗ ಬಂಧಿತರಾಗಿರುವ ಇಬ್ಬರೂ ಪ್ರವೀಣ್ ಕೊಲೆ ಕೃತ್ಯಕ್ಕೆ ಸಹಕಾರ ನೀಡಿದವರೆಂದು ತಿಳಿದು ಬಂದಿದೆ.
ಇಬ್ಬರೂ ಪಾಪ್ಯುಲರ್ ಪ್ರಂಟ್ ಕಾರ್ಯಕರ್ತರಾಗಿದ್ದಾರೆ.