ನಂಗೆ ಸಮಾಧಾನಕ್ಕೆ ಬರಬೇಡಿ; ಅಪರಾಧಿಗಳಿಗೆ ಶಿಕ್ಷೆಯಾಗಿದೆ ಎಂದು ಹೇಳಲು ಬನ್ನಿ ಎಂದ ಪತ್ನಿ
ನೋವಿನ ಮಧ್ಯೆಯೂ ಬೆಳ್ಳಾರೆ ಆಸ್ಪತ್ರೆಯ ಸಮಸ್ಯೆ ಪ್ರಸ್ತಾಪಿಸಿದ ನೂತನ
ಪ್ರವೀಣ್ ನಿಮಗೆ ರಕ್ಷೆ ಕಟ್ಟಿದ್ರು ಮೇಡಂ, ಆದರೆ ಅವರನ್ನೇ ಉಳಿಸಿಕೊಳ್ಳಲಾಗಲಿಲ್ಲ ಎಂದ ಮನೆಯವರು
ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು.
ಆರಂಭದಲ್ಲಿ ತಾಯಿ ರತ್ನಾವತಿ, ನಂತರ ಪತ್ನಿ ನೂತನ, ಬಳಿಕ ಪ್ರವೀಣ್ ಅವರ ಐದನೇ ದಿನದ ಕಾರ್ಯದ ಸ್ಥಳದಲ್ಲಿದ್ದ ತಂದೆ ಶೇಖರ ಪೂಜಾರಿ ಅವರೊಂದಿಗೆ ಮಾತನಾಡಿ ಸಾಂತ್ವಾನ ಹೇಳಿದರು.
ಯಾವಾಗ ನ್ಯಾಯ ಕೊಡಿಸ್ತೀರಿ ಮೇಡಂ? ಕರ್ಮ ಮುಗಿಯುವ ಮೊದಲು ನ್ಯಾಯ ಸಿಗಬೇಕು ಎಂದು ಮನೆಯವರು ಹೇಳಿದಾಗ, ಪೊಲೀಸ್ ಅಧಿಕಾರಿಗಳ ಸತತ ಸಂಪರ್ಕದಲ್ಲಿದ್ದೇನೆ. ಘಟನೆ ಆದ ಮರುದಿನ ಬೆಳಿಗ್ಗೆಯೇ ಎನ್.ಐ.ಎ. ತನಿಖೆಗೆ ಒತ್ತಾಯಿಸಿ ಪತ್ರ ಬರೆದಿದ್ದು ಖುದ್ದು ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಎನ್.ಐ.ಎ. ಯವರು ತನಿಖೆ ನಡೆಸಿದರೆ ಬೇಗ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಸಚಿವೆ ಹೇಳಿದರು.
ಮೊನ್ನೆ ಪ್ರತಿಭಟನೆ ನಡೆಸಿದವರ ಮೇಲೆ ಕೇಸು ದಾಖಲಿಸುವ ಪ್ರಯತ್ನ ನಡೆಯುತ್ತಿದೆ. ಹಾಗೆ ಆದರೆ ಜಿಲ್ಲೆಯಲ್ಲಿ ಬಂದ್ ಮಾಡುತ್ತೇವೆ ಎಂದು ಸಂಬಂಧಿಕರು ಹೇಳಿದರು. ಅವರೆಲ್ಲ ನ್ಯಾಯಕ್ಕಾಗಿ ಆಗ್ರಹಿಸಿದವರು. ಅವರ ಮೇಲೆ ಕೇಸು ದಾಖಲಿಸಬಾರದು ಎಂದು ನೂತನ ಹೇಳಿದರು. ಇಲ್ಲ ಮಾತನಾಡುತ್ತೇನೆ ಎಂದು ಕರಂದ್ಲಾಜೆ ಭರವಸೆ ನೀಡಿದರು.
ಬೆಳ್ಳಾರೆ ಸರಕಾರಿ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ರಾತ್ರಿ ವೈದ್ಯರೂ ಇರುವುದಿಲ್ಲ. ಮೊನ್ನೆ ಅಲ್ಲಿ ರಕ್ತ ಕೊಡುವ ವ್ಯವಸ್ಥೆ ಇದ್ದಿದ್ದರೆ ಅವರು ಬದುಕುತ್ತಿದ್ದರು. ಅವರೇ ಆಸ್ಪತ್ರೆಗೆ ಬೇಕಾಗಿ ತುಂಬ ಹೋರಾಟ ಮಾಡಿದವರು ಎಂದು ನೂತನ ಸಚಿವರಲ್ಲಿ ಹೇಳಿದರು.
ಅಲ್ಲಿದ್ದ ಪ್ರೇಮಚಂದ್ರ ಮತ್ತಿತರರೂ ಆಸ್ಪತ್ರೆ ಅವ್ಯವಸ್ಥೆ ಕುರಿತು ಸಚಿವರ ಗಮನ ಸೆಳೆದರು.
ಬೆಳ್ಳಾರೆಯಲ್ಲಿ ಈಗ ಪೊಲೀಸ್ ಬಂದೋಬಸ್ತ್ ಇದೆ. ಆದರೆ ಅವರೆಲ್ಲ ಒಂದೇ ಕಡೆ ಗುಂಪು ಸೇರಿ ಇರುತ್ತಾರೆ. ಎಲ್ಲ ಕಡೆ ತಿರುಗಾಡುತ್ತಿರಬೇಕು ಎಂದು ಗ್ರಾ.ಪಂ.ಸದಸ್ಯೆ ಭವ್ಯ ಹೇಳಿದರು. ಎಡಿಜಿಪಿ ಜತೆ ಮಾತನಾಡುತ್ತೇನೆ ಎಂದು ಸಚಿವೆ ಹೇಳಿದರು.
ಪ್ರವೀಣ್ ನನ್ನ ಮನೆಯವನ ಹಾಗೆ. ಅದಕ್ಕೆಂದೇ ಸೆಕ್ಯುರಿಟಿ ಬೇಡ, ನನ್ನ ಮನೆಗೆ ಹೋದ ಹಾಗೆ ಎಂದು ಹೇಳಿ ನಾನು ಬಂದಿದ್ದೇನೆ ಎಂದು ಶೋಭಾ ಕರಂದ್ಲಾಜೆ ಹೇಳಿದಾಗ, ಪ್ರವೀಣ್ ನಿಮಗೆ ರಕ್ಷೆ ಕಟ್ಟಿದ್ದ ಮೇಡಂ. ಆದರೆ ಅವರನ್ನೇ ಉಳಿಸಿಕೊಳ್ಳಲಾಗಲಿಲ್ಲ ಎಂದು ಸಂಬಂಧಿಕರು ಹೇಳಿದಾಗ ಸಚಿವೆ ಬೇಸರವಾದರು.
ಇನ್ನೊಮ್ಮೆ ಬರುತ್ತೇನೆ ಎಂದು ನೂತನರಿಗೆ ಕೈಮುಗಿದು ಕರಂದ್ಲಾಜೆ ಎದ್ದಾಗ, ” ನನಗೆ ಸಮಾಧಾನಕ್ಕೋಸ್ಕರ ಬರುವುದು ಬೇಡ ಮೇಡಂ. ಅಪರಾಧಿಗಳಿಗೆ ಶಿಕ್ಷೆಯಾಗಿದೆ ಎಂದು ಹೇಳಲು ಬನ್ನಿ ಎಂದು ನೂತನ ಹೇಳಿದರು.