ಬಿ.ಕೆ.ಹರಿಪ್ರಸಾದ್, ರಮಾನಾಥ ರೈ, ಹರೀಶ್ಕುಮಾರ್ ಉಪಸ್ಥಿತಿ
ಕೆಲ ಸಂಬಂಧಿಕರಿಂದ ಚಕಮಕಿ, ಕಾಂಗ್ರೆಸ್ಗೆ ಧಿಕ್ಕಾರ
ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಇಂದು ಕಾಂಗ್ರೆಸ್ ನಾಯಕರ ನಿಯೋಗವು ಭೇಟಿ ನೀಡಿದ್ದು, ಈ ವೇಳೆ ಹಲವರು ನಾಯಕರನ್ನು ತರಾಟೆಗೆ ತೆಗೆದುಕೊಂಡು ಧಿಕ್ಕಾರ ಕೂಗಿದ ಘಟನೆ ನಡೆಯಿತು.
ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಹರೀಶ್ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಾಂಗ್ರೆಸ್ ನಾಯಕರಾದ ,ಶಶಿಧರ ಹೆಗ್ಡೆ, ರಕ್ಷಿತ್, ಅಭಯಚಂದ್ರ ಜೈನ್, ಕಾವು ಹೇಮನಾಥ ಶೆಟ್ಟಿಎಂ. ಪ್ರತಿಭಾ ಕುಳಾಯಿ, ರಕ್ಷಿತ್ ಶಿವರಾಮ್, ಕವಿತಾ ಸನಿಲ್, ಎಂ.ವೆಂಕಪ್ಪ ಗೌಡ, ಪಿ.ಸಿ.ಜಯರಾಮ್, ಭರತ್ ಮುಂಡೋಡಿ, ಡಾ.ರಘು, ಪಿ.ಎಸ್.ಗಂಗಾಧರ್, ಸಚಿನ್ರಾಜ್ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ ಮೊದಲಾದವರು ಜೊತೆಗಿದ್ದರು.
ಮುಖಂಡರು ಒಳಪ್ರವೇಶಿಸಿದಾಗ ಪ್ರವೀಣ್ ತಂದೆ ತಾಯಿ ನಮಸ್ಕರಿಸಿದರು. ಪತ್ನಿ ನೂತನರವರು ನ್ಯಾಯ ಕೊಡಿಸಿ ಎಂದು ಹೇಳಿದರು. ಮನೆಯವರು ಮಾತನಾಡುತ್ತಿದ್ದಂತೆ ಸಂಬಂಧಿ ಜಯರಾಮರವರು ಇಷ್ಟು ದಿನ ಕಳೆದ ಮೇಲೆ ಯಾಕೆ ಬಂದಿದ್ದೀರಿ? ನೀವು ಇದೇ ಜಿಲ್ಲೆಯವರಲ್ಲವೇ? ಎಂದು ರಮಾನಾಥ ರೈಯವರನ್ನು ಪ್ರಶ್ನಿಸಿದರು. ಆಗ ರೈಗಳು, ಅವರು ಮಾತನಾಡುತ್ತಿದ್ದಾರೆ, ಮಾತನಾಡಲಿ ಎಂದರು. ಇಷ್ಟು ದಿನ ನಾವೇ ಇಲ್ಲಿದ್ದದ್ದು ಎಂದು ಜಯರಾಮರು ಹೇಳುತ್ತಾ ಹೊರಗೆ ಬಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಳ್ಳತೊಡಗಿದರು. ಇವರಿಗೆ ನಾಳೆ ಜಾಮೀನು ಕೊಡಿಸುವವರು ನೀವೇ ಅಲ್ಲವೇ ಎಂದು ಕೆಲವರು ತರಾಟೆಗೆತ್ತಿಕೊಳ್ಳತೊಡಗಿದರು. ಒಳಗೆ ಮನೆಯವರೊಂದಿಗೆ ಮುಖಂಡರು ಹೊರಗೆ ಬಂದ ಬಳಿಕ ಬಿ.ಕೆ.ಹರಿಪ್ರಸಾದ್ ಮಾಧ್ಯಮದವರನ್ನುದ್ದೇಶಿಸಿ ಮಾತನಾಡುತ್ತಿದ್ದಂತೆ ಕೆಲವರು ಕಾಂಗ್ರೆಸ್ಗೆ ಧಿಕ್ಕಾರ ಎಂದು ಘೋಷಣೆ ಕೂಗತೊಡಗಿದರು.