ಗ್ರಾಮಸ್ಥರ ಮತ್ತು ಸಂಘಟನೆಯ ಮನವಿಗೆ ಸ್ಪಂದಿಸಿದ ಸುಳ್ಯ ತಾಲೂಕು ಆಡಳಿತ

0

ಮುರಿದು ಬೀಳುವ ಸ್ಥಿತಿಯಲ್ಲಿದ್ದ ಕಾಲು ಸಂಕವನ್ನು ದುರಸ್ತಿಗೊಳಿಸಿದ ಸ್ಥಳೀಯ ಗ್ರಾಮ ಪಂಚಾಯತ್

ಸುಳ್ಯ ತಾಲೂಕು ಮರ್ಕಂಜ ಮತ್ತು ಅರಂತೋಡು ಗ್ರಾಮಕ್ಕೆ ಸಂಬಂಧಪಟ್ಟ ಅರಮನೆಗಯ ಎಂಬಲ್ಲಿ ಪರಿಶಿಷ್ಟ ಪಂಗಡದ 30 ಮನೆಗಳಿದ್ದು ಅಲ್ಲಿಯ ತೂಗು ಸೇತುವೆ ಸಂಪೂರ್ಣ ಶಿಥಿಲಗೊಂಡು ಮುರಿದು ಬೀಳುವ ಪರಿಸ್ಥಿತಿ ಉಂಟಾಗಿತ್ತು.
ಇದರಿಂದ ಸ್ಥಳೀಯ ಕಾಲೋನಿ ನಿವಾಸಿಗಳಿಗೆ ಮಳೆಗಾಲದ ಸಂದರ್ಭ ಮತ್ತು ಇತರ ಸಂದರ್ಭದಲ್ಲಿ ಸಂಕದ ಮೇಲೆ ನಡೆದಾಡಲು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಇದರ ಬಗ್ಗೆ ಹಲವಾರು ಸಮಯಗಳಿಂದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಮಾಹಿತಿ ನೀಡಿದ್ದರು ಪ್ರಯೋಜನವಿರಲಿಲ್ಲ ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದರು.

(ದುರಸ್ತಿಯ ಮೊದಲು)

(ದುರಸ್ತಿಯ ನಂತರ)
ಇದರ ಬಗ್ಗೆ ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಸ್ಥಳೀಯರು ದೂರು ನೀಡಿದ್ದು, ತಕ್ಷಣ ಸ್ಪಂದಿಸಿದ ಸಂಘದ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ಮತ್ತು ಜಿಲ್ಲಾ ಸಂಚಾಲಕ ಪರಮೇಶ್ವರ ಕೆಮ್ಮಿಂಜೆ ಇವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ನಂತರ ಸಂಬಂಧಪಟ್ಟ ಇಲಾಖೆಗೆ ಮಾಧ್ಯಮದ ಮೂಲಕ ಮನವಿ ಮಾಡಿದ್ದರು.


ಇದಕ್ಕೆ ಸ್ಪಂದಿಸಿದ ಸುಳ್ಯ ತಹಶೀಲ್ದಾರ್ ಕು.ಅನಿತಾ ಲಕ್ಷ್ಮಿ ರವರು ಅರಂತೋಡು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ತಕ್ಷಣವೇ ತೂಗು ಸೇತುವೆಯ ದುರಸ್ತಿ ಮಾಡಿಕೊಡಲು ಹೇಳಿರುತ್ತಾರೆ.

ಕೂಡಲೇ ಕಾರ್ಯಪ್ರವೃತ್ತರಾದ  ಅರಂತೋಡು ಗ್ರಾಮ ಪಂಚಾಯಿತಿನವರು ಅರಮನೆಗಯ ತೂಗು ಸೇತುವೆಯನ್ನು ದುರಸ್ತಿ ಮಾಡಿ ಅಗಸ್ಟ್ 16ರಂದು ನಡೆದಾಡಲು ಅನುವು ಮಾಡಿಕೊಟ್ಟಿದ್ದಾರೆ. ಕಾಲು ಸಂಕ ದುರಸ್ತಿಗೊಳಿಸಿ ಕೊಟ್ಟ ಅಧಿಕಾರಿಗಳ ಮತ್ತು ಗ್ರಾಮಸ್ಥರ ಪರವಾಗಿ ನಿಂತ ಅಂಬೇಡ್ಕರ್ ರಕ್ಷಣಾ ವೇದಿಕೆಯ ಕಾರ್ಯಕ್ಕೆ ಗ್ರಾಮಸ್ಥರು ಪ್ರಸಂಶನೆಯನ್ನು ವ್ಯಕ್ತಪಡಿಸಿದ್ದಾರೆ.