ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

0

 

ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ್ ಚತುರ್ಥಿ ಹಬ್ಬದ ಅಂಗವಾಗಿ ಇಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಹಬ್ಬ ಆಚರಣೆ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳ ಜೊತೆ ಶಾಂತಿ ಸಭೆ ನಡೆಸಲಾಯಿತು.

 


ಸಭೆಯ ನೇತೃತ್ವವನ್ನು ವಹಿಸಿದ್ದ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಪ್ರಸ್ತುತ ಪರಿಸ್ಥಿತಿಗಳಿಗೆ ಅನುಗುಣವಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದ್ದು ಹಬ್ಬ ಆಚರಣೆಯ ಸಂದರ್ಭ ಮೆರವಣಿಗೆ ಮತ್ತು ಗಣೇಶ ವಿಸರ್ಜನೆ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಬ್ಬ ಆಚರಣೆ ಮಾಡುವ ಕುರಿತು ಮಾಹಿತಿಗಳನ್ನು ನೀಡಿದರು.
ಅಷ್ಟಮಿ ಮತ್ತು ಗಣೇಶೋತ್ಸವ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಯೋಜಕರು ವಹಿಸಿಕೊಳ್ಳಬೇಕೆಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ನದಿಯ ನೀರು ಹೆಚ್ಚಾಗಿ ಹರಿಯುತ್ತಿದ್ದು ರಾತ್ರಿ ಸಮಯ ಗಣೇಶ ವಿಸರ್ಜನೆ ಮಾಡುವಾಗ ಎಚ್ಚರಿಕೆ ವಹಿಸಿಕೊಳ್ಳುವಂತೆ ಮತ್ತು ಈಜು ತಜ್ಞರ ನೆರವಿನಿಂದ ಗಣಪತಿ ವಿಸರ್ಜನಾ ಕಾರ್ಯಕ್ರಮ ಮಾಡಬೇಕೆಂದು ಹೇಳಿದರು.
ಹಬ್ಬ ಆಚರಣೆಯ ಸಂದರ್ಭದಲ್ಲಿ ಇತರರಿಗೆ ಸಮಸ್ಯೆ ಉಂಟಾಗುವಂತೆ ಯಾವುದೇ ಚಟುವಟಿಕೆಗಳು ಆಗದಂತೆ ನೋಡಿಕೊಳ್ಳಬೇಕೆಂದು ಅವರು ಹೇಳಿದರು.
ಹಬ್ಬದ ಕುರಿತು ಅಳವಡಿಸಲಾಗುವ ಪೋಸ್ಟರ್ ಮತ್ತು ಬಂಟಿಂಗ್ಸ್ ಗಳನ್ನು ಕಾರ್ಯಕ್ರಮ ಕಳೆದು ಕೂಡಲೆ ತೆರವುಗೊಳಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮಗಳ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲು ಹೇಳಿದ ಅವರು ಅದರಿಂದ ಇಲಾಖೆಗೆ ಉಪಯುಕ್ತ ಮಾಹಿತಿಗಳು ಲಭ್ಯವಾಗುತ್ತದೆ ಎಂದು ಹೇಳಿದರು.
ಮೆರವಣಿಗೆಯಲ್ಲಿ ವಾಹನವನ್ನು ಹೆಚ್ಚಾಗಿ ಬಳಸದಂತೆ, ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರುಗಳನ್ನು ನೇಮಿಸಿಕೊಳ್ಳುವಂತೆ ಹೇಳಿದರು.
ವೇದಿಕೆಯಲ್ಲಿ ಅಪರಾಧ ವಿಭಾಗದ ಎಸ್ ಐ ರತ್ನಕುಮಾರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಮುಖಂಡರುಗಳಾದ ಬೂಡು ರಾಧಾಕೃಷ್ಣ, ಸುನಿಲ್ ಕೆರ್ಪಳ, ಶಿವನಾಥ ರಾವ್ ಹಳೆಗೇಟು, ಶ್ರೀನಿವಾಸ್ ರಾವ್, ವೆಂಕಟರಮಣ ಪೇರಾಲು, ರತ್ನಾಕರರೈ, ದೇವಿ ಪ್ರಸಾದ್ ಎಸ್, ಗುರುದತ್ ಶೇಟ್, ಸೋಮಶೇಖರ ಪೈಕ, ಕೆ ಸೋಮನಾಥ ಪೂಜಾರಿ, ವಸಂತ ಮುಳ್ಯ, ಕಮಲಾಕ್ಷ ರೈ, ಸರಸ್ವತಿ ಬೋಳಿಯ ಮಜಲು ಹಾಗೂ ಇನ್ನೂ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.
ಪ್ರಸ್ತುತ ಸಮಯ ಅಲ್ಪ ಮಟ್ಟಿಗೆ ಬಿಗುವಿನಿಂದ ಕೂಡಿದ್ದು ಸಾಧ್ಯವಾದಷ್ಟು ಸಂಜೆಯ ಒಳಗಾಗಿ ಕಾರ್ಯಕ್ರಮಗಳನ್ನು ಮುಗಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.