ಆರ್ ಜೆ ತ್ರಿಶೂಲ್ ವಿರುದ್ಧ ವಿನಯ ಕಂದಡ್ಕ ದೂರು

0

 

ವಿಚಾರಣೆಗೆ ಬರುವಂತೆ ಪೋಲೀಸರಿಂದ ತ್ರಿಶೂಲ್ ಗೆ ಬುಲಾವ್

 

ದೂರವಾಣಿ ಕರೆ ಮಾಡಿ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅದರಲ್ಲಿ ಅವಾಚ್ಯವಾಗಿ ಕಮೆಂಟ್ ಹಾಕಿಸಿದ್ದಾರೆಂದು ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ರವರು ಆರ್.ಜೆ. ತ್ರಿಶೂಲ್ ವಿರುದ್ಧ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ. ಈ ದೂರಿನ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಪೊಲೀಸರು ಆರ್ ಜೆ ತ್ರಿಶೂಲಿಗೆ ಬುಲಾವ್ ನೀಡಿರುವುದಾಗಿ ತಿಳಿದು ಬಂದಿದೆ.

ಸುಳ್ಯದ ಶ್ರೀರಾಂ ಪೇಟೆಯಿಂದ ಜೂನಿಯರ್ ಕಾಲೇಜ್ ಗೆ ತಿರುಗುವ ರಸ್ತೆಯ ಜಂಕ್ಷನ್ ನಲ್ಲಿ ದೊಡ್ಡ ಗುಂಡಿಗಳಾಗಿದ್ದು ಈ ಕುರಿತು ಆರ್.ಜೆ. ತ್ರಿಶೂಲ್ ರವರು ಇತ್ತೀಚೆಗೆ ರಸ್ತೆ ಅವ್ಯವಸ್ಥೆಯ ಕುರಿತು ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಇದು ವ್ಯಾಪಕ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕರು ‘ಕೀ ಬೋರ್ಡ್ ವಾರಿಯರ್’ ಎಂದು‌ ಕಮೆಂಟ್ ಹಾಕಿದ್ದರು. ಇದರಿಂದ ಅಸಮಾಧಾನ ಗೊಂಡ ತ್ರಿಶೂಲ್ ತಮ್ಮ ಫೇಸ್ ಬುಕ್ ನಲ್ಲಿ ‘ನಾನು ಸಮಸ್ಯೆಯೊಂದಿಗೆ ಬರುತ್ತೇನೆ. ಲೈವ್ ನಲ್ಲಿ ಉತ್ತರಿಸಿ ಎಂದು ನ.ಪಂ. ಅಧ್ಯಕ್ಷ ರಿಗೆ ಸವಾಲೆಸೆದರು. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತಲ್ಲದೆ, ತ್ರಿಶೂಲ್ ರನ್ನು ಬೆಂಬಲಿಸಿ ಹಲವರು ಕಮೆಂಟ್ ಹಾಕಿದ್ದರು.

ಆ.14 ರಂದು ತ್ರಿಶೂಲ್ ರವರು ನ.ಪಂ. ಅಧ್ಯಕ್ಷ ವಿನಯ ಕಂದಡ್ಕರಿಗೆ ದೂರವಾಣಿ ಕರೆ ಮಾಡಿ ಸವಾಲು ಸ್ವೀಕರಿಸುವಂತೆ ಕೇಳಿಕೊಂಡಿದ್ದರು. ಅವರಿಬ್ಬರ ಫೋನ್ ಸಂಭಾಷಣೆಯ ಆಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿತ್ತು.

ಆ.19 ರಂದು ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರು ಪೋಲೀಸ್ ಠಾಣೆಯಲ್ಲಿ ತ್ರಿಶೂಲ್ ವಿರುದ್ಧ ದೂರು ನೀಡಿದ್ದು, ನನ್ನ ಅನುಮತಿಯಿಲ್ಲದೇ ಆಡಿಯೋ ರೆಕಾರ್ಡ್ ಮಾಡಿ ಫೇಸ್ಬುಕ್ ನಲ್ಲಿ ಪ್ರಸಾರ ಮಾಡಿ ಅವರ ಸ್ನೇಹಿತರಿಂದ ಅವಾಚ್ಯ ವಾಗಿ ಕಾಮೆಂಟ್ ಹಾಕಿಸಿದ್ದಾರೆಂದು ದೂರಿನಲ್ಲ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ದೂರಿನ ಹಿನ್ನಲೆಯಲ್ಲಿ ಪೋಲೀಸರು ತ್ರಿಶೂಲ್ ಗೆ ಫೋನ್ ಮಾಡಿ ವಿಚಾರಣೆ ಗಾಗಿ ಠಾಣೆಗೆ ಬರುವಂತೆ ಬುಲಾವ್ ನೀಡಿರುವುದಾಗಿ ತಿಳಿದುಬಂದಿದೆ.