ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸಕ್ಕೆ ಬಿಜೆಪಿ ಅಡ್ಡಿ : ಖಂಡನೆ

0

 

ಮಾಜಿ ಮುಖ್ಯಮಂತ್ರಿ, ಕರ್ನಾಟಕ ವಿಧಾನ ಸಭಾ ವಿಪಕ್ಷ ನಾಯಕ ಸನ್ಮಾನ್ಯ ಸಿದ್ದರಾಮಯ್ಯರವರು ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಮಳೆ ಹಾನಿಯ ಬಗ್ಗೆ ವೀಕ್ಷಣೆಗೆ ಬಂದ ಸಂದರ್ಭದಲ್ಲಿ ಆಡಳಿತ ಪಕ್ಷವಾದ ಬಿಜೆಪಿ ಕಾರ್ಯಕರ್ತರು ಘೇರಾವ್ ಮಾಡಿ ಹೇಯಕೃತ್ಯ ವನ್ನೆಸಗಿದ್ದಾರೆ. ಪೊಲೀಸ್ ಇಲಾಖೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದು ಜೊತೆಗೆ ಅಲ್ಲಿನ ಪೊಲೀಸರು ಬಿಜೆಪಿಯ ಕಾರ್ಯಕರ್ತರಂತೆ ವರ್ತಿಸಿರುವುದು ಸಂವಿಧಾನಕ್ಕೆ ಮಾಡುತ್ತಿರುವ ದೊಡ್ಡ ಅಪಮಾನವಾಗಿದೆ ಇಂತಹ ಬೆಳವಣಿಗೆಯನ್ನು ಯಾವತ್ತು ನಾವು ಸಹಿಸಲು ಸಾಧ್ಯವಿಲ್ಲ. ಸಮೃದ್ಧ ಕರ್ನಾಟಕವಾಗಬೇಕಿರುವ ರಾಜ್ಯ ಬಿಜೆಪಿಯಿಂದಾಗಿ ಗೂಂಡಾ ರಾಜ್ಯವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇತ್ತೀಚೆಗೆ ನಡೆದ ಸ್ವಾತಂತ್ರೋತ್ಸವದ ನಡಿಗೆ ಮತ್ತು ಸಿದ್ದರಾಮಯ್ಯೋತ್ಸವ ಕಾರ್ಯಕ್ರಮದಲ್ಲಿ ಸೇರಿದ ಜನಸ್ತೋಮದಿಂದ ಸೋಲು ಖಚಿತ ಎಂಬ ಭಾವನೆಯನ್ನು ಇಟ್ಟುಕೊಂಡು ಬಿಜೆಪಿ ಪಕ್ಷ ತನ್ನ ಕಾರ್ಯಕರ್ತರಿಂದ ಇಂತಹ ಹೀನ ಕೃತ್ಯಕ್ಕೆ ಇಳಿಯ ತೊಡಗಿದೆ.
ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರಿಗೆ ಇಂದು ಅಡ್ಡಗಟ್ಟಿರುವ ದುಷ್ಕರ್ಮಿಗಳನ್ನು ಲಜ್ಜೆಗೆಟ್ಟ ಬಿಜೆಪಿ ಸರಕಾರ ತಕ್ಷಣವೇ ಬಂಧಿಸಬೇಕು. ದೇಶಕ್ಕಾಗಿ ಪ್ರಾಣ ವನ್ನೇ ತ್ಯಾಗ ಮಾಡಿದ ವೀರ ಯೋಧರ ನಾಡಿಗೆ ಕಳಂಕ ತರತಕ್ಕಂತಹ ಕೃತ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ಹಿಂದುತ್ವದ ಪರ ಎಂದು ಹೇಳಿಕೊಳ್ಳುವ ಬಿಜೆಪಿ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಬರತಕ್ಕಂತಹ, ಗಣೇಶ ಚತುರ್ಥಿ, ಮಡಿಕೇರಿ ದಸರಾ ದಂತಹ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಈ ರೀತಿಯ ಹಿಂಸಾತ್ಮಕ ಕೃತ್ಯಗಳನ್ನು ನಡೆಸಿದರೆ, ಧಾರ್ಮಿಕ ಉತ್ಸವಗಳಿಗೆ ಅಡಚಣೆಯನ್ನು ನಿರ್ಮಾಣ ಮಾಡಿ, ನಾಡಿನ ಶಾಂತಿಗೆ ಭಂಗ ತರುವ ಪ್ರವೃತ್ತಿ ನಿರ್ಮಾಣ ವಾಗಿ ಇದರಿಂದ ಜನಸಾಮಾನ್ಯರಿಗೆ ಭಯದ ವಾತಾವರಣ ನಿರ್ಮಾಣವಾಗಬಹುದು. ಮುಂದಿನ ದಿನಗಳಲ್ಲಿ ಇಂತಹ ಹೇಯ ಕೃತ್ಯವನ್ನು ಖಂಡಿಸುವುದಲ್ಲದೆ, ಇಂತಹ ಹೇಯ ಕೃತ್ಯವನ್ನು ನಡೆಸುವವರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸುವುದಾಗಿ ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಗೋಕುಲ್ ದಾಸ್, ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಅಡಿಂಜ, ಬ್ಲಾಕ್ ಮಾಧ್ಯಮ ಸಂಯೋಜಕ ಭವಾನಿಶಂಕರ್ ಕಲ್ಮಡ್ಕ, ಆಲೆಟ್ಟಿ ಗ್ರಾ. ಪಂ. ಮಾಜಿ ಸದಸ್ಯ ರಾಧಾಕೃಷ್ಣ ಪರಿವಾರಕಾನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.