ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ

0

 

ಧರ್ಮ ಜಾಗೃತಿಯೊಂದಿಗೆ ಸಂಘಟನೆ ಗಟ್ಟಿಗೊಳ್ಳಲಿ : ಎಸ್.ಅಂಗಾರ

 ಮೌಲ್ಯ-ಧರ್ಮದ ಪ್ರಜ್ಞೆ ಮುಖ್ಯ : ರಾಧಾಕೃಷ್ಣ ಕಲ್ಚಾರ್

 ನೈಜ ಆಚಾರ ವಿಚಾರಗಳನ್ನು ತಿಳಿಸಿ : ಪ್ರವೀಣ್ ಕುಮಾರ್

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-2022 ಇದರ ವತಿಯಿಂದ ಜರಗುವ
ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಸೆ.1ರಂದು ಧಾರ್ಮಿಕ ಸಭಾ ಕಾರ್ಯಕ್ರಮ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಸಭಾ ಭವನದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ
ರಾಜ್ಯ ಬಂದರು ,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ರವರು ಮಾತನಾಡಿ “ನಮ್ಮ ಹಿರಿಯರು ಧರ್ಮ ರಕ್ಷಣೆಗಾಗಿ ಸಂಘಟನೆಗಾಗಿ ಅದೆಷ್ಟೋ ಹೋರಾಟಗಳನ್ನು ನಡೆಸಿ ಕಷ್ಟಗಳನ್ನುಅನುಭವಿಸಿದ್ದಾರೆ.

ಅವುಗಳನ್ನು ರಕ್ಷಿಸಿ ಕೊಂಡು ಹೋಗುವ ಕಾರ್ಯ ನಮ್ಮದು.ಗಣೇಶೋತ್ಸವದಂತ ಆಚರಣೆಗಳು ನಮ್ಮನ್ನು ಒಗ್ಗೂಡಿಸಿ ಗಟ್ಟಿಯಾಗಿ ಸಂಘಟಿತರಾಗಲು ಕಾರಣ ಆಗುತ್ತದೆ”ಎಂದು ಹೇಳಿದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯ ಅಧ್ಯಕ್ಷ ಜಯರಾಮ ಕಲ್ಲಾಜೆ ಸಭಾಧ್ಯಕ್ಷತೆ ವಹಿಸಿದ್ದರು.


ಯಕ್ಷಗಾನ ಅರ್ಥಧಾರಿ ಮತ್ತು ಬರಹಗಾರ ರಾಧಾಕೃಷ್ಣ ಕಲ್ಚಾರ್ ವಿಟ್ಲ ಉಪನ್ಯಾಸ ನೀಡಿ
“ಸಮಾಜಕ್ಕೆ ಕೊಡುಗೆಯಾಗಿ ಕೊಡಬಲ್ಲ ನಮ್ಮ ಮಕ್ಕಳ ದೃಷ್ಟಿಕೋನ ಹೇಗೆ ರೂಪಿಸುತ್ತವೆ ಎಂಬುದರ ಕುರಿತು ನಾವು ಗಂಭೀರವಾಗಿ ಯೋಚಿಸ ಬೇಕಾಗುತ್ತದೆ. ತಂದೆ ತಾಯಿ ಹೇಗೆ ಇದ್ದಾರೋ ಮಕ್ಕಳು ಕೂಡ ಹಾಗೆ ಬೆಳೆಯುತ್ತಾರೆ. ಮಕ್ಕಳು ನಮ್ಮ ಮಾತು ಕೇಳುತ್ತಿಲ್ಲ ಎಂದರೆ ಅದಕ್ಕೆ ಅರ್ಥವಿಲ್ಲ. ಅವರಿಗೆ ಮಾತು ಕೇಳಿಸುವಷ್ಟು ಯೋಗ್ಯತೆ ನಮಗಿಲ್ಲ ಎಂದು ಸಾರ್ವಜನಿಕವಾಗಿ ನಾವು ಒಪ್ಪಿಕೊಂಡಂತೆ. ಆದರಿಂದ ಮುಂದಿನ ತಲೆಮಾರನ್ನು ರೂಪಿಸುವಾಗ ಮೌಲ್ಯ ಪ್ರಜ್ಞೆ ಧರ್ಮ ಪ್ರಜ್ಞೆ ಮುಖ್ಯವಾಗಿದೆ. ಇಂತಹ ಸಾಮೂಹಿಕ ಆಚರಣೆ, ಉತ್ಸವಗಳಿಂದ ಎಲ್ಲರೂ ಒಂದಾಗಿ ನ್ಯಾಯ, ನೀತಿ,ಸತ್ಯ,ಧರ್ಮದ ಪರವಾಗಿ ಧ್ವನಿಯಾಗಿ ನಿಂತಾಗ ಮುಂದಿನ ತಲೆಮಾರಿಗೂ ನಾಡು ಸಮೃದ್ಧಿಯಾಗಿ ಬೆಳೆಯುವುದು” ಎಂದು ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನೆ ನಿರ್ದೇಶಕ ಪ್ರವೀಣ್ ಕುಮಾರ್ ಬಹುಮಾನ ವಿತರಣೆ ಮಾಡಿದರು.ಬಳಿಕ ಅವರು ಮಾತನಾಡಿ”ಆಚರಣೆಗಳು ಕೇವಲ ಸಂಭ್ರಮಕ್ಕೆ ಮಾತ್ರ ಸೀಮಿತವಾಗಿರ ಕೂಡದು. ಆಚರಣೆಗಳಿಂದ ಧರ್ಮ ಜಾಗೃತಿ ಆಗ ಬೇಕು. ಎಲ್ಲರೂ ಒಂದಾಗಿ ಬೆರೆತು ನಮ್ಮ ಮುಂದಿನ ಪೀಳಿಗೆಗೆ ನಮ್ಮ ನೈಜ ಆಚಾರ ವಿಚಾರಗಳನ್ನು
ತಿಳಿಯ ಪಡಿಸುವ ಕಾರ್ಯ ‌ ನಮ್ಮಿಂದ ಆಗಬೇಕು.” ಎಂದು ಹೇಳಿದರು.ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ಸಾರ್ವಜನಿಕ ಆರಾಧನಾ ಸಮಿತಿ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ, ಉತ್ಸವ ಸಮಿತಿ ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ರಮ್ಯಾ ದಿಲೀಪ್ ಬಾಬ್ಲುಬೆಟ್ಟು ಪ್ರಾರ್ಥಿಸಿದರು.ಚಿನ್ನಪ್ಪ ಸಂಕಡ್ಕ ಸ್ವಾಗತಿಸಿದರು. ಸಾರ್ವಜನಿಕ ಆರಾಧನಾ ಸಮಿತಿ ಉಪಾಧ್ಯಕ್ಷ ಸವಿತಾರ ಮುಡೂರು ಪ್ರಾಸ್ತಾವಿಕ ಮಾತನಾಡಿದರು.ಕೌಶಿಕ್ ಕುಳ ನಿರೂಪಿಸಿದರು.ಸತೀಶ್ ಪಂಜ ಸ್ಪರ್ಧಾ ಕಾರ್ಯಕ್ರಮಗಳ ವಿಜೇತರ ಪಟ್ಟಿ ವಾಚಿಸಿದರು.ವಾಸುದೇವ ಮೇಲ್ಪಾಡಿ ವಂದಿಸಿದರು.
ಸೆ.1. ರಂದು ಪೂರ್ವಾಹ್ನ ಬೆಳಗಿನ ಪೂಜೆ, ನಾಗತೀರ್ಥ ಪಂಚಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಸಂಜೆ ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಿಂದ ಭಜನಾ ಸಂಕೀರ್ತನೆ. ರಾತ್ರಿ ಮಹಾ ಪೂಜೆ, ಪ್ರಸಾದ ವಿತರಣೆ ಜರುಗಿತು .

ಸಾಂಸ್ಕೃತಿಕ ಸಂಭ್ರಮ: ಸಾಂಸ್ಕೃತಿಕ ಸಂಭ್ರಮದಲ್ಲಿ ಗಾನ ವೈಭವ ಜರುಗಿತು ದಿನೇಶ್ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಪ್ರಶಾಂತ್ ರೈ ಪಂಜ, ರಚನಾ ಚಿದ್ಗಲ್ಲು ಹಾಡುಗಾರಿಕೆಯಲ್ಲಿ, ಆನಂದ ಪಡ್ರೆ ಚೆಂಡೆ ಮತ್ತು ಚಂದ್ರಶೇಖರ ಗುರುವಾಯನ ಕೆರೆ ಮದ್ದಲೆಯಲ್ಲಿ ಪಾಲ್ಗೊಂಡಿದ್ದರು.ಕುಸಲ್ದ ರಂಗ ಮಾಣಿಕ್ಯ ಸುಕೇಶ್ ಶೆಟ್ಟಿ ಪಡುಪದವು ನಿರ್ದೇಶನದ ರಂಗ ಕೇಸರಿ ರಮೇಶ್ ರೈ ಕುಕ್ಕುವಳ್ಳಿ ಸಾರಥ್ಯದ ಜೈ ಮಾತಾ ಕಲಾತಂಡ ತೆಲಿಕೆದ ಕಲಾವಿದರು ಮಂಗಳೂರು ಪ್ರಸ್ತುತಿಯ “ಒಂತೆ ಕಾಪುಲೆ”ತುಳು ನಾಟಕ ಪ್ರದರ್ಶನ ಗೊಂಡಿತು.

ಸೆ.2:ಶೋಭಾಯಾತ್ರೆ-ಜಲಸ್ತಂಭನ

ಸೆ. 2ರಂದು ಪೂರ್ವಾಹ್ನ ಗಂಟೆ 8:30 ರಿಂದ ಬೆಳಗಿನ ಪೂಜೆ, ಅಡ್ಡಬೈಲು ಶ್ರೀ ಕೃಷ್ಣ ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.ಸಂಜೆ ಗಂಟೆ 3ರಿಂದ ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ನಾಗತೀರ್ಥ ಸಂಗಮದಲ್ಲಿ ಜಲಸ್ತಂಭನ ಜರಗಲಿದೆ.