ಲಡಾಖಿನ ತುದಿಗೆ ಹೊರಟ ಮಂಗಳೂರಿನ ರ‍್ಯಾಲಿ – ವಿಶ್ವದ ಎತ್ತರಕ್ಕೆ ಏರಲಿದೆ ‘ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕ

0

 

ಅಮರ ಸುಳ್ಯ ಕ್ರಾಂತಿಯ ಕುರಿತು ದೇಶದೆಲ್ಲೆಡೆ ಅರಿವು ಮೂಡಿಸಲು ಹಮ್ಮಿಕೊಂಡಿರುವ ‘ಟೀಂ ಸ್ಕ್ರೂ ರೈಡರ್ಸ್’ ಅವರ ಬೈಕ್ ರ‍್ಯಾಲಿಗೆ ಸೆಪ್ಟೆಂಬರ್ 17ರಂದು ಮಂಗಳೂರಿನ ತುಳು ಭವನದಲ್ಲಿ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್ಸಾರ್ ಚಾಲನೆ ನೀಡಿದರು.

 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ ರಿ ಕಾಲಿಂಗ್ ಅಮರ ಸುಳ್ಯ ಕೃತಿಯ ಲೇಖಕ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರ ಈ ದಾಖಲಾಧಾರಿತ ಪುಸ್ತಕವನ್ನು ನೀಡುವ ಮೂಲಕ ದೇಶದೆಲ್ಲೆಡೆ ತುಳುನಾಡ ಅಮರ ಸುಳ್ಯ ಕ್ರಾಂತಿಯಲ್ಲಿ ಮಡಿದ ವೀರ ತುಳುವರ ಯಶೋಗಾಥೆಯು ಪಸರಿಸುವಲ್ಲಿ ಸ್ಕ್ರೂ ರೈಡರ್ಸ್ ತಂಡವು ಯಶಸ್ವಿಯಾಗಲಿ ಎಂದು ಹರಸಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ಅವರು “ತುಳುವಿಗಾಗಿ ವಿವಿಧ ರೀತಿಯಲ್ಲಿ ಅನೇಕರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕೆಲವರು ಯಕ್ಷಗಾನದ ಮೂಲಕ, ಲಿಪಿಗಾಗಿ ಶ್ರಮಿಸುವ ಮೂಲಕ, ಈ ಪುಸ್ತಕದ ವಿಷಯದಂತೆಯೇ ಅಧ್ಯಯನದ ಮೂಲಕ, ಹೀಗೇ ಮಾತೃ ಸ್ಥಾನದಲ್ಲಿರುವ ತುಳುವಿಗೆ ಅವರವರ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ತುಳುವಿಗಾಗಿ ನಮ್ಮೆಲ್ಲರ ಗುರಿ ಒಂದೇ ಆಗಿರುವ ಕಾರಣ, ಯುವ ಪ್ರತಿಭೆಗಳನ್ನು ಸರಿ ದಿಕ್ಕಿನಲ್ಲಿ ಮುನ್ನಡೆಯಲು ಪ್ರೋತ್ಸಾಹಿಸಬೇಕು” ಎಂದು ಹೇಳಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗರ ಸೇವಾ ಸಂಘ, ಮಂಗಳೂರು ಇದರ ಜಿಲ್ಲಾಧ್ಯಕ್ಷರಾದ ಲೋಕಯ್ಯ ಗೌಡ ಕೆ., ತುಳು ಪರ ಹೋರಾಟಗಾರರಾದ ರೋಶನ್ ರೆನೋಲ್ಡ್ ಹಾಗೂ ‘ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕದ ಲೇಖಕರಾದ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರು ಭಾಗವಹಿಸಿದರು. ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ, ಸಮಾಜರತ್ನ ತಾರಸಿ ಕೃಷಿಕ ಡಾ. ಕೃಷ್ಣಪ್ಪ ಗೌಡ ಪಡ್ಡಂಬೈಲು, ಲೇಖಕ ವಿಶ್ವನಾಥ ಕೋಟೆಕಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ಕ್ರೂ ರೈಡರ್ಸ್ ತಂಡದ ವಿನೀತ್ ಬಿ. ಶೆಟ್ಟಿ, ಅಭಿಷೇಕ್ ಶೆಟ್ಟಿ, ವಿನೀತ್ ಶೆಟ್ಟಿ, . ದೀಪಕ್ ಕರ್ಕೇರ, ರೋವಿಲ್ ಅಲ್ಮೈಡ ಹಾಗೂ ಶಮೂನ್ ಮೊಹಮ್ಮದ್ ಅವರನ್ನು ಸನ್ಮಾನಿಸಲಾಯಿತು.

ಜೈ ತುಳುನಾಡ್ ಸಂಘಟನೆಯ ತುಳು ಲಿಪಿ ಶಿಕ್ಷಕಿ ಗೀತಾ ಲಕ್ಷ್ಮಿಶ್ ಕಾರ್ಯಕ್ರಮ
ನಿರೂಪಿಸಿದರು.