ಶೇಣಿ: ಬಡ ವೃದ್ಧ ದಂಪತಿಗೆ ಮನೆ ನಿರ್ಮಿಸಲು ಆಸರೆಯಾಗುತ್ತಿರುವ ಶೌರ್ಯ ವಿಪತ್ತು ನಿರ್ವಹಣಾ ಘಟಕ

0

 

 

ಅಮರಪಡ್ನೂರು ಗ್ರಾಮದ ಶೇಣಿ ಕಲ್ಮಲೆ ಎಂಬಲ್ಲಿ ಹಲವಾರು ವರುಷಗಳಿಂದ ವಾಸವಿರುವ ಬಡ ದಂಪತಿಯ ಮುರುಕಲು ಮನೆಗೆ ಮುಕ್ತಿ ನೀಡಿ ಹೊಸ ಮನೆಯ ನಿರ್ಮಾಣಕ್ಕೆ ಅಡಿಪಾಯದ ಕಾರ್ಯದ ಮೂಲಕ ಆಸರೆಯಾಗಿ ನಿಲ್ಲಲು ಮುಂದಾಗಿದೆ ದೊಡ್ಡತೋಟ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಯುವ ಪಡೆ.
ಗಂಗು ಮತ್ತು ನಾರಾಯಣ ಮುಗೇರ ಬಡ ವೃದ್ಧ ದಂಪತಿಯ ಮುರುಕಲು ಮನೆಯ ನರಕದ ವಾಸವಿರುವ ಬಗ್ಗೆ ಈ ಹಿಂದೆ ಪತ್ರಿಕೆಯಲ್ಲಿ ಸುದ್ದಿಯಾಗಿತ್ತು. ಆ ಸಂದರ್ಭದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರು ಹಾಗೂ ವಿಪತ್ತು ಘಟಕದವರು ಮುಂದೆ ತಾತ್ಕಾಲಿಕ ಟರ್ಪಾಲು ಹೊದಿಸಿ ನೀರು ಸೋರದಂತೆ ವ್ಯವಸ್ಥೆ ಮಾಡಿದ್ದರು. ವಸತಿ ಯೋಜನೆಯಡಿ ಪಂಚಾಯತ್ ನಿಂದ ಪ್ರಥಮ ಆದ್ಯತೆಯಲ್ಲಿ ಮನೆ ಮಂಜೂರಾಗಿತ್ತು. ಮೊದಲ ಕಂತಿನ ಹಣ ಬಿಡುಗೆಡೆ ಆಗಬೇಕಾದರೆ ಅಡಿಪಾಯ ನಿರ್ಮಿಸಬೇಕು ಎಂಬ ನಿಯಮದಿಂದಾಗಿ ಕೆಲಸ ಪಾಯ ತೆಗೆದು ಸ್ಥಗಿತಗೊಂಡಿತ್ತು. ಇದೀಗ ಮಳೆ ಕಡಿಮೆಯಾದ್ದರಿಂದ ಮತ್ತೆ ದೊಡ್ಡತೋಟ ವಲಯದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮುಂದೆ ಬಂದು ಶ್ರಮದಾನದ ಮೂಲಕ ಅಡಿಪಾಯ ನಿರ್ಮಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಥಳೀಯ ನಿವಾಸಿ ನಾರಾಯಣ ಆಚಾರ್ಯ ರವರು ಸಹಕರಿಸಿರುತ್ತಾರೆ. ವಸತಿ ಯೋಜನೆಯ ಪ್ರಕಾರ ಅಡಿಪಾಯ ರಚನೆಯಾದ ಬಳಿಕ ಪಂಚಾಯತ್ ನಿಂದ ಪ್ರಥಮ ಕಂತಿನ ಹಣ ಬಿಡುಗಡೆಯಾಗುವುದು. ಮುಂದೆ ಹಂತ ಹಂತವಾಗಿ ಕೆಲಸ ನಡೆಯುವ ಸಂದರ್ಭ ಉಳಿದ ಮೊತ್ತ ಸಿಗುವುದು.
ಒಟ್ಟಿನಲ್ಲಿ ಅಸಹಾಯಕ ವೃದ್ಧ ದಂಪತಿಗೆ ಸೂರು ನಿರ್ಮಿಸಿಕೊಡುವಲ್ಲಿ ಹೆಸರಿಗೆ ತಕ್ಕಂತೆ ಶೌರ್ಯದಿಂದ ಮುಂದಡಿ ಇಟ್ಟ ವಿಪತ್ತು ನಿರ್ವಹಣಾ ಘಟಕದ ಕಾರ್ಯ ಮೆಚ್ಚುವಂತಹುದೆ. ಘಟಕದ ಸಂಯೋಜಕ ವೆಂಕಟ್ರಮಣ ಡಿ.ಜೆ, ಸದಸ್ಯರಾದ ಪ್ರಸಾದ್ ಶೇಣಿ, ಸುಂದರ ಶೇಣಿ, ರಮೇಶ್ ಶೇಣಿ, ಪ್ರವೀಣ್ ಶೇಣಿ,ಕರುಣಾಕರ, ಅಚ್ಚುತ,ಶಶಿಧರ, ಗುರುದೀಪ್ ನೇತೃತ್ವ ವಹಿಸಿರುತ್ತಾರೆ.