ತಾಸೆ ತಾಳಕ್ಕೆ ಹುಲಿಗಳ ಹೆಜ್ಜೆ ಶುರುವಾಗಿದೆ; ಬಂತು ನೋಡಿ ದಸರಾ

0

– ಮನೀಷಾ ಮದುವೆಗದ್ದೆ

ಅಶ್ವೀಜ ಶುದ್ಧ ಪ್ರತಿಪದೆ ದಿನದಿಂದ ನವಮಿ ಪರ್ಯಂತ ನವರಾತ್ರಿ ದಿನಗಳ ಉಪಾಸನಾ ಉತ್ಸವ. ಒಂಭತ್ತು ದಿನಗಳಲ್ಲಿ ದುರ್ಗೆಯ ನವರೂಪವನ್ನು ಪೂಜಿಸಿ ದಶಮಿಯಂದು ಪುಸ್ತಕ ಪೂಜೆ ಮಾಡಿ ಉದ್ಯಾಪನಾ ಕಾರ್ಯ ಮಾಡುವುದು ನಮ್ಮ ಸಂಸ್ಕೃತಿ. ಇದು ಆ ಒಂಬತ್ತು ದಿನಗಳ ವಿಶೇಷ. ಪಾಡ್ಯದಂದು ಯೋಗನಿದ್ರಾದುರ್ಗಾ, ಬಿದಿಗೆಯಂದು ದೇವಜಾತಾದುರ್ಗಾ, ತದಿಗೆಯ ದಿನ ಮಹಿಷಮರ್ಧಿನಿ, ಚೌತಿಯಂದು ಶೈಲಜಾದುರ್ಗಾ, ಪಂಚಮಿ ದಿನ ಧೂಮ್ರಃದುರ್ಗಾ, ಷಷ್ಠಿಯಂದು ಚಾಮುಂಡಿ, ಸಪ್ತಮಿಯಂದು ರಕ್ತಬೀಜದುರ್ಗಾ, ಅಷ್ಠಮಿದಿನದಂದು ನಿಶುಂಭಃದುರ್ಗಾ, ನವಮಿದಿನ ಶುಂಭಃದುರ್ಗಾ, ಹೀಗೆ ಅರ್ಚಿಸಿ ಪೂಜಿಸುವುದು ಬಹುದಾಯನೀಯ ನಿತ್ಯಾಹ್ನಿಕ ಪೂಜಾವಿಧಿಯಲ್ಲಿ ಹೇಳಲ್ಪಟ್ಟಿದೆ.

ಮಹಾಲಯ ಅಮವಾಸ್ಯೆ ಮಾರಣೆದಿನ ನವರಾತ್ರಿ ಆರಂಭದ ದಿನ. ಶರದೃತು ಆರಂಭವಾಗುವುದರಿಂದ ಶರನ್ನವರಾತ್ರಿಯೆಂದೂ ಲೋಕ ಪ್ರಸಿದ್ಧವಾಗಿದೆ.ಈ ನವರಾತ್ರಿ ದಿನಗಳಲ್ಲಿ ದೇವಿಯ ಶಾಂತ ಹಾಗೂ ಉಗ್ರ ರೂಪವನ್ನು ಸಂಕಲ್ಪಿಸಿ ಆರಾಧಿಸುವುದಾದರೂ ಶಾರದೆಯ ಉಪಾಸನೆ ಮುಖ್ಯ. ಎಲ್ಲಾ ಸಂಪತ್ತಿಗಿಂತಲೂ ವಿದ್ಯಾಸಂಪತ್ತು ವಿಶೇಷವಾದುದು. ಅದಕ್ಕಾಗಿಯೇ ’ವಿದ್ಯಾವಿಹೀನಃ ಪಶುಃ ಸಮಾನ’ ಎಂದಿದ್ದಾರೆ ಪ್ರಾಜ್ಞರು.

navratri 2021 guidelines for maa durga idol pooja and visarjan in bhopal  ngmp | नवरात्रि 2021 के लिए प्रशासन ने जारी की गाइडलाइंस, जानिए किन चीजों  पर रहेगी पाबंदी | Hindi News, Madhya Pradesh

ಲಕ್ಷ್ಮಿಗೆ ನೂರಾರು ಮುಖಗಳಾದರೆ; ಸರಸ್ವತಿಗೆ ನೇರವಾದ ಒಂದೇ ಮುಖ. ಲಕ್ಷ್ಮಿಯನ್ನು ಯಾವ ಮಾರ್ಗದಿಂದಲೂ ಗಳಿಸಬಹುದಾದರೆ ಸರಸ್ವತಿ ಒಲಿಯುವುದು ಸನ್ಮಾರ್ಗಕ್ಕೆ . ಆಕೆ ಒಮ್ಮೆ ಒಲಿದಳೆಂದರೆ ಮತ್ತೆ ಕದಲುವ ಪ್ರಶ್ನೆಯೇ ಇಲ್ಲ.ಸರಸ್ವತಿ ದಾನ ಮಾಡಿದಷ್ಟೂ ವೃದ್ಧಿಯಾಗುವ ಗುಣದವಳಾದರೆ ಲಕ್ಷ್ಮಿ ಕೊಟ್ಟಷ್ಟೂ ಕರಗುವ ಸ್ವಭಾವದವಳು. ಅದಕ್ಕಾಗಿಯೇ ವಿದ್ಯಾಸಂಪತ್ತು ಧನಸಂಪತ್ತಿಗಿಂತ ಶ್ರೇಷ್ಟ ಎನ್ನುವುದು. ಒಬ್ಬ ಹಣಕಾಸಿನಲ್ಲಿ ಎಷ್ಟೇ ದರಿದ್ರದವನಾದರೂ ವಿದ್ಯಾಸಂಪನ್ನನಾದರೆ ಆತನಿಗೆ ಸಮಾಜದಲ್ಲಿ ಗೌರವಾದರಗಳು ತಾನಾಗಿ ಬರುವುವು.

ಒಂಭತ್ತು ದಿನಗಳಲ್ಲೂ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸುವುದಾದರೂ ಅಷ್ಟಮಿಯಂದು ’ದುರ್ಗಾಷ್ಟಮಿ’ ಎಂಬ ವಿಶೇಷವಿದೆ. ನವಮಿಯಂದು ಆಯುಧ ಪೂಜೆಗೆ ಪ್ರಾಧಾನ್ಯತೆ. ವಿಜಯದಶಮಿಯಂದು ಪ್ರಮುಖವಾಗಿ ಅಕ್ಷರಾಭ್ಯಾಸಕ್ಕೆ ನಾಂದಿ; ಮಾತ್ರವಲ್ಲ ಎಲ್ಲಾ ಶುಭಕಾರ್ಯಗಳ ತೊಡಗುವಿಕೆಗೆ ಶುಭಪ್ರದವು. ಹಿಂದಿನ ರಾಜರುಗಳು ತಮ್ಮ ಯುದ್ಧಾಯುಧಗಳನ್ನು ನವಮಿಯಂದು ಪೂಜಿಸಿ; ವಿಜಯದಶಮಿಯಂದು ಯುದ್ಧಕ್ಕೆ ತೆರಳುತ್ತಿದ್ದರಂತೆ. ಅದರ ಪ್ರತೀಕವಾಗಿ ಇಂದಿಗೂ ಆಯುಧಪೂಜೆ ಉಳಿದುಕೊಂಡು ಬಂದಿದೆ.

ಬ್ರಹ್ಮನರಾಣಿಯಾದ ವಿದ್ಯಾಶಾರದೆಯ ವಾಹನ ನವಿಲು. ಉಗ್ರರೂಪದಲ್ಲಿ ಅವಳು ಸಿಂಹವಾಹಿನಿ! ಎರಡು ಕರಗಳಲ್ಲಿ ವೀಣೆಯನ್ನೂ ಇನ್ನೊಂದರಲ್ಲಿ ಓಲೆ[ಪುಸ್ತಕ]ಯನ್ನೂ ಮತ್ತೊಂದರಲ್ಲಿ ಜಪಮಾಲೆ ಪಿಡಿದು ಶ್ವೇತಪದ್ಮಾಸನದಲ್ಲಿ ಸರ್ವಾಲಂಕಾರ ಭೂಷಿತೆಯಾಗಿ ಪವಡಿಸಿದ ಶಾರದೆಯನ್ನು ನೋಡುವುದಕ್ಕೆ ನಮ್ಮೆರಡು ಕಣ್ಣುಗಳು ಸಾಲವು.| ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ| ವಿದ್ಯಾರಂಭ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ|

ಕರ್ನಾಟಕದಲ್ಲಿ ನಾಡಹಬ್ಬವಾಗಿ ಆಚರಿಸಲ್ಪಡುವ ನವರಾತ್ರಿಗೆ; ದಸರಾ, ಮಹಾನವಮಿ, ಶರನ್ನವರಾತ್ರಿ ಮುಂತಾದ ಹೆಸರಿನಿಂದ ಕರೆಯಲ್ಪಡುವುದಾದರೂ ’ಮೈಸೂರುದಸರಾ’ ಎಂಬುದು ಜಗತ್ಪ್ರಸಿದ್ಧ. ಹಾಗೆಯೇ ತುಳುವಿನ ಆಡುಭಾಷೆಯಲ್ಲಿ ’ಮಾರ್ಣಮಿ’[ಮಹಾನವಮಿ] ಎಂದೂ ಕರೆಯುತ್ತಾರೆ.

ದಸರಾ ಆಚರಣೆಯಲ್ಲಿ ಹುಲಿವೇಷ ಕುಣಿತ ಕರಾವಳಿ ಕರ್ನಾಟಕ ಭಾಗದಲ್ಲಿ ಕಂಡು ಬರುವ ವಿಶಿಷ್ಟ ನೃತ್ಯ. ನವರಾತ್ರಿ ಹಬ್ಬದ ದಿನಗಳಲ್ಲಿ ಸ್ಥಳೀಯ ಯುವಕರು ಹುಲಿ ವೇಷವನ್ನು ಧರಿಸಿ ಕುಣಿದು ಸಾರ್ವಜನಿಕರನ್ನು ರಂಜಿಸುತ್ತಾರೆ. ಮೈಗೆ ಹಳದಿ, ಕಪ್ಪು ಬಣ್ಣಗಳ ಪಟ್ಟೆ ಬಳಿದುಕೊಂಡು, ತಲೆಗೆ ಹುಲಿ ವೇಷದ ಮುಖವಾಡ ಹಾಕಿಕೊಂಡ ನಾಲ್ಕಾರು ಮಂದಿಯ ತಂಡ, ಕಾಲು–ಕೈಗಳನ್ನು ಆಡಿಸುತ್ತಾ ತಾಸೆ ಪೆಟ್ಟಿನ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದರೆ, ಅಂದು ಕರಾವಳಿಯಲ್ಲಿ ದಸರಾ ಸಡಗರ ಆರಂಭವಾಯಿತು ಎಂದೇ ಅರ್ಥ !

ಈ ಆಚರಣೆಯ ಹಿನ್ನಲೆ ಹೀಗಿದೆ ನೋಡಿ; ದುರ್ಗಾದೇವಿಗೆ ಗೌರವ ಸಲ್ಲಿಸಲು ಹುಲಿ ವೇಷವನ್ನು ಧರಿಸಲಾಗುತ್ತದೆ. ದುರ್ಗೆಯ ಅಧಿಕೃತ ಪ್ರಾಣಿ ಹುಲಿ. ದುರ್ಗಾ ದೇವಿಯು ತನ್ನ ಆಕ್ರಮಣಕಾರಿ ನಿಲುವಿಗೆ ಹೆಸರುವಾಸಿಯಾಗಿದ್ದಾಳೆ ಮತ್ತು ದುಷ್ಟ ಶಕ್ತಿಗಳನ್ನು ತನ್ನ ಭಕ್ತರಿಂದ ದೂರವಿಡುವ ಸಾಮರ್ಥ್ಯ ಹೊಂದಿದ್ದಾಳೆ. ದುಷ್ಟ ಶಕ್ತಿಗಳಿಗೆ ಎಚ್ಚರಿಕೆ ನೀಡುವ ಸಂಕೇತವಾಗಿ ಹುಲಿವೇಷದ ಆಚರಣೆ ನಡೆಸುತ್ತಾರೆ ತುಳುವರು.

ಕರಾವಳಿಯ ದಸರಾ ಮತ್ತು ಹುಲಿವೇಷದ ಕುಣಿತಕ್ಕೆ (ಪಿಲಿವೇಷಕ್ಕೆ) ಅವಿನಾಭಾವ ನಂಟಿದೆ. ತಾಸೆದ ಪೆಟ್ಟ್‌ಗ್‌ ಊರುದ ಪಿಲಿಕುಲು ನಲಿಪುನ ಪೊರ್ಲು (ತಾಸೆಯ ಏಟಿಗೆ ಊರ ಹುಲಿಗಳು ಕುಣಿಯುವ ಅಂದ)ವೇ ಚಂದ ಎನ್ನುತ್ತಾರೆ. ಈ ಭಾಗದಲ್ಲಿ ದಸರಾದ ಸಡಗರಕ್ಕೆ ಕಳೆ ಕೊಡುವುದೇ ಈ ಹುಲಿಕುಣಿತ. ನವರಾತ್ರಿ ಎಂದರೆ ದೇವರ ಆರಾಧನೆಗಿಂತಲೂ, ವೇಷಗಳ ಕರಾಮತ್ತೇ ಹೆಚ್ಚು.

ಹುಲಿನೃತ್ಯ ಕೇವಲ ನೃತ್ಯವಲ್ಲ. ಅದು ಬಲಾಢ್ಯತೆಯ ಪ್ರದರ್ಶನ. ಇಲ್ಲಿ ಕುಣಿತಗಾರರಿಗೆ ದೈಹಿಕ ಶ್ರಮವೇ ಪ್ರಧಾನ. ಹಾಗಾಗಿ ನೃತ್ಯದಲ್ಲಿ ಮೈನವಿರೇಳಿಸುವಂತಹ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ. ಒಂದು, ಮೂರು, ಐದು ಪೌಲದಲ್ಲಿ ಗಿರಕಿ ಹೊಡೆಯುವುದು. ತೇಲ್‌ ಬಗ್ಗುವುದು, ಚಕ್ರದಂಡದ ಮೂಲಕ ಜನರನ್ನು ಮನರಂಜಿಸುವುದು ಇನ್ನಿತ್ಯಾದಿ. ನೆಲದ ಮೇಲೆ ಹಣದ ನೋಟು ಇಟ್ಟು, ಅದನ್ನು ಹಿಂಬದಿಯಿಂದ ಬಾಗಿಸಿ ಬಾಯಲ್ಲಿ ಕಚ್ಚಿಕೊಳ್ಳುವಂತಹ ಕಸರತ್ತುಗಳು ಪ್ರದರ್ಶನವಾಗುತ್ತವೆ. ಒಟ್ಟಾರೆ. ಬಣ್ಣಬಣ್ಣದ ಹುಲಿವೇಷದ ನೃತ್ಯದ ಜತೆಗೆ ಕಸರತ್ತೂ ಇಲ್ಲಿ ಕಣ್ಣಿಗೆ ಹಬ್ಬ.

ಇಲ್ಲಿ ಕುಣಿತದಷ್ಟೇ ಬಣ್ಣಗಾರಿಕೆ, ವಿಶಿಷ್ಟವಾದುದು. ಚಲ್ಲಣ(ಚಡ್ಡಿ)ವೊಂದುಳಿದಂತೆ ಮೈಗೆಲ್ಲಾ ಹಳದಿ, ಕಪ್ಪು, ಬಿಳಿ ಬಣ್ಣ ಬಳಿದು, ಬಾಲ ಕಟ್ಟಿ, ಹುಲಿಯ ಮುಖವಾಡ ಧರಿಸಿಕೊಂಡು ತಂಡವಾಗಿ ಬಂದು ಊರ ಮನೆಗಳ ಮುಂದೆ ಕುಣಿಯುತ್ತಾರೆ. ಪ್ರತಿ ಮನೆಯಲ್ಲೂ ಕುಣಿತ ಮುಗಿಯೋ ಹೊತ್ತಿಗೆ ಇಂತಿಷ್ಟು ಹಣ ನೀಡುವುದು ವಾಡಿಕೆ.

ಹುಲಿವೇಷದಲ್ಲೂ ಪಟ್ಟೆಪಿಲಿ, ಚಿಟ್ಟೆಪಿಲಿ, ಬಂಗಾಲಿ ಪಿಲಿ, ಕರಿ ಪಿಲಿಗಳೆಂಬ ಭಿನ್ನ ರೀತಿಯ ಬಣ್ಣಗಾರಿಕೆಯಿದೆ. ಕೆಲವೊಮ್ಮೆ ಹಸಿರು ಬಣ್ಣದ ಹುಲಿಗಳೂ ಇರುತ್ತವೆ. ಇಲ್ಲಿ ವೇಷಧಾರಿಯಲ್ಲಿ ನೈಜತೆ ತುಂಬುವವರು ಕಲಾವಿದರು. ತಮ್ಮ ಕುಂಚಗಳಿಂದ ಹುಲಿವೇಷ ಹಾಕುವವರಿಗೆ ವೈವಿಧ್ಯಮಯ ಬಣ್ಣ ಬಳಿದು, ಕಾಡಿನ ಹುಲಿಯನ್ನು ಊರಿಗೆ ತಂದು ಬಿಡುತ್ತಾರೆ.

ಮೊದಲು ತಾಸೆ ಹಾಗೂ ಡೋಲಿನವರು ಮನೆಯಂಗಳಕ್ಕೆ ಹೋಗಿ ಬಾರಿಸಲು ಪ್ರಾರಂಭಿಸುತ್ತಾರೆ. ನಿಧಾನವಾಗಿ ಮರಿ ಹುಲಿಗಳು ಅಂಗಳಕ್ಕಿಳಿದು ಆಟ ಪ್ರಾರಂಭಿಸುತ್ತವೆ. ತಾಯಿ ಹುಲಿ ಪೊದೆಯೊಳಗಿಂದ ಮೆಲ್ಲಗೆ ಹೆಜ್ಜೆಯಿಡುತ್ತಾ, ಮರಿಗಳ ಬಳಿಬಂದು ಅವುಗಳ ಮೈಯನ್ನು ನೆಕ್ಕಿ, ಎದೆಹಾಲುಣಿಸಿ, ತಾಯಿ ಪ್ರೀತಿಯನ್ನು ಉಣಿಸುವ ಸೊಬಗು. ಅದರ ಖುಷಿಯೇ ಬೇರೆ’

ಹುಲಿವೇಷ ಧರಿಸುವುದೆಂದರೆ ಕರಾವಳಿಯ ಹೆಚ್ಚಿನ ಮಕ್ಕಳಿಗೆ, ಯುವಕರಿಗೆ ಎಲ್ಲಿಲ್ಲದ ಉತ್ಸಾಹ. ಆದರೆ ಅದು ಬೇಡುವ ಶ್ರಮ ಸ್ವಲ್ಪವಲ್ಲ. ಬಣ್ಣಕ್ಕೆ ನಿಲ್ಲುವುದು ಎಂದರೆ, ನಿಜವಾಗಿಯೂ ನಿಲ್ಲುವುದೇ ಹೌದು! ಎರಡು ಕಂಬಕ್ಕೆ ಕೈಯನ್ನು ಕಟ್ಟಿ ಆಥವಾ ಆಧಾರವಾಗಿಟ್ಟುಕೊಂಡು ನಿಲ್ಲುವುದು. ಬಣ್ಣ ಮುಗಿದ ಮೇಲೆ ಹುಲಿ ಬಣ್ಣದ ವೆಲ್ವೆಟ್‌ ಚಡ್ಡಿ ಧರಿಸಿ, ಅಖಾಡಕ್ಕಿಳಿಯಲು ತಯಾರು.

ಹುಲಿವೇಷದ ಕುಣಿತ ಒಂದು ದಿನದ ಆಟವಲ್ಲ. ನವರಾತ್ರಿಯ ಒಂಬತ್ತು ದಿನ ಇರುತ್ತದೆ. ಕೊನೆಯಲ್ಲಿ ದೇವಿಯ ವಿಸರ್ಜನೆಯ ನಂತರವೇ ವೇಷಧಾರಿಗೂ ಜಳಕ. ಒಂದು ತಂಡದಲ್ಲಿ ಮೂರು ಹುಲಿಗಳಿದ್ದ ದಿನಗಳು ಕಳೆದು ಹೋಗಿವೆ. ಈಗ ತಂಡದಲ್ಲಿ ನೂರು ಹುಲಿಗಳಿರುವಷ್ಟು ಹುಲಿವೇಷದ ಪ್ರಾಮುಖ್ಯ ಕರಾವಳಿಯಲ್ಲಿ ಬೆಳೆದು ನಿಂತಿದೆ. ಹುಲಿಗಳನ್ನು ಬೇಟೆಯಾಡುವ ಒಬ್ಬ ಬೇಟೆಗಾರ ವೇಷಧಾರಿ ಪ್ರತಿ ತಂಡದಲ್ಲಿಯೂ ಇರುತ್ತಾನೆ. ಬೇಟೆಗಾರ ಹುಲಿಗೆ ಶೂಟ್ ಮಾಡುವಂತೆ ನರ್ತಿಸುತ್ತಿರುತ್ತಾನೆ. ದೇವಿ ರಾಕ್ಷಸರನ್ನು ಸಂಹರಿಸಿ ಬರುವಾಗ, ವಾಹನವಾದ ಹುಲಿ ರಾಕ್ಷಸರ ರುಂಡ ಎಲುಬಿನೊಂದಿಗೆ ಆಟವಾಡುವ ಪ್ರತೀಕವಾಗಿ ಹುಲಿವೇಷಧಾರಿಗಳು ಜಂಡೆಯನ್ನು ಬೀಸುತ್ತಾ ಕುಣಿಯುತ್ತಾರೆ. ಹುಲಿ ನೃತ್ಯವೇ ರಾಕ್ಷಸರ ಸಂಹಾರಕ್ಕೆ ಸಂಭ್ರಮಾಚರಣೆ. ದುಷ್ಟಶಕ್ತಿಗಳನ್ನೂ, ದುಶ್ಚಟಗಳನ್ನೂ ಮಟ್ಟ ಹಾಕಿ ಸಂಭ್ರಮದಿಂದ ಆಚರಿಸೋಣ ನಮ್ಮ ನಾಡಹಬ್ಬ ” ಮೈಸೂರು ದಸರಾ”