ಕಾಂಗ್ರೆಸ್‌ನಿಂದ ಹಲ್ಕಟ್ ರಾಜಕೀಯ : ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಅಂಗಾರ ಗರಂ

0

 

ಅಧಿಕಾರ ಇರುವಾಗ ಕೆಲಸ ಮಾಡಿಲ್ಲ : ಈಗ ಅಪಪ್ರಚಾರ ಮಾಡುತ್ತಿದ್ದಾರೆ

ಟೀಕೆಗಳು ಸರ್ವ ಸಮ್ಮತವಾಗಿದ್ದರೆ ಸ್ವೀಕರಿಸುತ್ತೇವೆ : ಅಭಿವೃದ್ಧಿಗೆ ಸಲಹೆ ಇರಲಿ

ಸುಳ್ಯ ವಿಧಾನ ಸಭಾ ಕ್ಷೇತ್ರದ ವಿವಿಧ ಕಡೆಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ಕಾಂಗ್ರೆಸ್‌ನವರ ಹಲ್ಕಟ್ ರಾಜಕೀಯವನ್ನು ಖಂಡಿಸುತ್ತೇವೆ ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ.

ಅ.೧ರಂದು ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ಕರೆದ ಸಚಿವರು `’ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿರುವಾಗ ಪ್ರಾಕೃತಿಕ ವಿಕೋಪದಿಂದ ಮನೆ ನಾಶ ಗೊಂಡಿದ್ದರೆ ೪೦ರಿಂದ ೫೦ ಸಾವಿರವಷ್ಟೇ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದರು. ಆದರೆ ಈಗಿನ ಬಿಜೆಪಿ ಸರಕಾರ ಹಾಗಿಲ್ಲ. ಪ್ರಾಕೃತಿಕ ವಿಕೋಪದಿಂದ ಮನೆ ಸಂಪೂರ್ಣ ನಾಶಗೊಂಡರೆ ೫ ಲಕ್ಷ ಪರಿಹಾರ ನೀಡುತ್ತಿದೆ. ಈ ಬಾರಿ ಸುಳ್ಯ ಕ್ಷೇತ್ರಕ್ಕೆ ಸಂಬಂಧಿಸಿ ೧೯ ಮನೆ ಪೂರ್ಣ ಹಾನಿಯಾಗಿ ಈಗಾಗಲೇ ಹೊಸ ಮನೆ ನಿರ್ಮಾಣಕ್ಕೆ ಪ್ರಥಮ ಕಂತು ರೂ. ೧೮ ಲಕ್ಷ ೯೨ ಸಾವಿರ ಬಿಡುಗಡೆಗೊಂಡಿದೆ. ಇನ್ನೂ ೨ ಮತ್ತು ೩ನೇ ಕಂತಿನಲ್ಲಿ ಉಳಿದ ಹಣ ಬರಲಿದೆ. ತೀವ್ರ ಹಾನಿಯಾಗಿರುವ ೬ ಮನೆಗಳಿಗೆ ೫ ಲಕ್ಷದ ೮೦ ಸಾವಿರ, ಭಾಗಶಃ ಹಾನಿಯಾಗಿರುವ ೨೧೧ ಮನೆಗಳಿಗೆ ೩೦ ಲಕ್ಷದ ೩೩ ಸಾವಿರ ರೂ ಹಾಗೂ ನೆರೆ ನೀರು ನುಗ್ಗಿದ ಮನೆಗಳಿಗೆ ತಕ್ಷಣ ಪರಿಹಾರವಾಗಿ ಸುಮಾರು ೧೬೬ ಮನೆಗಳಿಗೆ ೨೦ ಲಕ್ಷದ ೮೩ ಸಾವಿರ ರೂ ಹೀಗೆ ಒಟ್ಟು ೭೬ ಲಕ್ಷದ ೪೬ ಸಾವಿರ ಹಣ ಈಗಾಗಲೇ ನೀಡಲಾಗಿದೆ ಎಮದು ಸಚಿವರು ವಿವರ ನೀಡಿದರು.
ಕೊಲ್ಲಮೊಗ್ರದ ಕಡಂಬಳದಲ್ಲಿ ರಸ್ತೆ ಸಂಪರ್ಕ ಕಡಿತವಾಗಿ ಸರಿಪಡಿಸಲು ತಾತ್ಕಾಲಿಕ ವ್ಯವಸ್ಥೆ ಮಾಡುವ ಸಿದ್ಧತೆ ನಡೆಸುತ್ತಿದ್ದ ಸಂದರ್ಭ ಕಾಂಗ್ರೆಸ್‌ನ ನಂದಕುಮಾರ್ ಹೋಗಿ ರಾಜಕೀಯ ಮಾಡಿದ್ದಾರೆ. ಅವರು ಕೆಲವು ಸಮಯದಿಂದ ಸುಳ್ಯ ಸುತ್ತುತ್ತಿದ್ದಾರೆ. ಉಳಿದ ಕಡೆ ಯಾಕೆ ಕೆಲಸ ಮಾಡಿಸಿಲ್ಲ. ಅಲ್ಲಿ ನಾವು ಕೆಲಸ ಮಾಡುವುದನ್ನು ತಿಳಿದು ಕಾಂಗ್ರೆಸ್ಸಿಗರು ಹೋಗಿ ನಾಟಕ ಮಾಡಿದ್ದಾರೆ ಎಂದು ಸಚಿವ ಅಂಗಾರರು ಹೇಳಿದರಲ್ಲದೆ, ಕಾಂಗ್ರೆಸ್ಸಿಗರ ಅಪಪ್ರಚಾರ ಯಾವ ರೀತಿ ಇದೆ ಎಂದರೆ ನೂಜಿಬಾಳ್ತಿಲದಲ್ಲಿ ಕಾಂಗ್ರೆಸ್ ಕಾರ್ಯಕರ್ತ ವಸಂತ ಎಂಬವರು ತನ್ನ ತಾಯಿಯನ್ನು ಬಡಿಗೆಗೆ ಕಟ್ಟಿ ಕೊಂಡೊಯ್ದು ಎರಡು ದಿನದಲ್ಲಿ ಅದೇ ರಸ್ತೆಯಲ್ಲಿ ಜೀಪಿನಲ್ಲಿ ಅಡಿಕೆ ಕೊಂಡೊಯ್ದ ಘಟನೆ ನಮಗೆಲ್ಲ ಗೊತ್ತಿಲ್ಲವೇ ಎಂದು ಅಂಗಾರರು ಅಂದಿನ ಘಟನೆ ವಿವರಿಸಿದರು.
ಭಾರತವನ್ನು ತುಂಡು ಮಾಡಿ ಈಗ ಜೋಡೋ ಯಾತ್ರೆಯಂತೆ
ಕಾಂಗ್ರೆಸ್ಸಿಗರ ಹಲ್ಕಟ್ ರಾಜಕೀಯ ಇಲ್ಲಿ ಮಾತ್ರ ಅಲ್ಲ ಅದೂ ರಾಜ್ಯದಿಂದಲೇ ಇದೆ. ಭಾರತವನ್ನು ನಿಜವಾಗಿಯೂ ತುಂಡು ಮಾಡಿದ್ದು ಯಾರು ಎಂದು ಚರಿತ್ರೆ ನೋಡಿದರೆ ಗೊತ್ತಾಗುತ್ತದೆ. ಈಗ ಅದೇ ಕಾಂಗ್ರೆಸ್ಸಿಗರು ಭಾರತ್ ಜೋಡೋ ಯಾತ್ರೆಯ ಮೂಲಕ ನಾಟಕ ಮಾಡುತ್ತಿದ್ದಾರೆಂದು ಅಂಗಾರರು ಹೇಳಿದರು.
ಕಂದ್ರಪ್ಪಾಡಿ ಭಾಗದಲ್ಲಿ ಆ ರಸ್ತೆ ಅರ್ಧ ಅಭಿವೃದ್ಧಿ ಆಗಿದೆ. ಇನ್ನು ಅರ್ಧ ಆಗಲು ಬಾಕಿ ಇದೆ. ಕ್ಷೇತ್ರದ ರಸ್ತೆಗಳ ಸಮಸ್ಯೆಗಳು ಅರಿವು ನನ್ನಲ್ಲಿ ಇದೆ. ನಮ್ಮನ್ನು ಟೀಕೆ ಮಾಡಿರುವ ಭರತ್ ಮುಂಡೋಡಿಯವರು ಹಿಂದೆ ಜಿ.ಪಂ. ಸದಸ್ಯರಾಗಿದ್ದರಲ್ವ. ಅವರಲ್ಲಿ ಅಧಿಕಾರ ಇರುವಾಗ ಅಭಿವೃದ್ಧಿ ಕೆಲಸ ಮಾಡದೇ ಈಗ ಅಧಿಕಾರ ಇಲ್ಲದಾಗ ಹೀಗೆ ಮಾತನಾಡುತ್ತಿದ್ದಾರೆ. ನಮ್ಮ ಸರಕಾರ ರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸಿದೆ. ಅವರ ಟೀಕೆಗಳನ್ನು ಕ್ಷೇತ್ರದ ಜನರು ನಂಬುವುದಿಲ್ಲ. ಟೀಕೆಗಳು ಸಮರ್ಪಕವಾಗಿದ್ದರೆ ಅದನ್ನು ಸಲಹೆ ಎಂದು ನಾವು ಪರಿಗಣಿಸುತ್ತಿದ್ದೆವು. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಮಾಡುತ್ತಿದ್ದಾರಷ್ಟೆ ಎಂದು ಸಚಿವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ.ತೀರ್ಥರಾಮ, ರಬ್ಬರ್ ಮಂಡಳಿ ನಿರ್ದೇಶಕ ಮುಳಿಯ ಕೇಶವ ಭಟ್, ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ಚನಿಯ ಕಲ್ತಡ್ಕ, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಸುಭೋದ್ ಶೆಟ್ಟಿ ಮೇನಾಲ, ಸುನಿಲ್ ಕೇರ್ಪಳ ಇದ್ದರು.