ಕ.ಸಾ.ಪ. ಮತ್ತು ಗಾಂಧಿ ಚಿಂತನ ವೇದಿಕೆ ನೇತೃತ್ವದಲ್ಲಿ ಗಾಂಧಿ ನಡಿಗೆ

0

ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜನ್ಮದಿನವಾದ ಅ.೨ರಂದು ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಹಾಗೂ ಗಾಂಧಿ ಚಿಂತನ ವೇದಿಕೆ ಸುಳ್ಯ ಇವುಗಳ ಜಂಟಿ ನೇತೃತ್ವದಲ್ಲಿ ಸುಳ್ಯದ ಲಯನ್ಸ್, ರೋಟರಿ, ರೋಟರಿ ಸಿಟಿ, ಜೇಸಿಐ ಸುಳ್ಯ ಪಯಸ್ವಿನಿ, ಜೇಸಿಐ ಸುಳ್ಯ ಸಿಟಿ, ಸೀನಿಯರ್ ಲೀಜನ್ ಸುಳ್ಯ, ಯುವಜನ ಸಂಯುಕ್ತ ಮಂಡಳಿ, ಪ್ರೆಸ್ ಕ್ಲಬ್, ಸುದ್ದಿ ಸಮೂಹ ಸಂಸ್ಥೆ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಗಾಂಧಿ ನಡಿಗೆ ಬೆಳಗ್ಗೆ ಸುಳ್ಯ ಬಸ್ ನಿಲ್ದಾಣದಲ್ಲಿರುವ ಡಾ| ಕುರುಂಜಿ ವೆಂಕಟ್ರಮಣ ಗೌಡರ ಪುತ್ಥಳಿಯ ಬಳಿಯಿಂದ ಹೊರಟು ಸರ್ಕಾರಿ ಬಸ್ ನಿಲ್ದಾಣ, ಕಟ್ಟೆಕ್ಕಾರು ಬಳಿಯ ಚೆನ್ನಕೇಶವ ಕಟ್ಟೆಗೆ ತಿರುಗಿ ಬಂದು ಬಾಳೆಮಕ್ಕಿ, ಶ್ರೀರಾಂಪೇಟೆ, ಜೂನಿಯರ್ ಕಾಲೇಜು ರಸ್ತೆ ಮೂಲಕ ಸಾಗಿ ಅಂಬಟೆಡ್ಕ ದಲ್ಲಿರುವ ಕನ್ನಡಭವನದದಲ್ಲಿ ಸಮಾಪ್ತಿಯಾಯಿತು.


ರಾಷ್ಟ್ರಧ್ವಜ ಹಿಡಿದು ಗಾಂಧಿ ಟೋಪಿ ಧರಿಸಿ ದಾರಿಯುದ್ದಕ್ಕೂ ಘೋಷಣೆ ಕೂಗುತ್ತಾ ಬಂದ ಎಲ್ಲರೂ, ಕನ್ನಡ ಭವನದಲ್ಲಿ ಸೇರಿದರು. ಅಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಹಾಗೂ ನಿವೃತ್ತ ಪ್ರಾಂಶುಪಾಲ ಬಾಲಚಂದ್ರ ಗೌಡ ಗಾಂಧಿ ಪೋಟೋದ ಎದುರು ದೀಪ ಪ್ರಜ್ವಲಿಸಿ, ನಮನ ಸಲ್ಲಿಸಿದರು. ನಂತರ ಗಾಂಧಿ ಚಿಂತನೆಯ ವೇದಿಕೆಯ ಡಾ.ಸುಂದರ ಕೇನಾಜೆ ಗಾಂಧಿ ಚಿಂತನೆಯ ಬಗ್ಗೆ ಮಾತನಾಡಿದರು.ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದರು. ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ವಂದಿಸಿದರು.


ಕಾರ್ಯಕ್ರಮದಲ್ಲಿ ಸುದ್ದಿ ಜನಾಂದೋಲನ ವೇದಿಕೆಯ ವತಿಯಿಂದ ನಡೆಯುತ್ತಿರುವ ಲಂಚ ಭ್ರಷ್ಟಾಚಾರ ವಿರುದ್ಧದ ಫಲಕಗಳನ್ನು ಪ್ರದರ್ಶಿಸಿ, ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ ಎಂಬ ಘೋಷಣೆಗಳನ್ನು ಕೂಗಿ, ಆಂದೋಲನಕ್ಕೆ ಬೆಂಬಲ ಸೂಚಿಸಲಾಯಿತು.