ಪಂಜದಲ್ಲಿ ಶ್ರೀ ಶಾರದೋತ್ಸವ

0

ಧಾರ್ಮಿಕ ಸಭೆ-ಸನ್ಮಾನ

 ಮಕ್ಕಳಲ್ಲಿ ದೇವ ಭಕ್ತಿ-ದೇಶ ಭಕ್ತಿ ಇರಬೇಕು   : ನಾರಾಯಣ ಭಟ್ ಟಿ

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ , ಶ್ರೀ ಶಾರದೋತ್ಸವ ಸಮಿತಿ-2022 ಇದರ ಆಶ್ರಯದಲ್ಲಿ ಪಂಜ ನಾಡ ಹಬ್ಬ ಶ್ರೀ ಶಾರದೋತ್ಸವವು ವಿವಿಧ ವೈಧಿಕ,ಧಾರ್ಮಿಕ,ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳೊಂದಿಗೆ ಅ.5.ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರಗಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಲೋಕೇಶ್ ಬರೆಮೇಲು ಸಭಾಧ್ಯಕ್ಷತೆ ವಹಿಸಿದ್ದರು.

 

ರಾಷ್ಟ್ರ ಪ್ರಶಸ್ತಿ ವಿಜೇತ ಅಧ್ಯಾಪಕ ನಾರಾಯಣ ಭಟ್ ಟಿ ರಾಮಕುಂಜ ಧಾರ್ಮಿಕ ಉಪನ್ಯಾಸ ನೀಡಿ “ಮಕ್ಕಳಿಗೆ ಶಾಲೆಯ ಅಂಕದ ಶಿಕ್ಷಣ ಜೊತೆಗೆ ಧಾರ್ಮಿಕ ಶಿಕ್ಷಣ ನೀಡ ಬೇಕು. ಮಕ್ಕಳು ಒಳ್ಳೆಯ ಸಂಸ್ಕಾರ, ನಯ‌ ವಿನಯತೆ ಮೈಗೊಡಿಸಿ ಕೊಂಡಿರ ಬೇಕು.ಅವುಗಳಿಗೆ ನಾವು ಪ್ರೇರೇಪಿಸ ಬೇಕು.ಮಕ್ಕಳಲ್ಲಿ ನಾವು ಏನು
ಒಳ್ಳೆಯದನ್ನು ನಿರೀಕ್ಷಿಸುತ್ತೇವೆ,ಅದನ್ನು ನಾವು ಕೂಡ ಪಾಲಿಸ ಬೇಕು.ಪ್ರತೀಯೊಬ್ಬ ಮಕ್ಕಳು ದೇವ ಭಕ್ತಿ ,ದೇಶ ಭಕ್ತಿ ಮೈಗೂಡಿಸಿ ಕೊಳ್ಳುವಂತಾಗ ಬೇಕು.” ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ”ವಿದ್ಯಾರ್ಥಿಗಳು ಇಂತಹದೇ ಕೆಲಸಗಳು ದೊರಕ ಬೇಕು ಎಂದು ಶಿಕ್ಷಣಕ್ಕೆ ಹಣವ್ಯಯ ಮಾಡಿ ಕಷ್ಟ ಪಡುತ್ತಾರೆ. ಅಂತಹ ಅಪೇಕ್ಷೆಗಳನ್ನು ಬಿಟ್ಟು ಸಮಾಜದಲ್ಲಿ ಸಿಕ್ಕ ಉದ್ಯೋಗದಲ್ಲಿ ತೃಪ್ತಿ ಪಟ್ಟು ಸದೃಢವಾಗ ಬೇಕು” ಎಂದು
ಹೇಳಿದರು.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು, ಚಲನಚಿತ್ರ ಮತ್ತು ಧಾರಾವಾಹಿ ನಟನೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕು.ಪೂಜಾ ಲಕ್ಷ್ಮಣ ಬೇರ್ಯ ,ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರನ್ನು ಸನ್ಮಾನಿಸಲಾಯಿತು. ಶ್ರೀ ಶಾರಾದಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ,
ಉತ್ಸವ ಸಮಿತಿಯ ಕಾರ್ಯದರ್ಶಿ ಕುಸುಮಾಧರ ಕೆಮ್ಮೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರತಿಭಾ ಪುರಸ್ಕಾರ:
ಪಂಜ ಕ್ಲಸ್ಟರಿನ 9 ಶಾಲೆಗಳ ಆಯ್ದು 9 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಪ್ರತಿಭಾ ಪುರಸ್ಕಾರ ಜರುಗಿತು. ಪಾಂಡಿಗದ್ದೆ ಶಾಲೆಯ ಖುಷಿ ಎ ಆರ್, ಕಲ್ಮಡ್ಕ ಶಾಲೆಯ ಆತ್ಮೀಯ ಕೆ, ಪಡ್ಪಿನಂಗಡಿ ಶಾಲೆಯ ಹರ್ಷಿಣಿ ಎ,ಪಂಜ ಶಾಲೆಯ ಧನ್ಯಶ್ರೀ ಕೆ ಆರ್,ಕೂತ್ಕುಂಜ ಶಾಲೆಯ ಕೃತಿಕಾ ಎಂ ಜಿ,ಕರಿಕ್ಕಳ ಶಾಲೆಯ ರಶ್ಮಿ ಎ ಆರ್,ನಾಗತೀರ್ಥ ಶಾಲೆಯ ರಮ್ಯಾ ಕೆ, ಕೋಟೆಗುಡ್ಡೆ ಶಾಲೆಯ ಶಿಶಿರ್ ಕೆ,ಪಂಬೆತ್ತಾಡಿ ಶಾಲೆಯ ಶ್ರಾವ್ಯ ಕೆ ರವರು ಪುರಸ್ಕಾರ ಸ್ವೀಕರಿಸಿದರು
ಕಾರ್ಯಕ್ರಮದಲ್ಲಿ ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ಸ್ವಾಗತಿಸಿದರು.ರಾಜಕುಮಾರ್ ಬೇರ್ಯ ಪ್ರಾಸ್ತಾವಿಕ ಮಾತನಾಡಿದರು.ಜಯರಾಮ ಕಲ್ಲಾಜೆ ನಿರೂಪಿಸಿದರು.ಉತ್ಸವ ಸಮಿತಿಯ ಕಾರ್ಯದರ್ಶಿ ಕುಸುಮಾಧರ ಕೆಮ್ಮೂರು ವಂದಿಸಿದರು.