HomePage_Banner
HomePage_Banner
Breaking News

ತವರಿನ ಉಡುಗೊರೆ

ಎಷ್ಟೊಂದು ವಿಚಿತ್ರ ಈ ಜೀವನ. ಜೀವನದಲ್ಲಿ ನಡೆಯುವ ನಮ್ಮವರೇ ಅನ್ನಿಸಿಕೊಂಡ ರಕ್ತ ಸಂಬಂಧಿಗಳ ದ್ವೇಷ. ಆ ದ್ವೇಷ ಸಾಧನೆಗಾಗಿ ಹುಟ್ಟಿಕೊಳ್ಳುವ ಸುಳ್ಳು. ಮೋಸ, ವಂಚನೆ, ಅಬ್ಬಬ್ಬಾ…. ನೆನೆಸಿಕೊಂಡರೆ ಭಯವಾಗುತ್ತಪ್ಪ!
ಆ ಘಟನೆ ನಡೆದು ಎಷ್ಟೋ ಸಮಯದ ಮೇಲೆ ಜರೂರಾಗೊಮ್ಮೆ ಬಂದು ಹೋಗು ಮಗಳೇ ಎಂದು ಅಪ್ಪ ಅಪರೂಪಕ್ಕೆ ಫೋನ್ ಮಾಡಿದಾಗ ಇನ್ನೇನು ಕಾದಿದೆಯೋ ನಾಯಿ ಹೇಲು ತಿಂದು ಮೇಕೆ ಬಾಯಿಗೆ ಒರೆಸಿದಂತೆ ಅಣ್ಣಂದಿರ ವ್ಯವಹಾರಗಳು. ತಾವು ಮಾಡುವ ಕುತಂತ್ರದಲ್ಲಿ ಮೋಸಗಳು ತಮಗಾಗದ ನಿರಪರಾಧಿಗಳ ಮೇಲೆ ಹೊರಿಸಿ ಅಪರಾಧಿಗಳಾಗಿ ಮಾಡಿ ಖುಷಿ ಪಡೋ ದುಷ್ಟರು.
ಕಳೆದ ವರ್ಷ ನಡೆದ ಆ ಘಟನೆ! ನನ್ನ ಗಂಡನ ಮೇಲೆ ಹೊರಿಸಿದ ಆಪಾದನೆ. ಬೇಕಾ ತವರು. ಆದರೂ ತಂದೆಯ ನೆನಪಾದರೆ ಎದೆಯಲ್ಲೇನೋ ತಳಮಳ. ಆಸ್ತಿ ಆಸೆಗೆ ತಂದೆಯನ್ನೇ ಕೊಲೆ ಮಾಡಲು ಹೇಸದ ಕುಲಪುತ್ರರು. ಅಪ್ಪ ಗಳಿಸಿದ ಹೇರಳವಾದ ಆಸ್ತಿಯ ಗುಟ್ಟಾದರೂ ಏನು? ತನ್ನನ್ನೇ ನಂಬಿ ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ ತಮ್ಮಂದಿರಿಗೆ ಮಾಡಿದ ಮೋಸದ ಫಲವನ್ನು ಮಕ್ಕಳ ಮೂಲಕ ಅನುಭವಿಸಿದ್ದಾರೆ ಎಂದು ಬಲ್ಲವರು ಆಡಿಕೊಳ್ಳುವಾಗ ಮನಸ್ಸಿಗಾಗುವ ನೋವು, ಅಪ್ಪನ ಬಗ್ಗೆ ತಿರಸ್ಕಾರ, ಸುಳ್ಳಿನ ಸರಮಾಲೆ ಪೋಣಿಸುವ ಅಣ್ಣಂದಿರ ಬಗ್ಗೆ ಜಿಗುಪ್ಸೆ ಒಟ್ಟಿನಲ್ಲಿ ನನ್ನ ಬಗ್ಗೆಯೇ ಕೀಳರಿಮೆ.
ಅತ್ತೆ ದಿನಕ್ಕೊಮ್ಮೆಯಾದರೂ ನಿನ್ನಣ್ಣಂದಿರು ಭಾವನಿಗೇಂತ ಉಡುಗೊರೆ ಕೊಟ್ಟರಲ್ಲವೇ ಎಂದು ಕುಟಿಕೆಯಾಡುವಾಗ, ಛೆ ನಾ ಮಾಡದ ತಪ್ಪಿಗೆ ನನಗೆಂತಾ ಶಿಕ್ಷೆ. ಮೂವರು ಅಣ್ಣಂದಿರಿಗೆ ಒಬ್ಬಳೆ ತಂಗಿಯಾಗಿ ಹುಟ್ಟಿದ್ದೇ ತಪ್ಪಾಯಿತೇನೊ ಎನ್ನುವ ಕೊರಗು ಕಾಡುತ್ತದೆ.
ಅಂದು ನಡೆದದ್ದಾದರೂ ಏನು! ನನ್ನ ತಾಯಿಯ ತಮ್ಮ ಪುಟ್ಮಾವಗೆ ಹೇರಳವಾದ ಆಸ್ತಿ ಇದೆ. ಒಡವೆ, ಹಣ ಬೇಕಾದಷ್ಟಿದೆ. ಆದ್ರೆ ತುಂಬಾ ಜಿಪುಣರು. ಅದರೊಂದಿಗೆ ಮರ್‍ಯಾದೆಯುಳ್ಳ ಜನ. ಯಾವುದಾದ್ರೂ ಸಹಿಸಿಯೇನು ಮಾನಕ್ಕೆ ಮುಳ್ಳು ಬಂದ್ರೆ ಪ್ರಾಣ ಯಾತಕ್ಕೆ ಬೇಕು ಎನ್ನುವವರು. ಅಕ್ಕನ ಮಕ್ಳು ಅಂದ್ರೆ ನಿದ್ದೆ ಕಣ್ಣಲ್ಲೂ ಬೆಚ್ಚಿ ಬೀಳ್ತಾರೆ. ಹಾಗಿರುವಾಗ ನನ್ನಪ್ಪ, ಅಣ್ಣಂದಿರ ದೌಲತ್ತಲ್ಲಿ ಸಾಲ ಕಟ್ಟದೆ ಆಸ್ತಿ ಹರಾಜಿಗೆ ಬಂದಾಗ ಮಾವನಲ್ಲಿ ಸಾಲ ಕೇಳಲು ದೊಡ್ಡಣ್ಣ ಸುರೇಶ ಹೋದ. ಹಣ ಕೊಡದಿದ್ದರೂ ಆಗುತ್ತಿತ್ತು. ಆದರೆ ಅವಮಾನ ಮಾಡಿ ಇವರುಗಳ ಜಾತಕವನ್ನೇ ತೆರೆದಿಟ್ಟು ಕಳಿಸಿದ್ದಾರೆ. ಇದನ್ನು ಸಹಿಸದ ಸುರೇಶಣ್ಣ ಒಂದೂ ಮಾತೂ ಆಡದೆ ಮನೆಗೆ ಬಂದು ತಮ್ಮಂದಿರಾದ ದಿನೇಶ, ಮಹೇಶರೊಡಗೂಡಿ ಸಂಚು ಮಾಡಿ ಮಾವನ ಮನೆಯವರನ್ನೆಲ್ಲ ತಮ್ಮ ಮನೆಗೆ ಕರೆಸಿಕೊಂಡು, ಅವರ ಮನೆಯಿಂದ ಹಣ, ಒಡವೆ ಎಲ್ಲಾ ದೋಚಿಕೊಂಡು ಬಂದ್ರು. ಮನೆಗೆ ವಾಪಾಸ್ಸಾದಾಗ ಅಳಿಯಂದಿರ ಮಸಲತ್ತು ತಿಳಿಯಿತು. ಅವರಲ್ಲಿ ಗಲಾಟೆಗೆ ಹೋದ್ರೆ ಕೆಲ ಕೆಡುತ್ತದೆಂದು ಅಕ್ಕ ಭಾವನಲ್ಲಿ ನಡೆದ ವಿಷಯವನ್ನೆಲ್ಲ ಹೇಳಿಕೊಂಡರು.
ನನ್ನ ಈ ಮೂರು ಗಂಡು ಮಕ್ಕಳು ಹರಿಹರ ಬ್ರಹ್ಮರಿಗೆ ಸಮಾನ ಎಂದು ಹೊಗಳುತ್ತಿದ್ದೆಯಲ್ಲ. ಈಗ ನಿನ್ನ ಮಕ್ಕಳು ನಿನ್ನ ತವರಿಗೆ ಕನ್ನ ಹಾಕಿ ದಾನವರಾದದ್ದನ್ನು ಹೊಗಳಿಕೊಂಡು ಬರುವುದಿಲ್ಲವೇ? ಎಂದು ಹಂಗಿಸಿದ ಗಂಡನ ಕೊಂಕು ನುಡಿಗೆ ಅಕ್ಕನ ಮನಸ್ಸು ರೋಸಿ ಹೋಗಿ,
ರಕ್ತ ಗುಣ ಎಲ್ಲಿಗೆ ಹೋಗುತ್ತೆ. ಬೆಳಿತಾ ಬೆಳಿತಾ ಮನೆತನದ ಬಳುವಳಿ ತಾನಾಗೆ, ಬರುವುದು ವಾಡಿಕೆ ತಾನೆ. ನಿಮ್ಮನ್ನೇ ನೀವು ಕೇಳಿಕೊಳ್ಳಿ. ಆಗೆಲ್ಲ ತಿಳಿದಿರುತ್ತದೆ ಅಕ್ಕ ತಿರುಗೇಟು ಕೊಟ್ಟಳು.
ಅಕ್ಕ ನನ್ನ ಸಮಸ್ಯೆಗೆ ಪರಿಹಾರ ಕೇಳಕೆ ಬಂದ್ರೆ ನೀವು ಕಚ್ಚಾಡಿಕೊಳ್ತೀರಲ್ಲ. ನನ್ನ ಪ್ರಾಣ ಕುತ್ತಿಗೆಗೆ ಬಂದಿದೆ. ನಾನೇನು ಮಾಡ್ಲಿ ಹೇಳಿ?
ಸುಧ ನಿನ್ನ ಗಂಡ ಎಲ್ಲಿಗೆ ಹೋಗಿದ್ದಾನೆ. ಒಮ್ಮೆ ಕರಿ ಮಾರಾಯ್ತಿ ಅಕ್ಕ ಸೊಸೇನ ಕರೆದು ಕೇಳಿದಳು.
ಅವರು ಬೆಳಿಗ್ಗೇನೆ ಬ್ಯಾಂಕ್ ಸಾಲಕ್ಕೆ ಏನಾದ್ರೊಂದು ವ್ಯವಸ್ಥೆ ಮಾಡಿ ಬರುತ್ತೇವೆಂತ ದಿನೇಶನ ಕರ್‍ಕೊಂಡು ಹೋದ್ರಲ್ಲ ಅತ್ತೆ.
ಸೊಸೆ ಮಾತು ಕೇಳಿ ಊಟ ಮಾಡಿ ಹೋಗು ಪುಟ್ಟಣ್ಣ. ಅಷ್ಟರೊಳಗೆ ನಿನ್ನಳಿಯಂದಿರು ಕಾರುಬಾರು ಮುಗ್ಸಿ ಬರ್‍ತಾರೆ. ಆಗ ಕೇಳೋಣವಂತೆ ಅಕ್ಕ ಅಷ್ಟು ಹೇಳಿ ಒಳಗೆದ್ದು ಹೋದಳು.
ಭಾವ ಈ ಮಕ್ಕಳದ್ದೇ ತಲೆ ಬಿಸಿ ಮಾರಾಯ. ಮಕ್ಕಳಿಲ್ಲದವರಿಗೆ ಇಲ್ಲಾನ್ನುವುದೊಂದೇ ಚಿಂತೆಯಾದ್ರೇ. ಇದ್ದವರಿಗೆ ಸಾಯೋತನಕ ನೆಮ್ಮದಿ ಇಲ್ಲ. ಕೂತಿರು ಈಗ ಬರುತ್ತೇನೆ ಅವರು ಹೋದರು.
ಈ ಚಿತಾವಣೆಗೆ ಕಾರಣ ನೆನಪಾಯಿತು. ಮಗಳನ್ನು ಇವರ ಮನೆಗೆ ಕೊಡಲಿಲ್ಲ ಅನ್ನೋ ಸಿಟ್ಟಿಗೆ ಹೀಗೆ ಸೇಡು ತೀರ್‍ಸಿಕೊಳ್ತಿದ್ದಾರೆ. ಕಳೆದ ವರ್ಷ ಕೊನೆ ಮಗನ ಮದುವೆಗೆ ಮೊದ್ಲು. ಪುಟ್ಟಣ್ಣ ಸುಚಿತ್ರನ ನಮ್ಮ ಮಹೇಶಗೆ ತಂದುಕೊಳ್ಳೋಣಾಂತ ನಿನ್ನಕ್ಕ ನಾನು ಯೋಚಿಸಿದ್ದೇವೆ. ನೀನೇನು ಹೇಳ್ತೀಯಾ? ಭಾವ ಕೇಳಿದ್ರು ಪುಟ್ಟಣ್ಣಗೆ ಪಕ್ಕನೆ ಭಾವನ ನೀನೇನು ಹೇಳ್ತೀಯಾ? ಭಾವ ಕೇಳಿದ್ರು. ಪುಟ್ಟಣ್ಣಗೆ ಪಕ್ಕನೆ ಭಾವನ ಸಂಚು ತಿಳೀತು. ನನಗೊಬ್ಳೇ ಮಗಳು. ಗಂಡು ಸಂತಾನ ಇಲ್ಲ. ಆಸ್ತಿ ಬದುಕು ಬೇಕಾದಷ್ಟು ಇದೆ. ಅದಕ್ಕೆ ಗಾಳ ಹಾಕ್ತಿದ್ದಾರೆ. ಅಕ್ಕನನ್ನು ಕೊಟ್ಟೇ ಯಾಕಾದ್ರೂ ಈ ಸಂಬಂಧ ಮಾಡಿದೆವಪ್ಪಾ ಅನ್ನೋ ಚಿಂತೆಯಲ್ಲಿ ಅಪ್ಪ ಕಣ್ಮುಚ್ಚಿದ್ದರು. ಈಗ ನನ್ನ ಮಗಳ ಮೇಲೂ ಕಣ್ಣು ಹಾಕಿದ್ದಾರಲ್ಲ.
ಯಾಕೆ ಪುಟ್ಟಣ್ಣಾ ಮೌನವಾದೆ. ಒತ್ತಾಯವೇನೂ ಇಲ್ಲ. ಹಳೇ ಸಂಬಂಧ ಉಳ್ಕೊಳ್ಳಲಿ ಅನ್ನೋ ಹಂಬಲ ಅಷ್ಟೇ.
ತಾಯಿ ಮಗಳ ಕೇಳಬೇಕು. ಸುಚಿ ಡಿಗ್ರಿ ಮುಗಿಯೋಕೆ ಇನ್ನೂ ಒಂದು ವರ್ಷ ಇದೆ. ಅವಳೊಪ್ತಾಳ ಭಾವ.
ಕೇಳಿ ನೋಡು. ಒಪ್ಪಿದ್ರೆ ಸಂತೋಷ. ಇಲ್ಲದಿದ್ದರೆ ಚಂಪನ ಕಡೆ ಸಂಬಂದsದ ಹುಡುಗಿ ಇದ್ದಾಳಂತೆ. ಚಂಪ ಒತ್ತಾಯ ಮಾಡ್ತಿದ್ದಾಳೆ?.
ಆಗ್ಲಿ ಭಾವ ಮನೇಲಿ ಕೇಳಿ ಹೇಳುತ್ತೇನೆ.
ಈ ವಿಷಯ ಮನೆಯಲ್ಲಿ ಪ್ರಸ್ತಾಪ ಮಾಡಿ ದೊಡ್ಡ ಹಗರಣವಾಯ್ತು. ತಾಯಿ ಮಗಳು ನನ್ನ ತರಾಟೆಗೆ ತಗೊಂಡ್ರು.
ಹೋಗಿ ಹೋಗಿ ಮತ್ತೆ ಆ ಹಳಸಲು ನೆಂಟಸ್ತಿಗೆಗೆ ಒಪ್ಪಿ ಬಂದಿದ್ದೀರಾ. ನಿಮ್ಗೆ ನಾಚಿಕೆ ಆಗಬೇಕು. ನಾನು ಇರೋ ತನಕ ಆ ಮನೆಗೆ ಮಗಳ ಕೊಡೋದಿಲ್ಲ ತಿಳ್ಕೊಳಿ.
ನಾನು ಒಪ್ಪಿ ಬಂದಿಲ್ಲ ಕಣೆ ಕಮ್ಲು. ನಿಮ್ಮ ಒಪ್ಪಿಗೇನೇ ಮುಖ್ಯ ಅಂತ ಹೇಳಿದ್ದೇನೆ.
ಅಪ್ಪಾಜಿ ನಾನು ತುಂಬಾ ಓದಬೇಕು. ಡಿಗ್ರಿ ಮುಗ್ಸಿ ಕೆ.ಎ.ಎಸ್ ಮಾಡೋದೂಂತ ನಾನು, ಅನು ಮಾತಾಡಿಕೊಂಡಿದ್ದೇವೆ. ಇನ್ನು ನಾಲ್ಕು ವರ್ಷ ಮದುವೆ ವಿಷಯ ಎತ್ತಬೇಡಿ. ಅತ್ತೆ ಮನೆಯವರಿಗೂ ಇದೇ ಮಾತು ಹೇಳಿ ಬಿಡಿ ಸುಚಿ ಹುಕುಂ ಮಾಡಿದಳು.
ಮಗಳ ಆಸೇನ ನಿರಾಕರಣೆನ ಅಕ್ಕ ಭಾವಗೆ ಹೇಳಿದಾಗ, ಹೌದು ಪುಟ್ಟಣ್ಣ ಸುಚಿ ಓದಿ ಅಧಿಕಾರಿಯಾಗೋದನ್ನ ನೊಡೋ ಹಂಬಲ ನಂಗೂ ಇದೆ. ಅವಳಾಸೆಯಂತೆ ಓದ್ಲಿ ಬಿಡು ಎಂದು ಅಕ್ಕ ಸಂತೋಷದಿಂದ ಹೇಳಿದಳು.
ಭಾವ ಮಹೇಶ ಮಾತ್ರ ಉರಿದು ಬಿದ್ರು. ನಮ್ಮ ಮಹೇಶಗೆ ಹೆಣ್ಣು ಕೊಡೋರಿಲ್ಲಾಂತ ನಿನ್ನ ಮಗಳ ಕೇಳಿಲ್ಲ. ನೆಂಟಸ್ತಿಗೆ ಉಳೀಳಿ ಅನ್ನೋ ಆಸೆಯಿಂದ ಕೇಳಿದ್ರೆ ಬಿಂಕ ತೋರ್‍ಸಿ ನನ್ನ ಮಗ ಹೆಚ್ಚು ಓದಿಲ್ಲ ಅನ್ನೋದನ್ನ ಹೀಗೂ ಹಂಗಿಸಿದಳಾ ಅಂದ್ರ್ರು.
ಮಹೇಶ ಹೋಗಿ ಹೋಗಿ ಇಂಥ ಜಿಪುಣರ ಸಂಬಂಧಕ್ಕೆ ಹಂಬಲಿಸಿದ್ದೀರಲ್ಲ. ನಾನೇನು ಇವರ ಮಗಳ ಮದುವೆಯಾಗೋಕೆ ತುದಿಗಾಲಲ್ಲಿ ನಿಂತಿದ್ದೀನಾ. ಸಣ್ಣತ್ತಿಗೆ ಹೇಳಿದ ಹೆಣ್ಣು ಇವರ ಮಗಳಿಗಿಂತ ಸಾವಿರ ಪಾಲು ಮೇಲು. ವಿದ್ಯೆ, ಬುದ್ದಿ, ಚಂದ, ಶ್ರೀಮಂತಿಕೆ ಎಲ್ಲದ್ರಲ್ಲೂ. ನನ್ನ ಒಂದು ಮಾತೂ ಕೇಳದೆ ನೀವ್ಯಾಕೆ ಇವರ ಮುಂದೆ ರಂದಿಕೊಂಡು ಹೋಗಿದ್ದೀರಪ್ಪ ಎಂದಾಗ ಅವನ ಕಪಾಳಕ್ಕೆರಡು ಬಾರಿಸುವಷ್ಟು ಸಿಟ್ಟು ಬಂದಿತ್ತು.
ಆಗ ಅಕ್ಕನೇ ಎಲ್ಲರಿಗೂ ಸಮಾಧಾನ ಹೇಳಿದಳು. ನೀವಿಬ್ರು ಯಾಕಿಷ್ಟು ಗರಂ ಆಗಿದ್ದೀರ. ಹೆಣ್ಣು, ಹೊನ್ನು, ಮಣ್ಣು ಅನ್ನೋದು ಋಣಾನುಬಂಧ. ಇಷ್ಟು ತಿಳ್ಕೊಂಡು ಈ ಮಾತು ಇಲ್ಲಿಗೆ ಬಿಟ್ಟು ಬಿಡಿ
ಏನು ಚಿಕ್ಕಪ್ಪ ಒಬ್ರೇ ಕೂತು ಬೇಜಾರಾಯ್ತ. ಕಾಫಿ ಕುಡಿರಿ ವಿಷಯ ತಿಳೀತು. ನಿಮ್ಮ ಕಷ್ಟದ ಫಲನ ಯಾರಿಗೂ ಜೀರ್ಣಿಸಲಾಗಲಿಕ್ಕಿಲ್ಲ. ಯಾರು ಕದ್ದರು ಅನ್ನೋದನ್ನ ಇವರುಗಳು ಬಂದ ಮೇಲೆ ಪತ್ತೆ ಮಾಡಿದರಾಯ್ತು. ಚಂಪನ ಮಾತಿಗೆ ವಾಸ್ತವ್ಯಕ್ಕೆ ಬಂದು ಅವಳ ಮುಖನೇ ನೋಡಿದೆ. ಅಕ್ಕನ ಸದ್ಗುಣಕ್ಕೆ ತಕ್ಕ ಸೊಸೆಯರು ಸಿಕ್ಕಿದ್ದಾರನ್ನೋ ಸಮಾಧಾನ. ಅಕ್ಕ ನನ್ನ ತಮ್ಮ ಅನ್ನೋದಕ್ಕಿಂತಲೂ ಮಗ ಅನ್ನೋ ರೀತೀಲಿ ಸಾಕಿದಳು. ಎಷ್ಟೊಂದು ಮುಚ್ಚಟೆ ಮಾಡುತ್ತಿದ್ದಳು. ಸತ್ಯವಂತೆ, ಶಾಂತಿಪ್ರಿಯ, ಕಪಟ ಮೋಸ, ವಂಚನೆ ಎಂಬುದು ಕಾಣದೆ ಬೆಳೆದ ಒಂದೇ ಬಳ್ಳಿಯ ಎರಡು ಕುಡಿಗಳು ನಾವು. ಆದರೆ ಅಕ್ಕನ ಮಕ್ಕಳಿಗೇಕೆ ಇಂಥಹ ಅಧಮರಾದ್ರು. ಅಕ್ಕನ ಮನಸ್ಸಲ್ಲಿ ಮಕ್ಕಳ ಬಗ್ಗೆ ಎಷ್ಟೊಂದು ನೋವಿರಬಹುದು. ಆದರೂ ಯಾರಿಗೂ ತನ್ನ ನೋವು ಕಷ್ಟಗಳನ್ನು ತೋರಿಸಿಕೊಳ್ಳದೆ ಸ್ವಾಭಿಮಾನದ ನಿಸ್ವಾರ್ಥಿ ನನ್ನಕ್ಕ. ಅದೇ ನನಗೆ ಹೆಮ್ಮೆ. ಅಕ್ಕನ ಮಗಳು ಮಾತ್ರ ಅಕ್ಕನ ಗುಣ ನಡತೆಗಳನ್ನೇ ಹೊತ್ತುಕೊಂಡು ಹುಟ್ಟಿದ್ದಾಳೆ. ಎಲ್ಲರಿಗೂ ಸವಿತ ಅಂದರೆ ಪ್ರಾಣ ಅವಳಿಗೆ ಸರಿಯಾದ ಜೊತೆಗಾರ ರವಿ. ಆದರ್ಶ ಜೋಡಿ.
ಕದ್ದ ಹಣ ಬ್ಯಾಂಕಿಗೆ ಕಟ್ಟಿ ಒಡವೆಗಳ ತಂಗಿ ಮನೆಗೆ ತಂದು ನೋಡು ಸವಿ ಇವತ್ತು ಬ್ಯಾಂಕಲ್ಲಿ ಅಡವಿಟ್ಟುಕೊಳ್ಳೋದಿಲ್ಲವಂತೆ ಹಾಗೆ ನಾಳೆ ಬರ್‍ತೀವಿ. ಅಲ್ಲಿವರೆಗೂ ಈ ಗಂಟು ಇಲ್ಲೇ ಇರಲಿ ಎಂದಾಗ ಅಲ್ಲೇ ಇದ್ದ ರವಿ.
ಹೇಗೂ ನಾಳೆ ಬರಲಿಕ್ಕಿದೆಯಲ್ಲ. ಅದೇನು ದೊಡ್ಡ ಹೊರೆಯಲ್ಲ ನೀವು ಮನೆಗೆ ತಗೊಂಡು ಹೋಗಿ ಭಾವ. ಈ ಇಟ್ಟುಕೊಳ್ಳೋದು, ಕೊಟ್ಟುಕೊಳ್ಳೋದು ವ್ಯವಹಾರ ನೆಂಟಸ್ತಿಗೆಯಲ್ಲಿ ಇರಬಾರದು ಎಂದು ಕಟುವಾಗಿ ಹೇಳಿದನ್ನು ಕೇಳಿ ಸುರೇಶಗೆ ಸಿಟ್ಟು ಬಂತು. ತಂಗಿ ಪಾನಕ ತರುವ ಮೊದಲೇ ಬಿರುಗಾಳಿಯಂತೆ ಅಲ್ಲಿಂದ ಹೊರಟು ಹೋದರು.
ಅಣ್ಣಯ್ಯರು ಹೋಗಿಯೇ ಬಿಟ್ರಾ ಅದ್ಯಾಕೆ ರವಿ ಸವಿತ ಜ್ಯೂಸ್ ತಂದವಳು ಆಶ್ಚರ್ಯದಿಂದ ಕೇಳಿದಳು.
ನೋಡು ಸವಿ ಅವರುಗಳ ವ್ಯವಹಾರನೇ ಸರಿ ಇಲ್ಲ. ಊಟ ತಿಂಡಿ ಯಾವುದರಲ್ಲೂ ಕಡಿಮೆ ಮಾಡಬೇಡ. ಬೇಕಾದಷ್ಟು ಸತ್ಕಾರ ಮಾಡು ಆದರೆ ಇಂಥದಕ್ಕೆಲ್ಲ ನೀನು ಸದರ ಕೊಡಬೇಡ. ಇವತ್ತಿಟ್ಟುಕೊಂಡರೆ ನಾಳೆ ಬಂದು ಇಷ್ಟೇನ ನಾವು ಇಟ್ಟು ಹೋದ ಒಡವೆಗಳು. ನೀವು ತೆಗೆದಿಟ್ಟುಕೊಂಡ್ರ ಹೇಗೆ. ಅಂತ ಕೆಳಜಾತಿ ಅವರುಗಳ ನೆರಳು ಕಂಡರೂ ಆಗೋದಿಲ್ಲ.
ಸುರೇಶ ಸಿಟ್ಟಿನಲ್ಲಿ ಬೈಕ್ ಹಾರಿಸಿಕೊಂಡೇ ಬಂದ. ಭಾವನ ಅಹಂಕಾರ ಇಳಿಸೋ ದಾರಿ ಯಾವುದಪ್ಪಾ ಅನ್ನೋ ಚಿಂತೆಯಲ್ಲಿ ಮನೆ ತಲುಪಿದ್ದೇ ತಿಳಿಲಿಲ್ಲ. ಮನೇಲಿ ಮಾವನನ್ನು ಕಂಡದ್ದೇ, ತಲ್ಲಣಿಸಿ ತಮ್ಮನ ಕಡೆ ನೋಡಿದ. ದಿನೇಶ ಕತ್ತು ಇಳಿ ಹಾಕಿಕೊಂಡು ರೂಮು ಸೇರಿದ.
ಧೈರ್ಯ ತಂದುಕೊಂಡು ಏನು ಮಾವ ನಿನ್ನೆ ತಾನೆ ಹೋದವರು ಇವತ್ತು ಮತ್ತೆ ಬಂದಿದ್ದೀರಿ. ಹೊಸ ಒಸಗೆ ಏನಾದರೂ ಇದೆಯಾ? ಇದೆಯಪ್ಪಾ ಸುರೇಶ. ಅದಕ್ಕೆ ಅಕ್ಕ ಭಾವನ ಜೊತೆ ಮಾತಾಡಿ ಒಸೆಗನ ಖಾತ್ರಿಪಡ್ಸಿಕೊಳ್ಳೋಕಂತ ಬರೆಲೇ ಬೇಕಾಯಿತು.
ಇವರುಗಳ ಮಾತು ಕೇಳಿ ಉಂಡು ವಿಶ್ರಾಂತಿಗೇಂತ ಮಲಗಿದ ಗಂಡ ಹೆಂಡತಿ ಎದ್ದು ಹೊರಗೆ ಬಂದರು.
ಸುರೇಶ ಬ್ಯಾಂಕಿಗೆ ಹಣ ಕಟ್ಟಿ ಬಂದ್ರಾ?
ಹೌದಮ್ಮ ಇದ್ದ ಹಣ ಕಟ್ಟಿ ಬಂದೆ. ಸ್ವಲ್ಪ ಕಡಿಮೆಯಾಯ್ತು. ಅದಕ್ಕೂ ವ್ಯವಸ್ಥೆಗೆ ಮಾಡಿದ್ದೇನೆ. ಎಲ್ಲರ ಚಿನ್ನಾನು ಬ್ಯಾಂಕಿಗೆ ಅಡವಿಟ್ಟು ಕಟ್ಟಿದರಾಯ್ತು?.
ಹಣ ಎಲ್ಲಿಂದ ತಂದೆಯಪ್ಪ.
ನನ್ನ ಗೆಳೆಯನ ಹತ್ತಿರ ಸ್ವಲ್ಪ ಸಾಲ ತಂದಿದ್ದೇನೆ.
ನಿನ್ನ ಗೆಳೆಯನ ಫೋನ್ ನಂಬರ್ ಇದ್ರೆ ಕೊಡು ನೀನು ಸ್ವಲ್ಪ ಮಾತಾಡಬೇಕು. ಗಾಬರಿಯಲ್ಲಿ ಅಮ್ಮನ ಮುಖನೇ ನೋಡಿದ. ಅಪ್ಪನಿಗೆ ಕೇರೇ ಮಾಡದ ಮಕ್ಕಳು ಅಮ್ಮನ ಮುಖನೇ ನೋಡಿದ. ಅಪ್ಪನಿಗೆ ಕ್ಯಾರೇ ಮಾಡದ ಮಕ್ಕಳು ಅಮ್ಮನ ನೋಡಿದ್ರೆ ಹೆದರುತ್ತಿದ್ದರು. ಅಮ್ಮ ನ್ಯಾಯಕ್ಕೆ ಬೆಲೆ ಕೊಡುವಷ್ಟು ಅಪ್ಪ ಅಪರಾಧಕ್ಕೆ ಬೆಲೆ ಕೊಡುವುದು. ಛೆ. ಮಾವ ಇಷ್ಟು ಬೇಗ ವಕ್ರಸ್ತನಂತ ತಿಳೀಲಿಲ್ಲ. ಅಪ್ಪನ ಹತ್ತಿರ ಎಲ್ಲಾ ಹೇಳಿ ವ್ಯವಸ್ಥೆ ಮಾಡುವ ಮೊದಲೇ ಹೀಗಾಯಿತಲ್ಲ. ಅಮ್ಮನಿಗೇನು ಹೇಳೋದಪ್ಪ. ಏನು ಯೋಚಿಸ್ತಿದ್ದಿ. ನಂಬರ್ ಕೊಡು.
ಇಲ್ಲಮ್ಮ ಅವನು ಫೋನಿಗೆ ಸಿಗೋದಿಲ್ಲ. ಹೆಂಡ್ತಿ ಮನೆಗೆ ಹೋಗ್ತಿದ್ದಾನೆ. ಅಲ್ಲಿ ನೆಟ್‌ವರ್ಕ್ ಇಲ್ಲ
ಹೋಗ್ಲಿ ಯಾವ ಗೆಳೆಯ? ಯಾವ ಊರು? ತಿಳಿಸು.
ಯಾಕಮ್ಮ ನಾನು ಸುಳ್ಳು ಹೇಳುತ್ತೇನೇಂತ ಅನುಮಾನನ?
ನನಗೆ ನಿಜ ತಿಳಿಬೇಕು. ನಿಮ್ಮ ಓತಿಕ್ಯಾತ ಬುದ್ದಿ ಬಯಲಾಗಬೇಕು. ಮೊನ್ನೆ ಮಾವನವರು ಇಲ್ಲಿಗೆ ಬಂದಾಗ ನೀನು ದಿನೇಶ ಬೈಕಲ್ಲಿ ಹನ್ನೊಂದು ಗಂಟೆ ರಾತ್ರಿಯಲ್ಲಿ ಹೋದದ್ದು ನಿನ್ನ ಗೆಳೆಯನ ಹಣ ಕೇಳಲಿಕ್ಕಾ ಹೇಳು? ಅಮ್ಮನ ಆ ಮಾತು ಕೇಳಿದ್ದೇ ತಡ ಸುರೇಶನಿಗೆ ಕೈಕಾಲು ನಡುಕ ಶುರುವಾಯ್ತು. ಇನ್ನು ಸುಳ್ಳು ಹೇಳೋದ್ರಿಂದ ಪ್ರಯೋಜನ ಇಲ್ಲ. ಅಮ್ಮ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರಬೇಕು. ಮುಖದಲ್ಲಿಳಿದ ಬೆವರು ಒರೆಸಿಕೊಳ್ಳುತ್ತಾ. ಆಸ್ತಿ ಹರಾಜಿಗೆ ಬಂದದ್ದು, ಮಾವನಲ್ಲಿ ಸಾಲ ಕೇಳಿದ್ದು. ಮಾವ ಬಾಯಿಗೆ ಬಂದಂತೆ ಬೈದದ್ದು, ತಮ್ಮಂದಿರ ಜೊತೆ ಸೇರಿ ಮಾಡಿದ ಸಂಚು. ಈಗ ಬ್ಯಾಂಕಿಗೆ ಕಟ್ಟಿದ ಹಣದ ಮೊತ್ತ. ಇನ್ನೂ ಕಟ್ಟಲಿರುವ ಸಾಲ. ಎಲ್ಲಾ ಹೇಳಿ ಚಿನ್ನದ ಗಂಟನ್ನು ತಾಯಿ ಕೈಗಿಟ್ಟು ನಮ್ಮನ್ನು ಕ್ಷಮಿಸಿಬಿಡು ಅಮ್ಮಾ ಎಂದು ಕಾಲಿಗೆ ಬಿದ್ದ. ಮಗ ಕೊಟ್ಟ ಚಿನ್ನದ ಗಂಟನ್ನು ತಮ್ಮನ ಕೈಗಿಟ್ಟು. ಸರಿಯಿದಿಯಾ ನೋಡಿಕೋ ಎಂದವರೆ ಮಗನ ಹಿಡಿದೆತ್ತಿ ಕೆನ್ನೆಗೆ ರಪ್ಪನೆ ಬಿಗಿದು ನನ್ನ ಹೊಟ್ಟೆಯಲ್ಲಿ ಯಾಕೆ ಹುಟ್ಟಿದ್ರೊ! ನಿಮ್ಮಂತವರು ಹುಟ್ಟುವುದಕ್ಕಿಂತ ಬಂಜೆಯಾಗಿದ್ರೆ ಒಳ್ಳೆಯದಿತ್ತು. ನಿಮ್ಮನ್ನು ಮಕ್ಕಳೂಂತ ಹೇಳಿಕೊಳ್ಳೋಕೆ ನಾಚಿಕೆಯಾಗುತ್ತದೆ. ಅಂತ ಮುಖ ಮುಚ್ಚಿಕೊಂಡು ಕಣ್ಣೀರು ಹರಿಸಿದರು.
ನೀ ಮಾಡದ ತಪ್ಪಿಗೆ ಯಾಕಳ್ತೀಯಕ್ಕ. ನೀನತ್ತರೆ ನನ್ನೆದೆಗೆ ಮಾಡದೆ ನಿಮ್ಮಲ್ಲಿಗೆ ಬಂದದ್ದು. ನನ್ನ ಕ್ಷಮಿಸಿಬಿಡಕ್ಕ ಎಂದು ನೊಂದುಕೊಂಡ ತಮ್ಮನ ಮಾತು ಕೇಳಿ.
ಸುರೇಶ ಮಾವನ ದುಡ್ಡಿಗೆ ಕೂಡಲೇ ವ್ಯವಸ್ಥೆ ಮಾಡು. ಇಲ್ಲಾಂದ್ರೆ ನಾನೇ ಪೋಲೀಸರಿಗೆ ಹೇಳಿ ಮೂಳೆ ಮುರಿಸುತ್ತೇನೆ. ಆಯ್ತಮ್ಮ ಎಂದು ಭಾರೀ ವಿನಯದಿಂದ ಮಾವನಿಗೂ ಕ್ಷಮಿಸಿ ಎಂದು ಕೈ ಮುಗಿದು ಒಳಗೆದ್ದು ಹೋದ.
ಅಲ್ಲ ಪುಟ್ಟಣ್ಣಾ. ಸುರೇಶ ನಿನ್ನಲ್ಲಿಗೆ ಸಾಲ ಕೇಳಲು ಬಂದಾಗಲೇ ಏನಾದರೂ ಒಂದಿಷ್ಟು ಕೊಟ್ಟು ಕಳ್ಸಿದ್ರೆ ಈ ರಂಪಾಟ ಇರ್‍ತಿತ್ತ ಮಾರಾಯ ಭಾವನ ಮಾತು ಕೇಳಿ ಪುಟ್ಟಣ್ಣ ಉರಿದು ಬಿದ್ದು,
ಏನು ಭಾವ ನೀವು ಹೇಳೋದು, ಮಕ್ಕಳು ಮಾಡಿದ್ದೇ ಸರಿ ಅನ್ನೋ ಹಾಗೆ ಹೇಳ್ತೀರಿ. ಅವರು ಬರೋ ಬದಲು ನೀವು, ಅಕ್ಕ ಬಂದಿದ್ರೆ ಆ ಮಾತು ಬೇರೆ ಹೋಗ್ಲಿ ನೀವೊಂದು ಮಾತು ಫೋನ್ ಮಾಡಿ ಮಕ್ಳು ಬರ್‍ತಾರೆ ಏನಾರು ಸಹಾಯ ಮಾಡು ಅಂದಿದ್ರೆ ಆಗ್ತಿರಲಿಲ್ವ. ಹಿರಿಯರೂಂತ ನೀವು ಇರೋದು ಯಾಕೆ?
ಮಕ್ಳು ಈ ರೀತಿ ಹಾಳಾಗೋಕೆ ಇವರೇ ಕಾರಣ ಪುಟ್ಟಣ್ಣ. ಅವರು ಮಾಡಿದ್ದೇ ಸರಿ ಅಂತ ಕುಣೀತಾರೆ.
– ಲಲಿತಾಜ ಮಲ್ಲಾರ

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.