ಅಮೆರಿಕದ ಹ್ಯೂಸ್ಟನ್ ನಲ್ಲಿರುವ ಹೊಯ್ಸಳ ಕನ್ನಡ ಸಂಘದ ಅಧ್ಯಕ್ಷರ ಸ್ನೇಹ ಶಾಲೆ ಭೇಟಿ

0

ಬಾಲ್ಯದಲ್ಲಿ ತಾಯಿಯಿಂದ ಕಲಿತ ವಿಚಾರಧಾರೆಗಳು ನಮ್ಮ ಮುಪ್ಪಿನವರೆಗೂ ಇರುತ್ತವೆ. ಮಾತೃದೇವೋಭವ, ಪಿತ್ರದೇವೋಭವ, ಆಚಾರ್ಯ ದೇವೋಭವ ಹಾಗೂ ಅತಿಥಿ ದೇವೋಭವ ಎಂಬ ಸೂಕ್ತಿಗಳೊಂದಿಗೆ ನಾವು ಎಲ್ಲರಲ್ಲೂ ದೇವರನ್ನು ಕಾಣುವಂತಾಗಬೇಕು.

ಸ್ನೇಹ ಶಾಲೆಯಂತಹ ಪ್ರಕೃತಿದತ್ತವಾದ ವಾತಾವರಣದಲ್ಲಿ ಕಲಿಯುವ ನೀವೆಲ್ಲರೂ ಧನ್ಯರಾಗಿದ್ದೀರಿ.

ಕಷ್ಟಪಟ್ಟು ಕಲಿತ ವಿದ್ಯೆ ಮುಂದೆ ನಮ್ಮ ಜೀವನದಲ್ಲಿ ಸಹಾಯಕವಾಗುತ್ತದೆ. ಗುರುಗಳು ಹೇಳುವ ಮಾತುಗಳನ್ನು ಕೇಳಬೇಕು. ಆಯಾ ದಿನದ ಕಾರ್ಯ ಚಟುವಟಿಕೆಗಳನ್ನು ಆಯಾ ದಿನವೇ ಮುಗಿಸಿಕೊಳ್ಳಬೇಕು. ಕಲಿಯಲು ಆಸಕ್ತಿ, ಶ್ರದ್ಧೆ, ಮನಸ್ಸು ಮತ್ತು ಪ್ರಯತ್ನ ಅಗತ್ಯ. ಸಮಯ ಪಾಲನೆಯೊಂದಿಗೆ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಆ ಸಮಯ ನಮ್ಮನ್ನು ಕಾಪಾಡುತ್ತದೆ.

ಆದರೆ ಸಮಯ ಯಾರಿಗಾಗಿಯೂ ಕಾಯುವುದಿಲ್ಲ ಸಿಕ್ಕ ಸಮಯವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಕೇವಲ ಪುಸ್ತಕದ ಜ್ಞಾನವನ್ನು ಮಾತ್ರ ತಿಳಿದುಕೊಳ್ಳುವುದಲ್ಲದೆ ಪ್ರಾಯೋಗಿಕ ಜ್ಞಾನ ನಮ್ಮದಾಗಿಸಿಕೊಳ್ಳಬೇಕು. ಬುನಾದಿ ಗಟ್ಟಿಯಾದರೆ ಮುಂದಿನ ಕಲಿಕೆಯು ಗಟ್ಟಿಯಾಗುತ್ತದೆ.

ಪಠ್ಯ ಬೋಧಿಸುವ ಶಿಕ್ಷಕರೆಲ್ಲರೂ ತಮಗೆಲ್ಲರಿಗೂ ಜವಾಬ್ದಾರಿ ಇದೆ ಎಂಬುದನ್ನು ಅರಿತು ತಮ್ಮ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದಾಗ ಶ್ರೇಷ್ಠ ವಿದ್ಯಾರ್ಥಿಗಳನ್ನು ಭಾರತಕ್ಕೆ ಕೊಡುಗೆಯಾಗಿ ಕೊಡಲು ಸಾಧ್ಯ” ಎಂಬುದಾಗಿ ವತ್ಸ ಕುಮಾರ್ ಹೇಳಿದರು.

ಅಮೆರಿಕದ ಹ್ಯೂಸ್ಟನ್ ನಲ್ಲಿರುವ ಹೊಯ್ಸಳ ಕನ್ನಡ ಸಂಘದ ಅಧ್ಯಕ್ಷರಾಗಿರುವ ಅವರು ತಮ್ಮ ಭಾರತ ಪ್ರವಾಸದ ಮಧ್ಯೆ ಕನ್ನಡ ಮಾಧ್ಯಮದ ಸ್ನೇಹ ಶಾಲೆಯನ್ನು ನೋಡುವುದಕ್ಕಾಗಿಯೇ ಬಂದಿದ್ದರು. ಇವರು ಸ್ನೇಹ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆಯವರು ಸ್ವಾಗತಿಸಿದರು. ಶಾಲಾ ಅಧ್ಯಕ್ಷರಾದ ಡಾ.ಚಂದ್ರಶೇಖರ ದಾಮ್ಲೆಯವರು ಶ್ರೀವತ್ಸ ಕುಮಾರ್ ರವರಿಗೆ ಸ್ಮರಣಿಕೆಯಾಗಿ ಪುಸ್ತಕಗಳನ್ನು ನೀಡಿದರು. ಶಾಲಾ ಶಿಕ್ಷಕ ವೃಂದದವರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.