ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ನ. 22ರಂದು ಶಾಲಾ ಸಂಸ್ಥಾಪಕ ದಿ. ನೆಟ್ಟಾರು ವೆಂಕಟಸುಬ್ಬರಾವ್ ಇವರ ಸ್ಮೃತಿ ದಿನಾಚರಣೆಯನ್ನು ಆಚರಿಸಲಾಯಿತು ಕಾಂಚೋಡು ಶ್ರೀ ಮಂಜುನಾಥ ದೇವಲಯದ ಧರ್ಮದರ್ಶಿಗಳಾದ ಪರಮೇಶ್ವರಯ್ಯ ಕಾಂಚೋಡು ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಾಲ್ಯದಲ್ಲಿ ವೆಂಕಟಸುಬ್ಬರಾವ್ ಅವರೊಂದಿಗಿನ ಒಡನಾಟ ಹಾಗೂ ಶಾಲೆಯ ಸ್ಥಾಪನೆಯ ಬಗ್ಗೆ ಅವರಿಗಿದ್ದ ಬದ್ಧತೆಯನ್ನು ತಿಳಿಸಿದರು. ಶಾಲೆಯ ವಿದ್ಯಾರ್ಥಿಗಳಲ್ಲಿ ಅವರಿಗಿದ್ದ ಮಮತೆ ಮತ್ತುಹಾಸ್ಯ ಪ್ರವೃತ್ತಿಯಿಂದ ಎಲ್ಲರನ್ನು ರಂಜಿಸುವ ಅವರಗುಣವನ್ನು ನೆನಪಿಸಿದರು. ಶಾಲಸಂಚಾಲಕರಾದ ಪಿ.ಜಿ.ಎಸ್.ಎನ್ ಪ್ರಸಾದ್ ಮಾತನಾಡುತ್ತಾ ವೆಂಕಟಸುಬ್ಬರಾವ್ ಶಾಲೆಯನ್ನು ಸ್ಥಾಪಿಸದೇ ಇರುತ್ತಿದ್ದರೆ ನಾವೆಲ್ಲಾ ಪ್ರೌಢಶಾಲೆಯ ಶಿಕ್ಷಣದಿಂದ ವಂಚಿತರಾಗುತ್ತಿದ್ದೆವು. ಆ ನಿಟ್ಟಿನಲ್ಲಿ ಗ್ರಾಮದ ಎಲ್ಲಾ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಸಂಸ್ಥಾಪಕರು ಕಾರಣರು ಎಂದರು. ಅಧ್ಯಕ್ಷಸ್ಥಾನದಿಂದ ಮಾತನಾಡುತ್ತಾ ರಾಧಾಕೃಷ್ಣ ರಾವ್ ಉಡುವೆಕೋಡಿ ಇವರು ಸಂಸ್ಥಾಪಕರಿಗೆ ಶಾಲೆಯ ಸ್ಥಾಪನೆಯಲ್ಲಿದ್ದ ಉದ್ದೇಶ ಪೂರ್ಣವಾಗುವುದು ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದಾಗ ಎಂದರು. ವಿದ್ಯಾರ್ಥಿಗಳು ಸಂಸ್ಥಾಪಕರ ಕುರಿತಾದ ಹಾಡುಗಳನ್ನು ಹಾಡಿದರು ಎಸ್.ಡಿ.ಎಂ.ಸಿ ಅಧ್ಯಕ್ಷ ಧನಂಜಯ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕರಾದ ಯಶೋಧರ ಎನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಉದಯಕುಮಾರ್ ರೈ ವಂದಿಸಿದರು. ವಿದ್ಯಾರ್ಥಿನಿಯರಾದ ಕ್ಷಮಾ ಹಾಗೂ ಜಶ್ಮಿ ಇವರು ಕಾರ್ಯಕ್ರಮ ನಿರ್ವಹಿಸಿದರು.