ಕನ್ನಡ ಭಾಷಾ ಮಾಧ್ಯಮ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಎಚ್ಚರಿಸುವ ಜವಾಬ್ದಾರಿ ನಮ್ಮ ಮೇಲಿದೆ

0

ಸಮ್ಮೇಳನಾಧ್ಯಕ್ಷೆ ಶ್ರೀಮತಿ ಲೀಲಾ ದಾಮೋದರ ಅಭಿಮತ

ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರಿಂದ ಹಲವು ಕೃತಿಗಳ ಬಿಡುಗಡೆ

ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರದ್ದಾಗಿದೆ. ಕರ್ನಾಟಕದ ಎಲ್ಲೇ ಹೋದರೂ ಕನ್ನಡದಲ್ಲೇ ಮಾತನಾಡಬೇಕು. ಪೋಷಕರು ತಮ್ಮ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ಪದಗಳನ್ನು ಬಳಸುವ ಬದಲು ಕನ್ನಡ ಭಾಷಾ ಪದಗಳನ್ನು ಬಳಸುವಂತೆ ಮಾಡಬೇಕಾಗಿದೆ. ಅನ್ಯ ಭಾಷಾ ಪದಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಬೇಕಾಗಿಲ್ಲ. ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ ಪುಸ್ತಕಕ್ಕೆ ಮಹತ್ವದ ಸ್ಥಾನವಿದ್ದು, ಕನ್ನಡ ಭಾಷಾ ಮಾಧ್ಯಮವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಎಚ್ಚರಿಸುವ ಜವಾಬ್ದಾರಿ ನಮ್ಮ ಜನರ ಮೇಲಿದೆ
ಎಂದು ಹಿರಿಯ ಸಾಹಿತಿ ಶ್ರೀಮತಿ ಲೀಲಾ ದಾಮೋದರ ಅವರು ಹೇಳಿದರು.

ಮಕ್ಕಳಲ್ಲಿ ಓದುವ ಹವ್ಯಾಸ ಬೆಳಸಬೇಕಾದದ್ದು ಪೋಷಕರ ಕರ್ತವ್ಯ. ಪತ್ರಿಕೆಗಳನ್ನು ಓದುವ ಹವ್ಯಾಸ ಇಂದಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದು, ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಸಾಹಿತ್ಯ ಪುಟಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಕನ್ನಡ ಸಾಹಿತ್ಯ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಶ್ರೀಮತಿ ಲೀಲಾ ದಾಮೋದರ ಅವರು ಹೇಳಿದರು.

ಈ ಸಂದರ್ಭದಲ್ಲಿ ಸಾಹಿತಿ ಡಾ. ಪ್ರಭಾಕರ ಶಿಶಿಲರ ಕಾದಂಬರಿ ‘ಕುಂತಿ’, ಕಥಾಸಂಕಲನ ‘ಕಲ್ಲುರ್ಟಿಯ ಕುಕ್ಕುಟ ಕಥನಗಳು’, ಸಮ್ಮೇಳನಾಧ್ಯಕ್ಷೆ ಶ್ರೀಮತಿ ಲೀಲಾ ದಾಮೋದರ ಅವರ ಕವನಸಂಕಲನ ‘ನದಿಯ ನಾದ’ ಸಂಗೀತ ರವಿರಾಜ್ ಅವರ ಲಲಿತಪ್ರಬಂಧ ‘ಪಯಸ್ವಿನಿಯ ತೀರದಲ್ಲಿ’ ಹಾಗೂ ವಿಮರ್ಶಾ ಬರಹ ‘ಅಕ್ಕರೆಯ ಕಡೆಗೋಲು’ ಪ್ರಕಾಶ್ ಮೂಡಿತ್ತಾಯ ಅವರ ವಿಜ್ಞಾನ ನಾಟಕಗಳಾದ ‘ಲಸಿಕೆಯ ಕಥೆ’ ಹಾಗೂ ಮೌಢ್ಯವೇಕೆ ಇನ್ನೂ ಮತ್ತು ನಿರೀಕ್ಷಾ ಸುಲಾಯ ಅವರ ಕವನ ಸಂಕಲನ ‘ನನ್ನ ಮನಸು ನನ್ನ ಕನಸು’ ಕೃತಿಗಳನ್ನು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಬಿಡುಗಡೆಗೊಳಿಸಿ, ಶುಭಹಾರೈಸಿದರು. ಅರಂತೋಡು ಗ್ರಾ.ಪಂ‌. ಅಧ್ಯಕ್ಷ ಕೇಶವ ಅಡ್ತಲೆ ಅವರು ಶುಭಹಾರೈಸಿದರು.