ಸುಬ್ರಹ್ಮಣ್ಯ: ಎಸ್‌ಎಸ್‌ಪಿಯು ಕಾಲೇಜು ವಾರ್ಷಿಕೋತ್ಸವ

0

ಯಶವಂತ ರೈ ಅವರಿಗೆ ಸನ್ಮಾನ

ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜು ವಾರ್ಷಿಕೋತ್ಸವ ವಾರ್ಷಿಕೋತ್ಸವ ಮತ್ತು ವಿದಾಯ ಸಮಾರಂಭ ನ.16 ರಂದು ನಡೆಯಿತು.

ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ವಹಿಸಿದ್ದರು.

ದ.ಕ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ ಸಮಾರಂಭವನ್ನು ಉದ್ಘಾಟಿಸಿದರು.ಹಿರಿಯ ವಿದ್ಯಾರ್ಥಿನಿ ಮತ್ತು ಬೆಂಗಳೂರಿನ ಸಿಪ್ಲಾ ಕಂಪೆನಿಯ ಸಹಾಯಕ ಪ್ರಬಂಧಕಿ ರಕ್ಷಾ ರಾವ್ ದಿಕ್ಸೂಚಿ ಭಾಷಣ ಮಾಡಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ, ಕಾಲೇಜಿನ ನಿವೃತ್ತ ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ, ಶ್ರೀಮತಿ ಸುಜಾತಾ ಯಶವಂತ ರೈ ಮುಖ್ಯಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಪ್ರೌಢಶಾಲಾ ವಿಭಾಗದ ಮುಖ್ಯಗುರು ನಂದಾ ಹರೀಶ್, ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್, ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್ ರವೀಂದ್ರನ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವೆಂಕಟೇಶ್ ಎಚ್.ಎಲ್, ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ ರಾಮಕೃಷ್ಣ, ಕಾಲೇಜು ವಿಭಾಗದ ವಿದ್ಯಾರ್ಥಿ ನಾಯಕ ಗಗನ್.ಡಿ.ಕೆ,ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕ ಕಾರ್ತಿಕ್.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದಾಯ ಸನ್ಮಾನ:
ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರಾಗಿ ಬಳಿಕ ಮುಖ್ಯಗುರುಗಳಾಗಿ ನಿರಂತರ 37 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಕೆ.ಯಶವಂತ ರೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಇವರೊಂದಿಗೆ ಸುಜಾತಾ ಯಶವಂತ ರೈ ಅವರನ್ನೂ ಸನ್ಮಾನಿಸಲಾಯಿತು.ಹಿರಿಯ ವಿದ್ಯಾರ್ಥಿ ಸಂಘ, ಶಿಕ್ಷಕ ರಕ್ಷಕ ಸಂಘ, ವಿದ್ಯಾರ್ಥಿ ಸಂಘ ಮತ್ತು ಕಾಲೇಜಿನ ವತಿಯಿಂದ ಶಾಲು,ಹಾರ, ಫಲ, ಸ್ಮರಣಿಕೆ ಮತ್ತು ಸನ್ಮಾನಪತ್ರ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಕಳೆದ ವಾರ್ಷಿಕ ಪರೀಕ್ಷೆಯಲ್ಲಿ 85%ಕ್ಕಿಂತ ಅಧಿಕ ಅಂಕ ಪಡೆದ 99 ವಿದ್ಯಾರ್ಥಿಗಳನ್ನು ಸೇರಿದಂತೆ ವಿಷಯವಾರು ಅತ್ಯಧಿಕ ಅಂಕ ಪಡೆದವರಿಗೆ ದತ್ತಿನಿಧಿ ಬಹುಮಾನ ನೀಡಿ ಗೌರವಿಸಲಾಯಿತು.ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ರಾಜ್ಯಕ್ಕೆ ವಾಣಿಜ್ಯ ವಿಭಾಗದಲ್ಲಿ 5ನೇ ರ‍್ಯಾಂಕ್ ಪಡೆದ ದುರ್ಗಾಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಸಂಸ್ಥೆಗೆ ಪ್ರಥಮ ಬಾರಿಗೆ 100% ಫಲಿತಾಂಶ ಬಂದಿದ್ದು ಇದಕ್ಕಾಗಿ ವಿಶೇಷವಾಗಿ ಪ್ರಾಚಾರ್ಯರನ್ನು ಬಳಿಕ ತಮ್ಮ ವಿಷಯದಲ್ಲಿ 100% ಫಲಿತಾಂಶ ಗಳಿಸಿದ ಎಲ್ಲಾ ಉಪನ್ಯಾಸಕರನ್ನು, ಶಿಕ್ಷಕರನ್ನು ಶ್ರೀ ದೇವಳದ ವತಿಯಿಂದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸನ್ಮಾನಿಸಿ ಗೌರವಿಸಿದರು.ಇದರೊಂದಿಗೆ ಈ ವರ್ಷ ರಾಜ್ಯ ಮಟ್ಟಕ್ಕೆ ಆಯ್ಕೆಯಾದ 5 ಜನ ಕ್ರೀಡಾಳುಗಳನ್ನು ಕೂಡಾ ಗೌರವಿಸಲಾಯಿತು.
ಸಮಾರಂಭದಲ್ಲಿ ದ.ಕ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಘು ಬಿಜೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶಿಕ್ಷಕ ರಕ್ಷಕ ಸಂಘದ ಸದಸ್ಯ ಕಡಬ ಶ್ರೀನಿವಾಸ ರೈ ಅವರನ್ನು ಸನ್ಮಾನಿಸಲಾಯಿತು.ತೆರೆಮರೆಯಲ್ಲಿ ನಿಂತು ಕಾಲೇಜಿನ ಎಲ್ಲಾ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಎರಡನೇ ವಾಣಿಜ್ಯ ಇತಿಹಾಸ ವಿಭಾಗದ ವಿದ್ಯಾರ್ಥಿ ಭವಿತ್ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.


ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಅಭಿನಂದನಾ ಭಾಷಣ ಮಾಡಿದರು. ಉಪನ್ಯಾಸಕಿ ಜಯಶ್ರೀ.ವಿ.ದಂಬೆಕೋಡಿ ಸನ್ಮಾನಪತ್ರ ವಾಚಿಸಿದರು. ಉಪನ್ಯಾಸಕ ಪ್ರವೀಣ್, ಶಿಕ್ಷಕ ಸುರೇಶ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಉಪನ್ಯಾಸಕಿಯರಾದ ಶ್ರುತಿ ಅಶ್ವತ್ಥ್, ಜ್ಯೋತಿ.ಪಿ.ರೈ ವಿವಿಧ ವಿಭಾಗಗಳಲ್ಲಿ ಪುರಸ್ಕಾರ ಪಡೆದವರ ಪಟ್ಟಿ ವಾಚಿಸಿದರು. ಉಪನ್ಯಾಸಕಿ ಸವಿತಾ ಕೈಲಾಸ್ ವಂದಿಸಿದರು. ವಿದ್ಯಾರ್ಥಿನಿ ಮೌಲ್ಯಾ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.