ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸರಕಾರಿ ಶಾಲೆಯಲ್ಲಿ ಸರಕಾರಿ ಶಿಕ್ಷಕರಿಲ್ಲ!

0

ಇದ್ದ ಸರಕಾರಿ ಶಿಕ್ಷಕಿಗೆ ವರ್ಗಾವಣೆ – ಅತಿಥಿ ಶಿಕ್ಷಕರಿಗೆ ಪಾಠದ ಹೊಣೆ

ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ಪೋಷಕರ ಚಿಂತನೆ-ಆತಂಕದಲ್ಲಿ ಪೋಷಕರ ಸಮಿತಿ ಮತ್ತು ಬೆಳ್ಳಿ ಹಬ್ಬ ಸಮಿತಿ

ಕನಿಷ್ಠ 3 ಶಿಕ್ಷಕರಿರಬೇಕಾದ ಶಾಲೆಯಲ್ಲಿ‌ ಒಬ್ಬರೇ ಒಬ್ಬರು ಶಿಕ್ಷಕರಿಲ್ಲ – ಶಾಸಕರ ಸೂಚನೆಗೂ ಶಿಕ್ಷಣ ಇಲಾಖೆ ಕಿವಿಕೊಡುತ್ತಿಲ್ಲ!

ಗ್ರಾಮೀಣ ಭಾಗದಲ್ಲೊಂದು ಸರಕಾರಿ ಶಾಲೆ. ಸುಂದರ ಪರಿಸರ. ಶೈಕ್ಷಣಿಕ ಚಟುವಟಿಕೆಗೆ ಪೂರಕವಾದ ಅಚ್ಚುಕಟ್ಟಾದ ವ್ಯವಸ್ಥೆ. 25 ವರ್ಷ ಪೂರೈಸಿದ ಸಂಭ್ರಮ. ಎಪ್ರಿಲ್ ನಲ್ಲಿ ಬೆಳ್ಳಿ‌ಹಬ್ಬ ಕಾರ್ಯಕ್ರಮ. ಸಮಿತಿ – ಸಿದ್ಧತೆಗಳ ಆರಂಭ. ತರಗತಿ ತುಂಬಾ ವಿದ್ಯಾರ್ಥಿಗಳು. ಆದರೆ ಶಿಕ್ಷಕರಿಲ್ಲದ ಕೊರತೆ ಇದೀಗ ಶಾಲೆಯನ್ನು ಕಾಡಲಾರಂಭಿಸಿದೆ.

ಹೌದು. ಮರ್ಕಂಜದ ದಾಸರಬೈಲು ಕಿರಿಯ ಪ್ರಾಥಮಿಕ ಶಾಲೆ ಆರಂಭವಾಗಿ 25 ವರ್ಷ ಪೂರ್ತಿಗೊಂಡಿದೆ. ಹೀಗಾಗಿ 25 ವರ್ಷದ ಸಂಭ್ರಮಾಚರಣೆಯನ್ನು ಸ್ಮರಣೀಯವಾಗಿಸಲು ಬೆಳ್ಳಿ ಹಬ್ಬ ಸಮಿತಿ ಮಾಡಿಕೊಂಡು ಸಜ್ಜಾಗಿದೆ. ಆದರೆ ಇದೀಗ ಇದ್ದ ಶಿಕ್ಷಕಿ ಬೇರೆ ಶಾಲೆಗೆ ವರ್ಗಾವಣೆಯಾಗಿದ್ದಾರೆ. ಮತ್ತು ಅವರಿಗೆ ಇದೇ ಶಾಲೆಗೆ ಪ್ರಭಾರ ನೀಡಲಾಗಿದೆ. ಅವರು ಶಾಲೆಯ ಲೆಕ್ಕಪತ್ರಗಳನ್ನು ನೋಡಲಷ್ಟೆ ಸಾಧ್ಯವಾಗುತ್ತದೆ. ಹೀಗಾಗಿ ದಾಸರಬೈಲು ಕಿ.ಪ್ರಾ.ಶಾಲೆ ಶಿಕ್ಷಕರಿಲ್ಲದ ಕೊರತೆ ಎದುರಿಸುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲಾತಿ ಮಾಡಲು ಯೋಚಿಸತೊಡಗಿದ್ದಾರೆ. ಹೀಗಾಗಿ ಸರಕಾರಿ ಶಾಲೆಯ ಬೆಳ್ಳಿ ಹಬ್ಬ ಆಚರಣೆಗೂ ಆತಂಕ ಎದುರಾದಂತಾಗಿದೆ.

ದಾಸರಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 37 ವಿದ್ಯಾರ್ಥಿಗಳಿದ್ದಾರೆ. ನಿಯಮಗಳ ಪ್ರಕಾರ ಸರಕಾರಿ ಶಾಲೆಯಲ್ಲಿ 10 ಮಕ್ಕಳಿಗೆ ಒಬ್ಬರು ಶಿಕ್ಷಕರಿರಬೇಕು ಎಂದಿದೆ. ಈ ಪ್ರಕಾರ ಕನಿಷ್ಠ 3 ಸರಕಾರಿ ಶಿಕ್ಷಕರು ಬೇಕಾಗಿತ್ತು. ಆದರೆ ಇಲ್ಲಿ ಇಬ್ಬರು ಪೂರ್ಣಕಾಲಿಕ ಸರಕಾರಿ ಶಿಕ್ಷಕರಿರಬೇಕು. ಮೊದಲು ಒಬ್ಬರು ಮುಖ್ಯೋಪಾಧ್ಯಾಯರು‌ ಮತ್ತು ಇಬ್ಬರು ಅತಿಥಿ ಶಿಕ್ಷಕರಿದ್ದರು. ಕೆಲ ಸಮಯದ
ಹಿಂದೆ ಇಲ್ಲಿ ಇದ್ದ ಮುಖ್ಯ ಶಿಕ್ಷಕಿಗೆ ಬೇರೆ ಶಾಲೆಗೆ ವರ್ಗಾವಣೆಯಾಗಿದ್ದಾರೆ. ಅವರನ್ನು ಇದೇ ಶಾಲೆಗೆ ಪ್ರಭಾರ ವಹಿಸಲಾಗಿದೆ‌. ಅವರು 15 ದಿವಸಗಳಿಗೊಮ್ಮೆ ಬಂದು ಶಾಲಾ ಲೆಕ್ಕಪತ್ರ ಗಳನ್ನಷ್ಟೆ ನೋಡುವ ಕೆಲಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಈಗ ಇರುವವರು ಇಬ್ಬರು ಅತಿಥಿ ಶಿಕ್ಷಕರು ಮಾತ್ರ.

ಕ್ಷೇತ್ರ ಶಿಕ್ಷಣಧಿಕಾರಿಗಳಿಗೆ ಮನವಿ :
ದಾಸರಬೈಲು ಕಿ.ಪ್ರಾ.ಶಾಲೆಗೆ ಕನಿಷ್ಟ‌ ಒಬ್ಬರಾದರೂ ಸರಕಾರಿ ಶಿಕ್ಷಕರನ್ನು ನೀಡಬೇಕು ಎಂದು ಎಸ್.ಡಿ.ಎಂ.ಸಿ.ಯವರು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿದ್ದರು. ಆದರೆ ಅಲ್ಲಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ತಿಳಿದು ಬಂದಿದೆ.

ಶಾಸಕರ ಮಾತಿಗೆ ಮಣ್ಣನೆ ನೀಡಿಲ್ಲ :
ಸರಕಾರಿ ಶಿಕ್ಷಕರನ್ನು ನೀಡಬೇಕು ಎಂದು ಎಸ್.ಡಿ.ಎಂ.ಸಿ. ಯವರು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರಿಗೂ ಮನವಿ ನೀಡಿದ್ದರು. ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷರನ್ನು ನೀಡುವಂತೆಯೂ ಸೂಚಿಸಿದ್ದರು. ಆದರೆ ಶಾಸಕರ ಸೂಚನೆಗೂ ಶಿಕ್ಷಣ ಇಲಾಖೆಯಿಂದ ಯಾವುದೇ ಮನ್ನಣೆ ನೀಡಿಲ್ಲ ಎಂದು ಹೇಳಲಾಗುತ್ತಿದೆ.

ಒಟ್ಟಾಗಿ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಲು ಅಣಿಯಾಗುತ್ತಿರುವ ಸರಕಾರಿ‌ ಶಾಲೆಗೆ ಶಿಕ್ಷಕರ ಕೊರತೆ ಎದುರಾಗಿರುವುದು ಒಂದೆಡೆಯಾದರೆ, ಸರಕಾರಿ ಶಾಲೆಯಲ್ಲಿ ಶಿಕ್ಷಕರಿಲ್ಲದ ಹಿನ್ನೆಲೆಯಲ್ಲಿ ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲಾತಿ ಮಾಡುವ ಯೋಚನೆಯನ್ನು ಪೋಷಕರು ಮಾಡತೊಡಗಿದ್ದಾರೆ. ಹೀಗಾಗಿ ಬೆಳ್ಳಿ ಹಬ್ಬ ಆಚರಣೆಯ ಹೊಸ್ತಿಲಲ್ಲಿರುವ ಸರಕಾರಿ ಶಾಲೆಗೆ ಆತಂಕ ಎದುರಾಗಿದೆ.‌

ಒಟ್ಟಾಗಿ ಶಿಕ್ಷಣ ಇಲಾಖೆ ದಾಸರಬೈಲು ಸ.ಕಿ.ಪ್ರಾ.ಶಾಲೆಗೆ ಆದಷ್ಟು ಬೇಗ ಸರಕಾರಿ ಶಿಕ್ಷಕರನ್ನು ನಿಯೋಜಿಸಬೇಕೆಂದು ಪೋಷಕರು ಮತ್ತು ಶಾಲಾಭಿಮಾನಿಗಳ ಒತ್ತಾಯವಾಗಿದೆ.