ಚೆಂಬು ಗ್ರಾಮಸಭೆಗೆ ಅಧಿಕಾರಿಗಳ ಗೈರು ಹಿನ್ನೆಲೆ

0

ಚೆಂಬು ಗ್ರಾಮ ಪಂಚಾಯತಿಯ ಗ್ರಾಮಸಭೆಯು ಪ್ರಾರಂಭಗೊಳ್ಳುತ್ತಿದ್ದಂತೆ ಗ್ರಾಮಸಭೆಗೆ ಬರಬೇಕಿದ್ದ ಅಧಿಕಾರಿಗಳು ಸಭೆಗೆ ಗೈರಾದುದನ್ನು ಪ್ರಶ್ನಿಸಿ, ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಹಾಗೂ ಚೆಂಬು ಗ್ರಾಮಸ್ಥರಾದ ಸೂರಜ್ ಹೊಸೂರು ಮಧ್ಯೆ ಪರಸ್ಪರ ಮಾತಿನ ಚಕಮಕಿ ಸಂಭವಿಸಿ, ಪೊಲೀಸರ ಮಧ್ಯಪ್ರವೇಶವಾದರೂ ಮಾತಿನ ಚಕಮಕಿ ನಿಲ್ಲದೇ ಇದ್ದಾಗ ಸಂಪಾಜೆ ಪಯಸ್ವಿನಿ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ. ಅನಂತರು ಗಲಾಟೆ ಶಮನಗೊಳಿಸಲು ಯತ್ನಿಸಿದ ಹಾಗೂ ಗ್ರಾಮಸಭೆ ಆರಂಭಗೊಳ್ಳುತ್ತಿದ್ದಂತೆ ಸಭೆಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಕಾರ್ಯಕರ್ತರುಗಳು ಇದನ್ನು ಒಪ್ಪದೇ, ಸಭೆಯನ್ನು ಬಹಿಷ್ಕರಿಸಿ, ಹೊರನಡೆದ ಘಟನೆ ನ.30ರಂದು ವರದಿಯಾಗಿದೆ.

ಗ್ರಾಮಸಭೆ ಆರಂಭಗೊಳ್ಳುತ್ತಿದ್ದಂತೆ ಸಭೆಯಲ್ಲಿದ್ದ ಸೂರಜ್ ಹೊಸೂರು ಅವರು ಮಾತಾಡಿ ಸಭೆಯಲ್ಲಿ ಗ್ರಾಮಸ್ಥರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕಿರುವ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾಗಿರುವುದು ಯಾಕೆಂದು ಪ್ರಶ್ನಿಸಿದರೆನ್ನಲಾಗಿದೆ. ಈ ವೇಳೆ ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ ಅವರು ಅಧಿಕಾರಿಗಳು ಸಭೆಗೆ ಬರುವುದಾಗಿ ಹೇಳಿದ್ದಾರೆ ಎಂದು ಹೇಳಿದರೆಂದೂ , ಈ ಸಂದರ್ಭದಲ್ಲಿ ಅವರಿಬ್ಬರ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆಯಿತ್ತೆನ್ನಲಾಗಿದೆ. ಅಗ ಪೊಲೀಸ್ ಸಿಬ್ಬಂದಿ ಸಭೆಗೆ ಆಗಮಿಸಿ, ಮಾತಿನ ಚಕಮಕಿ ಕೊನೆಗೊಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲವೆನ್ನಲಾಗಿದೆ.

ಆಗ ಸಭೆಯಲ್ಲಿ ಉಪಸ್ಥಿತರಿದ್ದ ಸಂಪಾಜೆ ಪಯಸ್ವಿನಿ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ. ಅನಂತ್ ಊರುಬೈಲು ಅವರು ಮಧ್ಯೆಪ್ರವೇಶಿಸಿ, ಗಲಾಟೆ ಶಮನಕ್ಕೆ ಯತ್ನಿಸಿದರು. ಆಗ ಸಭೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರುಗಳು ಗ್ರಾಮಸಭೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಬಂದ ಬಳಿಕವೇ ಸಭೆ ಮಾಡಿ ಎಂದು ಪಟ್ಟುಹಿಡಿದರೆನ್ನಲಾಗಿದೆ.

ಕೊನೆಗೆ ಸಭೆಯಲ್ಲಿದ್ದ ಗ್ರಾಮಸ್ಥರೊಳಗೆ ಗ್ರಾಮಸಭೆ ನಡೆಸಬೇಕೋ ಬೇಡವೋ ಎಂದು ಕೈ ಎತ್ತಲು ತಿಳಿಸಿದಾಗ ಗ್ರಾಮಸಭೆ ಬೇಡ ಎಂದವರ ಸಂಖ್ಯೆ ಜಾಸ್ತಿ ಹಾಗೂ ಬೇಕು ಎಂದವರ ಸಂಖ್ಯೆ ಕಡಿ ಇತ್ತು. ತಟಸ್ಥರಾಗಿದ್ದವರ ಸಂಖ್ಯೆ ಇವೆರಡಕ್ಕಿಂತಲೂ ಹೆಚ್ಚು ಇತ್ತು. ಈ ಹಿನ್ನಲೆಯಲ್ಲಿ ಗ್ರಾಮಸಭೆಯನ್ನು ನಡೆಸಲು ಅಧ್ಯಕ್ಷರು ಅನುಮತಿ ನೀಡಿದರು. ಆಗ ಗ್ರಾಮಸಭೆ ಬೇಡವೆಂದ ಗ್ರಾಮಸ್ಥರು ಸಭೆಯಿಂದ ಎದ್ದು ಹೊರನಡೆದರೆಂದು ತಿಳಿದುಬಂದಿದೆ. ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಗ್ರಾಮಸಭೆ ಪ್ರಾರಂಭಗೊಂಡಿತ್ತೆನ್ನಲಾಗಿದೆ. ಆದರೆ ಇದನ್ನು ಒಪ್ಪದ ಕಾಂಗ್ರೆಸ್ ಕಾರ್ಯಕರ್ತರುಗಳು ಗ್ರಾಮಸಭೆಯನ್ನು ಬಹಿಷ್ಕರಿಸಿ, ಸಭೆಯಿಂದ ಎದ್ದು ಹೊರನಡೆದರೆಂದು ತಿಳಿದುಬಂದಿದೆ. ಸದ್ಯ ಗ್ರಾಮಸಭೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.