ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್, ಬೆಳ್ಳಾರೆ, ವಿದ್ಯಾ ಸಂಸ್ಥೆಯಲ್ಲಿ ಫೆ. ೧ ರಂದು ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಮಾರಂಭದಲ್ಲಿ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಜ್ಞಾನೇಶ್ವರ ಪೈ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮವು ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲರಾದ ಕು. ದೇಚಮ್ಮ ಟಿ ಎಂ ಸ್ವಾಗತಿಸುತ್ತಾ ಬೀಳ್ಕೊಡುವ ವಿದ್ಯಾರ್ಥಿಗಳಿಗೆ ಶುಭ ಸಂದೇಶ ನೀಡಿದರು.
















ಕು. ವಿಹಾ ನಾಗರಾಜ್ ಬಾಲ್ಯದಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕುತ್ತಾ ವಿದ್ಯಾರ್ಥಿ ಪ್ರತಿನಿಧಿಯಾಗಿ ಮಾತನಾಡಿದರು. ಹೆತ್ತವರ ಪರವಾಗಿ ಶ್ರೀಯುತ ರಮೇಶ್ ಕೋಟೆಯವರು ಮಾತನಾಡಿ ಗ್ರಾಮೀಣ ಶಾಲೆಯೊಂದರಲ್ಲಿ ತಮ್ಮ ಮಕ್ಕಳು ಗಳಿಸಿದ ಪ್ರಯೋಜನಗಳನ್ನು ಸ್ಮರಿಸಿಕೊಂಡರು . ಶಾಲಾ ಸಂಚಾಲಕರು ,ಮುಖ್ಯ ಅತಿಥಿಗಳು, ಪ್ರಾಂಶುಪಾಲರು ಬೀಳ್ಕೊಡುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿದರು. ಮುಖ್ಯ ಅತಿಥಿಗಳ ಕಿರು ಪರಿಚಯವನ್ನು ವಿದ್ಯಾರ್ಥಿನಿ ಕು. ಆಜ್ಞಾ ರೈ ಯವರು ನೀಡಿದರು. ಮುಖ್ಯ ಅತಿಥಿಗಳು ಮಾತನಾಡಿ, ?ವಿದ್ಯಾರ್ಥಿಗಳಿಗೆ ದಶ ಸೂತ್ರಗಳನ್ನು ಪಾಲನೆ ಮಾಡಬೇಕು ಎಂದೂ ಆ ಸೂತ್ರಗಳನ್ನು ತಿಳಿಸಿದರು .

ಈ ಪೀಳಿಗೆಯ ವಿದ್ಯಾರ್ಥಿಗಳು “Generation zoomers”. ಇವರು ಆಧುನಿಕ ತಂತ್ರಜ್ಞಾನದೊಂದಿಗೆ ನಿಕಟ ಸಂಪರ್ಕದಲ್ಲಿ ಬೆಳೆದವರು. ಮನೆಯಿಂದ ಹೊರ ಹೋಗಲು ಇಚ್ಛಿಸದೆ ಕಣ್ಣು ಕಿವಿ ಮೂಗು ಬಾಯಿ ಮುಂತಾದ ಪಂಚೇಂದ್ರಿಯಗಳನ್ನು ತಂತ್ರಜ್ಞಾನಕ್ಕಾಗಿ ಬಳಕೆ ಮಾಡಲು ಇಚ್ಛಿಸುವವರು. ಅದು ಸದ್ಬಳಕೆಯಾಗಬೇಕು ಎಂದರು. ಮೊದಲು ನಿಮ್ಮನ್ನು ನೀವು ಅರಿತಿರಬೇಕು. ಯಾವತ್ತೂ ಇನ್ನೊಬ್ಬರ ಕೃಪಾಕಟಾಕ್ಷದಡಿಯಲ್ಲಿ ಇರಬಾರದು. ಅಲ್ಲಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ .ಅತಿಯಾದ ಸ್ಪರ್ಧೆ, ಹೋಲಿಕೆಗಳ ಬದಲು ನಾವು ಪರಸ್ಪರ ಸಹಕಾರ ಪ್ರೀತಿಯ ಕಡೆ ಹೊರಳಿ ನೋಡಬೇಕು. ಎಂದೂ ಸಹ ಸೋಮಾರಿಯಾಗಿ ಕುಳಿತಿರಬಾರದು. ಇನ್ನೊಬ್ಬರ ಮಾತನ್ನು ಕೇಳುವಲ್ಲಿಯೇ ಕೇಳಬೇಕು. ಸೋಲಿಗೆ ಅಳುಕದೆ ಸವಾಲುಗಳನ್ನು ಎದುರಿಸಿ ನಡೆಯಬೇಕು, ಎಂಬಿತ್ಯಾದಿ ವಿಚಾರಗಳನ್ನು ಸಣ್ಣ ಕಥೆಗಳ ಮೂಲಕ ವಿವರಿಸಿದ್ದರು.
ಶಾಲಾ ವಿದ್ಯಾರ್ಥಿಗಳು ಬಿಳ್ಕೊಡುವ ವಿದ್ಯಾರ್ಥಿಗಳಿಗಾಗಿ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಲಾ ಸಂಚಾಲಕರಾದ ಶ್ರೀಯುತ ಎಂ.ಪಿ.ಉಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿ ಕು. ನೈನಿಕಾ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಯಶ್ಮಿತ್ ಗೌಡ ಹಾಗೂ ವಿದ್ಯಾರ್ಥಿನಿ ಮೇಧಾ ನಾರಾಯಣಿ ಭಟ್ಟ ನಿರೂಪಿಸಿದರು.










