ಮನೆಯಂಗಳಕ್ಕೆ ಬಂದ ಅಪರಿಚಿತರು : ಕಳ್ಳರೆಂಬ ಶಂಕೆ

0

ಕೋವಿ ಹಿಡಿದು ಬಂದ ಮಹಿಳೆಯನ್ನು ನೋಡಿ ಓಡಿದ ಕಳ್ಳರು

ಬಳ್ಪ ಗ್ರಾಮದ ಮನೆಯೊಂದಕ್ಕೆ ಬಂದ ಅಪರಿಚಿತರು ಕಳ್ಳರೆಂಬ ಶಂಕೆ ವ್ಯಕ್ತವಾಗಿದ್ದು, ಮನೆಯಲ್ಲಿದ್ದ ಮಹಿಳೆ ಕೋವಿ ಹಿಡಿದುಕೊಂಡು ಬಂದಾಗ ಬಂದಿದ್ದವರು ಪರಾರಿಯಾದ ಘಟನೆ ಇಂದು ನಡೆದಿದೆ.

ಬಳ್ಪ ಗ್ರಾಮದ ಕುಂಜತ್ತಾಡಿ ಕೊಡಂಗುಳಿ ಸೋಮಪ್ಪ ಗೌಡ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾಯಿ ಬೊಗಳಿದ ಶಬ್ದ ಕೇಳಿ ಮನೆಯಲ್ಲಿದ್ದ ಸೋಮಪ್ಪ ಗೌಡರ ಅತ್ತಿಗೆ ಸಾವಿತ್ರಿಯವರು ಮನೆ ಕಡೆ ಬಂದಾಗ ಕೊಟ್ಟಿಗೆ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ ನಿಂತಿದ್ದ. ಆತನೊಂದಿಗೆ ವಿಚಾರಿಸಿದಾಗ ಯಾವುದೇ ಉತ್ತರ ನೀಡಲಿಲ್ಲವೆನ್ನಲಾಗಿದೆ. ಮಹಿಳೆ ಸೀದಾ ಮನೆಗೆ ಹೋಗಿ ಕೋವಿ ಹಿಡಿದುಕೊಂಡು ಹೊರಗೆ ಬಂದರು. ಈ ವೇಳೆ ಸಮೀಪದಲ್ಲೇ ಮತ್ತೊಬ್ಬ ಕೂಡಾ ನಿಂತಿರುವುದು ಕಂಡು ಬಂತು. ಕೋವಿ ಹಿಡಿದು ಮಹಿಳೆ ಮುನ್ನುಗ್ಗಿದಾಗ ಇಬ್ಬರೂ ಓಡಿದರೆಂದು, ಸ್ವಲ್ಪ ದೂರ ಮಹಿಳೆ ಕೂಡಾ ಅವರನ್ನು ಓಡಿಸಿದರೆಂದು ತಿಳಿದು ಬಂದಿದೆ.

ಬಳಿಕ ಅವರು ಸ್ಥಳಿಯರಿಗೆ ವಿಷಯ ತಿಳಿಸಿ ಊರ ಕೆಲವರು ಪರಿಸರದಲ್ಲಿ ಹುಡುಕಾಡಿದರೆಂದು ತಿಳಿದು ಬಂದಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿದ್ದು, ಪೊಲೀಸರು ಬಂದು ಮಾಹಿತಿ ಪಡೆದು ಕೊಂಡಿದ್ದಾರೆ.

ಸೋಮಪ್ಪ ಗೌಡರು ಕೆಲವು ದಿನಗಳಿಂದ ಬೆಂಗಳೂರಿನಲ್ಲಿದ್ದು, ಮನೆಯಲ್ಲಿ ಮನೆಯ ಇಬ್ಬರು ಮಹಿಳೆಯರು ಮಾತ್ರ ಇದ್ದರು. ಈ ವೇಳೆ ಈ ಘಟನೆ ನಡೆದಿದೆ. ಬಳ್ಪ ಗ್ರಾಮದ ಇತರ ಎರಡು ಮೂರು ಕಡೆ ಕೂಡಾ ಇತ್ತೀಚೆಗೆ ಕಳ್ಳತನ ಪ್ರಕರಣಗಳು ನಡೆದಿರುವುದು ಬಳ್ಪದ ಜನೆತೆಯ ನಿದ್ದೆಗೆಡಿಸಿದ್ದು, ಪೊಲೀಸ್ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ.