ಸುಳ್ಯ :ಅಮೃತ್ 2.0 ಯೋಜನೆಯ ಕಾಮಗಾರಿಯ ಬಗ್ಗೆ ನ. ಪಂ. ಸದಸ್ಯರು ಹಾಗೂ ಯೋಜನಾಧಿಕಾರಿಗಳ ಸಭೆ

0

ನಗರದಾದ್ಯಂತ ಅಗೆದು ಹಾಕಿದ್ದನ್ನು ಮೊದಲು ಸರಿಪಡಿಸಿಕೊಡಿ: ಸದಸ್ಯರುಗಳ ಆಗ್ರಹ

ಅಗೆದುದ್ದನ್ನು ಸರಿ ಮಾಡಿದ ಬಳಿಕ ಮುಂದಿನ ಹಂತಕ್ಕೆ ಹೋಗಲಾಗುವುದು :ಅಸಿಸ್ಟೆಂಟ್ ಇಂಜಿನಿಯರ್ ಭರವಸೆ

ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ನಡೆಯುತ್ತಿರುವ ಅಮೃತ್ ೨.೦ ಕಾಮಗಾರಿಯ ಕುರಿತು ಹಾಗೂ ಕಾಮಗಾರಿಯಿಂದ ಆಗಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಅಂಗವಾಗಿ ಏ ೧೭ ರಂದು ನಗರ ಪಂಚಾಯತ್ ಸಭಾಂಗಣದಲ್ಲಿ ಸಂಭಂದ ಪಟ್ಟ ಅಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ ಯವರು ವಹಿಸಿದ್ದರು. ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಠ್ ನ. ಪಂ ಉಪಾಧ್ಯಕ್ಷ ಬುದ್ಧ ನಾಯ್ಕ್, ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ದ ಕ ಜಿಲ್ಲಾ ಅಸಿಸ್ಟೆಂಟ್ ಇಂಜಿನಿಯರ್ ಅಜಯ್ ಆರ್ ವಿ ಹಾಗೂ ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್ ಉಪಸ್ಥಿತರಿದ್ದರು.

ಸಭೆಯ ಆರಂಭದಲ್ಲಿ ಮುಖ್ಯ ಅಧಿಕಾರಿಯವರು ಇಂಜಿನಿಯರ್ ಅವರನ್ನು ಸಭೆಗೆ ಪರಿಚಯಿಸುತ್ತಿದ್ದಂತೆ ಎದ್ದುನಿಂತ ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರ ಕ್ರಾಸ್ತಾರವರು ಇವರು ಈ ಸಭೆಗೆ ಬಂದು ಏನು ಪ್ರಯೋಜನ?ಇವರು ಸಭೆಯಲ್ಲಿ ಬಂದು ಹೇಳಿ ಹೋದರೆ ಬಳಿಕ ಆ ಕೆಲಸದ ಕಡೆ ಗಮನ ಹರಿಸುವುದಿಲ್ಲ. ಅಲ್ಲದೆ ಇವರ ಕೈ ಕೆಳಗೆ ಕೆಲಸ ಮಾಡುವ ಇಂಜಿನಿಯರ್ ಗಳು ಅಥವಾ ಗುತ್ತಿಗೆದಾರರು ನಗರ ಪಂಚಾಯತ್ ಸದಸ್ಯರುಗಳ ಮಾತಿಗೆ ಯಾವುದೇ ರೀತಿಯ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಕಳೆದ ಒಂದು ವರ್ಷದಿಂದ ನಮ್ಮ ವಾರ್ಡಿನಲ್ಲಿ ಅಗೆದು ಹಾಕಿರುವ ರಸ್ತೆ ಇಂದಿಗೂ ಕೂಡ ಡಾಮರೀಕರಣ ಅಥವಾ ಕಾಂಗ್ರಟೀಕರಣ ಗೊಂಡಿಲ್ಲ. ವಾರ್ಡ್ ರಸ್ತೆ ಅವ್ಯವಸ್ಥೆಯ ಗೂಡಾಗಿ ಮಾರ್ಪಟ್ಟಿದೆ. ನಮ್ಮೂರಿನ ಜನರು ನಮ್ಮನ್ನು ಬಿಡುತ್ತಿಲ್ಲ.
ಆದ್ದರಿಂದ ಇವತ್ತಿನ ಸಭೆಗೆ ಬಂದಿರುವ ಇವರು ಮೊದಲು ಆ ಎಲ್ಲಾ ಸಮಸ್ಯೆ ಗಳ ಬಗ್ಗೆ ಉತ್ತರವನ್ನು ನೀಡಲಿ ಎಂದು ಪಟ್ಟು ಹಿಡಿದರು.

ಇದೇ ವೇಳೆ ಸಭೆಯಲ್ಲಿ ಹಾಜರಿದ್ದ ಸದಸ್ಯರುಗಳಾದ ಶಿಲ್ಪಾಸುದೇವ್, ಸುಧಾಕರ್ ಕೆ, ಬಾಲಕೃಷ್ಣರೈ,ಶೀಲಾ ಕುರುಂಜಿ ರವರು ಎದ್ದು ನಿಂತು ತಮ್ಮ ತಮ್ಮ ವಾರ್ಡಿನಲ್ಲಿ ಆಗಿರುವ ಸಮಸ್ಯೆಗಳ ಬಗ್ಗೆ ಇಂಜಿನಿಯರ್ ರವರ ಬಳಿ ಹೇಳಿಕೊಂಡರು.

ಅದಾದ ಬಳಿಕ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಯವರು ಕೂಡ ಅಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡು ನಗರ ಪಂಚಾಯತ್ ಅಧ್ಯಕ್ಷರನ್ನು ಮತ್ತು ಮುಖ್ಯ ಅಧಿಕಾರಿ, ಅಥವಾ ಸದಸ್ಯರನ್ನು ಕಡೆಗಣೆ ಮಾಡಿ ಏನು ಕೆಲಸ ಮಾಡುತ್ತಿದ್ದೀರಿ. ಕನಿಷ್ಠಪಕ್ಷ ನೀವು ಮಾಡುವ ಕೆಲಸದ ಮತ್ತು ಸ್ಥಳದ ಬಗ್ಗೆ ಪಂಚಾಯತಿಗೆ ಒಂದು ದಿನ ಮೊದಲು ಮಾಹಿತಿಯನ್ನು ನೀಡಿದರೆ ನಾವು ಕೂಡ ಜನರಿಗೆ ಮತ್ತು ಆ ಭಾಗದ ಸದಸ್ಯರುಗಳಿಗೆ ಮಾಹಿತಿ ನೀಡಲು ಆಗುತ್ತೆ.ನಿಮ್ಮನ್ನು ಯಾರೂ ಕೇಳುವುದಿಲ್ಲ ಎಂಬ ಯೋಚನೆ ನಿಮ್ಮಲ್ಲಿ ಇರುವ ಹಾಗೆ ಇದೆ.ಆದ್ದರಿಂದ ನಿಮಗೆ ಇಷ್ಟ ಬಂದ ಹಾಗೆ ಕೆಲಸ ಮಾಡುತ್ತಾ ಹೋಗುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಈಗಾಗಲೇ ನೀವು ಮಾಡಿರುವ ಕಾಮಗಾರಿಯನ್ನು ಮೊದಲು ಸರಿ ಮಾಡಿಕೊಡಿ, ನಂತರ ಮುಂದಿನ ಕೆಲಸಕ್ಕೆ ಮುಂದಾಗಿ ಎಂದು ಅವರು ಅಧಿಕಾರಿಗಳನ್ನು ಆಗ್ರಹಿಸಿದರು.

ಇದಕ್ಕೆ ಉತ್ತರ ನೀಡಿದ ಅಸಿಸ್ಟೆಂಟ್ ಇಂಜಿನಿಯರ್ ಅಜಯ್ ಆರ್ ವಿ ರವರು ಮೊದಲು ತಮ್ಮೆಲ್ಲರ ಬಳಿ ನಾವು ಕ್ಷಮೆಯನ್ನು ಕೇಳುತ್ತೇವೆ.
ಕಾರಣ ಪ್ರಾರಂಭದಲ್ಲಿ ಅಲ್ಪಮಟ್ಟಿಗೆ ತರಾತುರಿ ಉಂಟಾದ ಹಿನ್ನೆಲೆಯಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಿದೆ. ಇದಕ್ಕೆ ನಾವು ನಿಮ್ಮಲ್ಲಿ ವಿಷಾದವನ್ನು ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.

ಅಲ್ಲದೆ ಸುಳ್ಯ ನಗರಕ್ಕೆ ಸಂಬಂಧಪಟ್ಟಂತೆ ಯೋಜನೆ ಈಗಾಗಲೇ ೭೨ ಕಿಲೋಮೀಟರ್ಗಳ ಪೈಪ್ ಅಳವಡಿಕೆಗಳ ಕಾಮಗಾರಿ ನಡೆದಿದ್ದು ಇನ್ನೂ ೨೨ ಕಿ.ಮೀ ಬಾಕಿ ಉಳಿದಿರುತ್ತದೆ. ಆದ್ದರಿಂದ ಈಗಾಗಲೇ ಆಗಿರುವ ೭೨ ಕಿಲೋಮೀಟರ್ಗಳ ಪೈಪ್ ಅಳವಡಿಕೆಯ ಕೆಲಸ ಕಾರ್ಯಗಳನ್ನು ಮತ್ತು ರಸ್ತೆ ದುರಸ್ತಿ ಕಾರ್ಯಗಳನ್ನು ಸಂಪೂರ್ಣ ಮಾಡಿದ ಬಳಿಕವೇ ಎರಡನೇ ಹಂತಕ್ಕೆ ನಾವು ಪ್ರವೇಶಿಸಲಿದ್ದೇವೆ ಆದ್ದರಿಂದ ಮೇ ಆರಂಭವಾಗುವ ಮೊದಲು ಈಗಿನ ಈ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೊಡಲಿದ್ದು ಉಳಿದ ಕೆಲಸವನ್ನು ಮಳೆಗಾಲದ ಬಳಿಕವಷ್ಟೇ ನಾವು ಮಾಡುತ್ತೇವೆ ಎಂದು ಹೇಳಿದರು.

ಅಲ್ಲದೆ ಈಗಾಗಲೇ ಯಾವ ಯಾವ ಪ್ರದೇಶಗಳಲ್ಲಿ ರಸ್ತೆಗಳ ಸಮಸ್ಯೆಗಳು ಉಂಟಾಗಿದೆ ಅದನ್ನು ಮೊದಲ ಆದ್ಯತೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತೇವೆ ಎಂದು ಭರವಸೆಯನ್ನು ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯ ವಿನಯ್ ಕುಮಾರ್ ಕಂದಡ್ಕರವರು ಮಾತನಾಡಿ ನಿಮ್ಮ ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ.ಕನಿಷ್ಠಪಕ್ಷ ಕಾಮಗಾರಿ ನಡೆಯುವ ಸಮಯದಲ್ಲಿ ಜನರ ಜಾಗೃತಿಗಾಗಿ ಸೂಚನಾ ಫಲಕವನ್ನು ಕೂಡ ನೀವು ಅಳವಡಿಸುತ್ತಿಲ್ಲ. ರಾತ್ರೋರಾತ್ರಿ ಬಂದು ಪೈಪ್ ಅಳವಡಿಸಲು ಬೃಹತ್ ಗುಂಡಿಗಳನ್ನು ತೋಡುತ್ತೀರಿ. ಅವುಗಳಲ್ಲಿ ಕೆಲವೊಂದು ಮುಚ್ಚುತ್ತಿರಿ ಕೆಲವುಗಳನ್ನು ಹಾಗೆ ಬಿಟ್ಟು ಹೋಗುತ್ತೀರಾ. ಆದರೆ ಮುಂಜಾನೆ ವೇಳೆ ಮನೆಯಿಂದ ಕೆಲಸಕ್ಕಾಗಿ ತಮ್ಮ ವಾಹನಗಳಲ್ಲಿ ಬರುವ ಜನರು ಈ ಗುಂಡಿಯಲ್ಲಿ ಬಿದ್ದು ಕೈಕಾಲುಗಳನ್ನು ಗಾಯ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಶ್ನಿಸಿದರು.

ಸದಸ್ಯ ಎಂ ವೆಂಕಪ್ಪಗೌಡರು ಮಾತನಾಡಿ ನಿಮ್ಮ ಯೋಜನೆಯ ಪ್ರಕಾರ ರಸ್ತೆಗಳ ಅಭಿವೃದ್ಧಿಗೆಂದೇ ಸುಮಾರು ೧೦ ಕೋಟಿ ರೂಪಾಯಿ ಅನುಧಾನದಲ್ಲಿ ಇದೆ ಎಂಬ ಮಾಹಿತಿ ಇರುವ ಕಾರಣ ನೀವು ರಸ್ತೆಯನ್ನು ಪರಿಪೂರ್ಣವಾಗಿ ಸರಿಪಡಿಸಿ ಕೊಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ನಮ್ಮ ವಾರ್ಡಿನಲ್ಲಿ ಈ ಕಾಮಗಾರಿಯಿಂದಾಗಿ ದಿನನಿತ್ಯದ ನೀರಿನ ಬಳಕೆಗೂ ಕೂಡ ಜನರಿಗೆ ಸಮಸ್ಯೆ ಉಂಟಾಗಿದೆ.ದಿನಕ್ಕೆ ೧೦,೨೦ ಫೋನ್ ಕಾಲ್ಗಳು ನೀರಿಗೆ ಸಮಸ್ಯೆಯಿಂದಾಗಿ ನನಗೆ ಬರುತ್ತಿದೆ.ನಾವು ಜನರಿಗೆ ಏನೆಂದು ಉತ್ತರ ಕೊಡುವುದು. ಆದ್ದರಿಂದ ನಿಮ್ಮ ಕೆಲಸ ಕಾರ್ಯಕ್ಕೆ ನಾವು ಯಾವುದೇ ಅಡ್ಡಿ ಮಾಡುವುದಿಲ್ಲ. ಆದರೆ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ನಿಮ್ಮ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಸದಸ್ಯ ಶರೀಫ್ ಕಂಠಿ ರವರು ಮಾತನಾಡಿ ನಮ್ಮ ವಾರ್ಡಿನಲ್ಲಿ ತುಂಬಾ ಸಮಸ್ಯೆ ಉಂಟಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಅಗೆದು ಹಾಕಿರುವ ರಸ್ತೆಗಳನ್ನು ಇನ್ನೂ ಕೂಡ ಸರಿಪಡಿಸಲಿಲ್ಲ. ಅಲ್ಲದೆ ನಮ್ಮ ವಾರ್ಡಿಗೆ ಯಾವ ಟ್ಯಾಂಕಿನಿಂದ ನೀರು ಸರಬರಾಜು ಮಾಡುತ್ತೀರಿ ಎಂದು ಪ್ರಶ್ನೆಯನ್ನು ಕೇಳಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿ ಸುಳ್ಯ ನಗರದ ೨೦ ವಾರ್ಡುಗಳಲ್ಲಿಯೂ ಕೂಡ ಕುಡಿಯುವ ನೀರಿನ ಪೈಪುಗಳನ್ನು ಅಳವಡಿಸಲಾಗುತ್ತಿದ್ದು ಟ್ಯಾಂಕ್ ನಿರ್ಮಾಣಕ್ಕಾಗಿ ೫ ವಲಯಗಳನ್ನು ಆಯ್ಕೆ ಮಾಡಿಕೊಂಡು ಎತ್ತರದ ಪ್ರದೇಶದಲ್ಲಿ ಟ್ಯಾಂಕ್ ನಿರ್ಮಾಣದ ಕೆಲಸ ಕಾರ್ಯವನ್ನು ಮಾಡುತ್ತಿದ್ದೇವೆ.

ಈ ಹಿನ್ನಲೆಯಲ್ಲಿ ನಾವೂರು, ಬೋರುಗುಡ್ಡೆ, ಕಾನತ್ತಿಲ್ಲ,ಜಟ್ಟಿಪಳ್ಳ ಈ ವಾರ್ಡಿಗಳಿಗಾಗಿ ಬೋರುಗುಡ್ಡೆಯಲ್ಲಿ ಟ್ಯಾಂಕ್ ನಿರ್ಮಾಣವಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದರಿಂದ ನೀರು ಲಭ್ಯವಾಗಲಿದೆ ಎಂದು ಉತ್ತರಿಸಿದರು.

ಅಗೆದು ಹಾಕಿರುವ ಕಣಿಗಳನ್ನು ದುರಸ್ತಿ ಪಡಿಸುವ ಸಂದರ್ಭ ರಸ್ತೆಯ ಅವಶೇಷಗಳನ್ನು ತುಂಬಿ ಮೇಲಿಂದ ಮೇಲಿಗೆ ಕೆಲಸವನ್ನು ಮಾಡುತ್ತಾ ಹೋಗುತ್ತಿದ್ದೀರಿ. ಮುಂದಿನ ದಿನಗಳಲ್ಲಿ ರಸ್ತೆ ಗುಂಡಿ ಬೀಳಲು ಇದು ಕಾರಣವಾಗಬಹುದು ಆದ್ದರಿಂದ ಅದನ್ನು ತಪ್ಪಿಸಿ ಶಾಶ್ವತವಾದ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಶರೀಫ್ ರವರು ಸಲಹೆಯನ್ನು ನೀಡಿದರು.

ಜಯನಗರ ಮತ್ತು ಐ ಬಿ ಬಂಗಲೆ ಬಳಿಯ ಟ್ಯಾಂಕ್ ಗೆ ನೀರು ಸಂಪರ್ಕ ಕಲ್ಪಿಸಲು ನಗರದ ಮಾಣಿ ಮೈಸೂರು ಹೆದ್ದಾರಿಯನ್ನು ಕೆಲಸ ಆರಂಭಿಸಬೇಕಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ಮಾಡುತ್ತಿದ್ದೇವೆ. ಆದಷ್ಟು ಶೀಘ್ರದಲ್ಲಿ ಅವರಿಂದ ಅನುಮತಿ ಬರಬಹುದು ಎಂಬ ನಿರೀಕ್ಷೆ ಇದೆ.ಬಂದ ಕೂಡಲೇ ಈ ಭಾಗದ ನೀರಿನ ಕಲೆಕ್ಷನ್ ನ ಕಾರ್ಯ ಆರಂಭಿಸಲಿದ್ದೇವೆ ಎಂದು ಅಜಯ್ ರವರು ಸಭೆಗೆ ಮಾಹಿತಿ ನೀಡಿದರು. ಅಲ್ಲದೆ ಮುಂದಿನ ತಿಂಗಳಿನ ಒಳಗೆ ಈಗಾಗಲೇ ಅಳವಡಿಸಿರುವ ಕುರಂಜಿಬಾಗ್ ನೀರಿನ ಟ್ಯಾಂಕಿನಲ್ಲಿ ವಿದ್ಯುತ್ ಕಲೆಕ್ಷನ್ ನೀಡಿ ಪರೀಕ್ಷೆ ನಡೆಸುವ ಯೋಜನೆಯನ್ನು ಕೂಡ ಮಾಡಿ ಕೊಂಡಿದ್ದೇವೆ ಇದಕ್ಕೆ ನಗರ ಪಂಚಾಯತ್ ಅಧ್ಯಕ್ಷ ಹಾಗೂ ಸರ್ವ ಸದಸ್ಯರುಗಳ ಸಂಪೂರ್ಣ ಸಹಕಾರ ಬೇಕೆಂದು ಕೇಳಿಕ್ಕೊಂಡರು.

ದುಗಲಡ್ಕ ಪರಿಸರದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಕ್ಕೆ ಸರಕಾರ ಈಗಾಗಲೇ ಮಂಜೂರು ಮಾಡಿರುವ ಅನುದಾನದಲ್ಲಿ ಮಾಡಲು ಸಾಧ್ಯವಾಗದೇ ಇರುವ ಕಾರಣ ಮುಂದೆ ಎರಡನೆಯ ಹಂತದ ಯೋಜನೆಯಲ್ಲಿ ನೀವುಗಳು ಈ ಬಗ್ಗೆ ಸರ್ಕಾರದ ಗಮನಕ್ಕೆ ನೀಡಿ ವ್ಯವಸ್ಥೆಯನ್ನು ಮಾಡಿಕೊಟ್ಟಲ್ಲಿ ಟ್ಯಾಂಕ್ ನಿರ್ಮಾಣ ಮಾಡುವ ಕೆಲಸ ಮಾಡಬಹುದೆಂದು ಇಂಜಿನಿಯರ್ ಸಭೆಯಲ್ಲಿ ಹೇಳಿದರು.

ಸಭೆಯಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಶ್ರೀಕಾಂತ್ ಗುತ್ತಿಗೆದಾರರ ವಿಭಾಗದ ವ್ಯವಸ್ಥಾಪಕ ನಿಸಾರ್, ಸೈಟ್ ಇಂಜಿನಿಯರ್ ಚೇತನ್ ಹಾಗೂ ನಗರ ಪಂಚಾಯತ್ ಪರಿಸರದ ಗುತ್ತಿಗೆದಾರರಾದ ಫವಾಜ್ ಜಯನಗರ, ಜಲೀಲ್, ಸುಧಾಮ, ಹಾಗೂ ನ ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.