ಸುಳ್ಯ ನಗರದ ಅಲ್ಲಲ್ಲಿ ರಸ್ತೆಯಲ್ಲಿರುವ ಗುಂಡಿಗಳು ಯಮಸ್ವರೂಪಿಯಾಗಿ ಕಾಡುತ್ತಲೇ ಇವೆ. ಇದನ್ನು ಕಾಲಕಾಲಕ್ಕೆ ಮುಚ್ಚಿ , ದುರಸ್ತಿ ಮಾಡಿ ಪಾದಚಾರಿಗಳನ್ನು, ದ್ವಿಚಕ್ರ ವಾಹನ ಸವಾರರನ್ನು ಕಾಪಾಡಬೇಕಾದ ಅಧಿಕಾರಿಗಳು ತಮಗೆ ಏನೂ ತಿಳಿದಿಲ್ಲವೋ ಏನೋ ಎನ್ನುವಂತೆ ದಿವ್ಯಮೌನದಿಂದಿದ್ದರೆ , ಸರಿಪಡಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕಾದ ಜನಪ್ರತಿನಿಧಿಗಳು ಜನರನ್ನೇ ಜವಾಬ್ದಾರರನ್ನಾಗಿ ಮಾಡಿ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ.
ಅಮೃತ್ ಯೋಜನೆಯ ಪೈಪ್ ಅಳವಡಿಕೆಗೆ ಕಾಂಕ್ರೀಟ್ ರಸ್ತೆಗಳನ್ನೇ ಅಗೆದು ತೆಗೆಯಲಾಗಿದ್ದರೆ, ಅದನ್ನು ಮುಚ್ಚಬೇಕಾದರೆ ಹೋರಾಟವನ್ನೇ ಮಾಡಬೇಕಾದ ಪರಿಸ್ಥಿತಿ. ಪೈಪು ಹಾಕುವ ಕಾಮಗಾರಿ ಮುಗಿಯಿತೆನ್ನುವಾಗ ಟೆಲಿಫೋನ್ ಕೇಬಲ್ ನವರು ಅಗೆಯುತ್ತಾರೆ. ಪೈಪ್ ಹಾಕುವವರು ಬಿ ಎಸ್ ಎನ್ ಎಲ್ ನವರೊಂದಿಗೆ ಸಮಾಲೋಚಿಸದೆಯೇ ಅಗೆಯುವುದರಿಂದ ನೆಲದಡಿ ಅಳವಡಿಸಲಾದ ಫೋನ್ ಕೇಬಲ್ ಗಳು ತುಂಡಾಗಿ ಸಂಪರ್ಕ ಕಡಿತಗೊಳ್ಳುತ್ತದೆ. ಕಳೆದ ವಾರ ಸುಳ್ಯ ನಗರದಲ್ಲಿ ಈ ರೀತಿ ಮಾಡಿದ ಕಾರಣ ತಾಲೂಕು ಕಚೇರಿಯಲ್ಲಿ ಆಗಬೇಕಾದ ಆನ್‌ಲೈನ್ ಕೆಲಸಗಳು ಪೆಂಡಿಂಗ್ ಆಗಬೇಕಾಯಿತು. ಲ್ಯಾಂಪ್ ಸೊಸೈಟಿಯ ಪಡಿತರ ವಿತರಣಾ ವಿಭಾಗಕ್ಕೆ ನೆಟ್ ವರ್ಕ್ ಸಮಸ್ಯೆ ಉಂಟಾಗಿ ಸರ್ವರ್ ಸಂಪರ್ಕ ಸಾಧ್ಯವಾಗದೆ ಕಳೆದ ಶುಕ್ರವಾರದಿಂದ ಬುಧವಾರದ ವರೆಗೆ ಪಡಿತರ ವಿತರಣೆಯಾಗದೆ ಜನರು ಕಷ್ಟಕ್ಕೊಳಗಾದರು.















ಇಂದು ಸಂಜೆ 7 ಗಂಟೆ ಸುಮಾರಿಗೆ ಮಳೆ ಬರುತ್ತಿರುವ ಸಂದರ್ಭ ಸುಳ್ಯ ರಥಬೀದಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸವಾರರಿಬ್ಬರು ಬರುತ್ತಿರುವಾಗ ರಸ್ತೆಯ ಗುಂಡಿಗೆ ವಾಹನ ಬಿದ್ದ ಪರಿಣಾಮವಾಗಿ ವಾಹನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಜಖಂಗೊಂಡರು.
ಅದರ ವೀಡಿಯೋ ದೃಶ್ಯ ಇಲ್ಲಿದೆ. ಈ ರೀತಿಯ ಹಲವು ಗುಂಡಿಗಳು ಸುಳ್ಯ ನಗರದ ರಸ್ತೆಯಲ್ಲಿದ್ದು, ಇವುಗಳ ಬಗ್ಗೆ ಆಡಳಿತ ಗಮನಹರಿಸಿ ಸಮರೋಪಾದಿಯಲ್ಲಿ ಕಾರ್ಯ ಪ್ರವೃತ್ತರಾಗಿ ಗುಂಡಿಗಳನ್ನೆಲ್ಲ ಮುಚ್ಚುವ ಪ್ರಕ್ರಿಯೆ ನಡೆಸಬೇಕಾಗಿದೆ.










