ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗ ವತಿಯಿಂದ ಹಲಸು ಹಬ್ಬ

0

ಹಲಸು ಮತ್ತು ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ

ಸಾವಯವ ಕೃಷಿಕ ಗ್ರಾಹಕ ಬಳಗ (ರಿ) ಮಂಗಳೂರು ಈ ವರ್ಷ ತನ್ನ 8 ನೇಯ ವರುಷದ ‘ ಹಲಸು ಹಬ್ಬ ‘ – ಹಲಸು ಮತ್ತು ಸಾವಯವ ಉತ್ಪನ್ನ ಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮೇ. 24 ಮತ್ತು 25 ರಂದು ನಡೆಯಿತು.

ರಾಜ್ಯದಾದ್ಯಂತ ಬೇರೆ ಬೇರೆ ಜಿಲ್ಲೆಗಳಿಂದ ಹಲಸು ಬೆಳೆಗಾರರು , ಹಲಸು ತಿಂಡಿ ತಿನಿಸುಗಳ ತಯಾರಕರು , ಸಾವಯವ ಉತ್ಪನ್ನಗಳ ಕೃಷಿಕರು , ಹಲಸು ಮೌಲ್ಯವರ್ಧಿತ ಉತ್ಪನ್ನ ಗಳ ಸಾಧಾರಣ 60 ಸಂಖ್ಯೆಗೂ ಮಿಕ್ಕಿ ರೈತರು ಭಾಗವಹಿಸಿದ್ದರು .

ಮೇ. 24 ರಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶ್ರೀಮತಿ ಜಯಲಕ್ಷ್ಮಿ ಯವರಿಂದ ಉದ್ಘಾಟನೆಗೊಂಡ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ ಜಿ.ಆರ್ ಪ್ರಸಾದ್ ರವರು ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಶ್ರೀಮತಿ ಜಯಲಕ್ಷ್ಮಿಯವರು ಸಾವಯವ ಕೃಷಿಯ ಅಗತ್ಯತೆ ಮತ್ತು ಅನಿವಾರ್ಯತೆ ಬಗ್ಗೆ ತಿಳಿ ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಚಲನಚಿತ್ರ ಹಾಗೂ ನಾಟಕ ಕಲಾವಿದ ಸ್ವರಾಜ್ ಶೆಟ್ಟಿಯವರು ಇಂಥಹ ಕಾರ್ಯಕ್ರಮಗಳು ನಮ್ಮ ಪಾರಂಪರಿಕ ,ಆರೋಗ್ಯಪೂರ್ಣ ಜೀವನಕ್ಕೆ ಪೂರಕವಾಗಿ ಉತ್ತೇಜನ ನೀಡುತ್ತದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ದೇಸಿ ಭತ್ತ ಬೀಜ ತಳಿ ಸಂರಕ್ಷಕಿ ಮತ್ತು ಸಾವಯವ ಕೃಷಿ ಯಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಅಸ್ಮ್ ಬಾನು ತಾನು ಬೆಳೆಸಿ ಸಂರಕ್ಷಿಸಿ ಕೊಂಡು ಬರುತ್ತಿರುವ ದೇಸಿ ಭತ್ತ ತಳಿ ಬಗ್ಗೆ ಹೇಳಿ ಸಾಧನೆಗೆ ಮನಸ್ಸು , ದೃಡ ಸಂಕಲ್ಪ , ಸತತ ಪರಿಶ್ರಮ ಅಗತ್ಯ ಎಂದರು.

ಹಲಸು ತಳಿ ಸಂಶೋಧಕ ಮತ್ತು ಸಾವಯವ ಕೃಷಿಕ ಗಾಬ್ರಿಯಲ್ ಸ್ತಾನಿ ವೇಗಸ್ ಅವರ ಸಾಧನೆಯನ್ನು ಗುರುತಿಸಿ ಗೌರವ ಸನ್ಮಾನ ಮಾಡಲಾಯಿತು.

ಬಳಗದ ಗೌರವ ಮಾರ್ಗದರ್ಶಕ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಗೌರವ ಅಧ್ಯಕ್ಷ ಅಡ್ರೂರು ಕೃಷ್ಣರಾವ್ ಅವರು ಉಪಸ್ಥಿತರಿದ್ದರು.
ಉದ್ಘಾಟನೆ ಕಾರ್ಯಕ್ರಮದ ನಂತರ ಗ್ರಾಹಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು . ಪ್ರತಿಯೊಂದು ವಿಭಾಗದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು.