ಸುಬ್ರಹ್ಮಣ್ಯ: ಹೊಸ ಸೇತುವೆ ಕಾಮಗಾರಿ ಪ್ರಗತಿಯಲ್ಲಿ

0

ಎತ್ತರಿಸಿದ ಸಂಪರ್ಕ ರಸ್ತೆ ಅಪಾಯದಲ್ಲಿ

ರಸ್ತೆ ಸಂಚಾರಕ್ಕೆ ಸಂಚಕಾರ ಉಂಟಾಗುವ ಭೀತಿ

ಸುಬ್ರಹ್ಮಣ್ಯದ ಕುಮಾರಧಾರ ಬಳಿ ಸುಬ್ರಹ್ಮಣ್ಯ ಪಂಜ ರಸ್ತೆಗೆ ಹೊಸ ಸೇತುವೆ ರಚನೆಯಾಗುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಆದರೀಗ ವಿಪರೀತ ಮಳೆ ಬರುತ್ತಿರುವ ಕಾರಣ
ಎತ್ತರಿಸಿದ ರಸ್ತೆ ಸುಗಮ ಸಂಚಾರಕ್ಕೆ ಕುತ್ತು ತರುವ ಭೀತಿ ಎದುರಾಗಿದೆ.

ಮುಳುಗು ರಸ್ತೆಯನ್ನು ಎತ್ತರಿಸುವ ಕಾರ್ಯ ನಡೆಯುತಿದ್ದು ಇದು ಉಳಿಯುವುದೇ ಎಂಬ ಪ್ರಶ್ನೆ ಎದ್ದಿದೆ. ಸೇತುವೆಗೆ ಎತ್ತರಿಸಿದ ಸಂಪರ್ಕ ರಸ್ತೆ ಮಾಡಲಾಗಿದ್ದು ಅದರಲ್ಲಿ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ. ಹಳೆ ರಸ್ತೆಗೆ ಮಣ್ಣು ಹಾಕಿ ರಸ್ತೆ ಏರಿಸುವ ಕೆಲಸವೂ ನಡೆಯುತ್ತಿದೆ. ಆದರೀಗ ಸಂಪರ್ಕ ರಸ್ತೆ ಕುಮಾರಧಾರದ ತಿರುಗಣೆ ಗುಂಡಿ ಎಂಬಲ್ಲಿ ಅಪಾಯದಲ್ಲಿರುವುದಾಗಿ ತಿಳಿದು ಬಂದಿದೆ. ಈ ಹಿಂದೆ ಬರೆ ಜರಿದಂತೆ ಮತ್ತೆ ಜರಿದರೆ ಸುಬ್ರಹ್ಮಣ್ಯ ಏನೆಕಲ್ಲು ಪಂಜ ಸಂಪರ್ಕ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಪ್ರತಿ ಮಳೆಗಾಲ ಅತಿಯಾಗಿ ಮಳೆಯಾದಾಗ ನೀರು ಬಂದು ಕುಮಾರಧಾರದ, ಕನ್ನಡಿ ಹೊಳೆ ನೀರು ಈ ರಸ್ತೆಗೆ ಬಂದು ಸಂಚಾರ ಸ್ಥಗಿತವಾಗುತಿತ್ತು. ಇದನ್ನು ಮನಗಂಡ ಜನ ಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿ ಹೊಸ ಸೇತುವೆ ಹಾಗೂ ರಸ್ತೆ ಎತ್ತರಿಸುವ ಯೋಜನೆ ರೂಪುಗೊಂಡು ಅನುದಾನ ವ್ಯವಸ್ಥೆ ಆಗಿತ್ತು. ಕಾಮಗಾರಿ ಆರಂಭಗೊಂಡು ಕೆಲಸ ನಡೆಯುತಿದ್ದರೂ ಈ ರಸ್ತೆ ಈ ವರ್ಷ ಪ್ರಯೋಜನ ಕೊಡುತ್ತದೋ ಅಥವಾ ಇದೇ ತೊಂದರೆ ಕೊಡುತ್ತದೋ ಎಂಬ ಜಿಜ್ಞಾಸೆ ಎದ್ದಿದೆ.