ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಅಧಿಕಾರಿಗಳಿಗೆ ಸದಸ್ಯರ ತರಾಟೆ

0

ನಗರದ ರಸ್ತೆ ಅವ್ಯವಸ್ಥೆ – ನಗರದಲ್ಲಿ ಆಡಳಿತ ಇದೆಯೋ ಇಲ್ಲವೋ ?. ಜನರು ನಾಯಿಗೆ ಬೈದಂತೆ ಬೈಯುತ್ತಿದ್ದಾರೆ – ಕೆಲಸ ಮಾಡಿ ಪಾರದರ್ಶಕತೆಯ ಮಾತನಾಡಿ : ಮುಖ್ಯಾಧಿಕಾರಿಗೆ ತಾಕೀತು

ಕುಡಿಯುವ ನೀರು ಪೈಪ್ ಲೈನ್ ನಿಂದಾಗಿ ಸುಳ್ಯ ನಗರದ ರಸ್ತೆ ದುಸ್ತರವಾಗಿದೆ. ನಗರದಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಜನರು ನಮಗೆ ನಾಯಿಗೆ ಬೈದಂತೆ ಬೈಯುತ್ತಿದ್ದಾರೆ. ಆಡಳಿತ ಇದೆಯೋ ಇಲ್ಲವೋ ಎಂದು ಪ್ರಶ್ನಿಸುತ್ತಿದ್ದಾರೆ. ಯಾಕೆ ಇಷ್ಟು ಸಮಸ್ಯೆ ಮಾಡಿದ್ದೀರಿ? ಎಂದು ಅಧಿಕಾರಿಗಳನ್ನು ಸದಸ್ಯರು ತರಾಟೆಗೆತ್ತಿಕೊಂಡ ಘಟನೆ ಸುಳ್ಯ‌ ನ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.

ಜೂ.2ರಂದು ನ.ಪಂ. ಸಾಮಾನ್ಯ ಸಭೆ ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆಯವರ ಅಧ್ಯಕ್ಷತೆಯಲ್ಲಿ ‌ನಡೆಯಿತು. ಉಪಾಧ್ಯಕ್ಷ ಬುದ್ದ ನಾಯ್ಕ, ಸ್ಥಾಯಿ‌ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಡೇವಿಡ್ ಧೀರಾ ಕ್ರಾಸ್ತ, ಬಾಲಕೃಷ್ಣ ಭಟ್ ಕೊಡೆಂಕಿರಿ, ರಿಯಾಜ್ ಕಟ್ಟೆಕಾರ್, ಶರೀಫ್ ಕಂಠಿ, ಕೆ.ಎಸ್. ಉಮ್ಮರ್, ಬಾಲಕೃಷ್ಣ ರೈ ದುಗಲಡ್ಕ, ಸುಧಾಕರ ಕುರುಂಜಿಭಾಗ್, ಸುಶೀಲ ಕಲ್ಲುಮುಟ್ಲು, ಪ್ರವಿತಾ ಪ್ರಶಾಂತ್, ಶಿಲ್ಪಾ ಸುದೇವ್, ಶೀಲಾ ಕುರುಂಜಿ, ಸರೋಜಿನಿ ಪೆಲ್ತಡ್ಕ,ಪೂಜಿತಾ ಕೆ.ಯು., ನಾಮ ನಿರ್ದೇಶನ ಸದಸ್ಯರುಗಳಾದ ರಾಜು ಪಂಡಿತ್, ಸಿದ್ದೀಕ್ ಕೊಕ್ಕೊ ಇದ್ದರು.

ಸಭೆ ಆರಂಭವಾಗುತ್ತಿದ್ದಂತೆ ಅಧಿಕಾರಿ ಜಯಲಕ್ಷ್ಮಿ ಯವರು ಫಲಾನುಭವಿಗಳಿಗೆ ಪಂಚಾಯತ್ ನಿಂದ ನೀಡಲಾದ ಸವಲತ್ತಿನ ಮಾಹಿತಿ ನೀಡಿದಾಗ, ಸದಸ್ಯ ಕೆ.ಎಸ್. ಉಮ್ಮರ್ ರವರು, “ಈ ಬಗ್ಗೆ ನಮಗೆ ಯಾಕೆ ಮಾಹಿತಿ ನೀಡುತ್ತಿಲ್ಲ. ನಮ್ಮ ವಾರ್ಡ್ ನಿಂದ ಆಯ್ಕೆಯಾದವರನ್ನು ಯಾಕೆ ಕರೆದಿಲ್ಲ. 20 ವಾರ್ಡ್ ನಿಂದಲೂ ಒಬ್ಬೊರನ್ನು ಕರೆದು ಇಲ್ಲಿ ಸವಲತ್ತು ನೀಡಬಹುದಲ್ಲವೇ ? ಎಂದು ಪ್ರಶ್ನಿಸಿದರು. ಇಲ್ಲಿ ಕೆಲವರಿಗೆ ಮಾತ್ರ ನೀಡೋದು ಎಂದು ಅಧಿಕಾರಿ ಹೇಳಿದಾಗ, ” ನೀವು ನಿಮಗೆ ಬೇಕಾದವರಿಗೆ ಮಾತ್ರ ಇಲ್ಲಿ ನೀಡುತ್ತಿದ್ದೀರಿ. ಇದು ಸರಿಯಾದ ಕ್ರಮವಲ್ಲ. ಪ್ರತೀ ವಾರ್ಡ್ ನವರನ್ನು ಕರೆಯಬೇಕು ಎಂದು ಹೇಳಿದರು. ಈ ವೇಳೆ ಮುಖ್ಯಾಧಿಕಾರಿ ಸುಧಾಕರ್ ರವರು “ನಾವು ಪಾರದರ್ಶಕ ವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿ ಮಾತು ಮುಂದುವರೆಸಿದಾಗ, ಮುಖ್ಯಾಧಿಕಾರಿ ಮಾತಿನಿಂದ ಅಸಮಾಧಾನಗೊಂಡ ಸದಸ್ಯ ಉಮ್ಮರ್ ಕೆ.ಎಸ್. ರವರು ಅವರನ್ನು ತರಾಟೆಗೆತ್ತಿಕೊಂಡರು.


ನೀವು ಪಾರದರ್ಶಕತೆಯ ಬಗ್ಗೆ ಮಾತನಾಡಬೇಡಿ. ನಾನು ಕೂಡಾ 10 ವರ್ಷ ಇಲ್ಲಿ ಸದಸ್ಯ ನಾಗಿದ್ದೇನೆ. ಕಚೇರಿ ಬಿಟ್ಟು ಒಮ್ಮೆ ರಸ್ತೆಗೆ ಇಳಿದರೆ ನಿಮ್ಮ ಪಾರದರ್ಶಕ ಕೆಲಸದ ಅರಿವಾಗುತ್ತದೆ. ನಗರದಲ್ಲಿ ಆಡಳಿತ ಇದೆಯೋ ಇಲ್ಲವೋ ಎಂದು ಜನರು ಕೇಳುತ್ತಿದ್ದಾರೆ. ರಸ್ತೆ ಅವ್ಯವಸ್ಥೆಯಿಂದ ನಡೆದಾಡಲು ಸಾಧ್ಯವಾಗದ ಸ್ಥಿತಿ. ಜನರು ನಾಯಿಗೆ ಬೈದಂತೆ ಬೈಯ್ಯುತ್ತಿದ್ದಾರೆ. 1 ರೂ. ಕೆಲಸ ಸಾರ್ವಜನಿಕವಾಗಿ ಆಗ್ತ ಇಲ್ಲ. ನೀವು ಸಾರ್ವಜನಿಕ ವಾಗಿ ಮಾಡಿದ ಕೆಲಸ ತೋರಿಸಿ ಎಂದು ಉಮ್ಮರ್ ಸವಾಲೆಸೆದರಲ್ಲದೆ, ಜನರು ನಮ್ಮನ್ನು ಕೇಳುತ್ತಿದ್ದಾರೆ. ಅಧಿಕಾರಿಗಳು ವಾರ್ಡ್ ಸುತ್ತಿ ಸಮಸ್ಯೆ ತಿಳಿದಿದ್ದೀರಾ? ಎಂದು ಪ್ರಶ್ನಿಸಿದರು.

” ನನ್ನ ವಾರ್ಡಲ್ಲಿ ಕುಡಿಯಲು ನೀರಿಲ್ಲ” ಎಂದು ದುಗಲಡ್ಕ ವಾರ್ಡ್ ಸದಸ್ಯ ಬಾಲಕೃಷ್ಣ ರೈ ಹೇಳಿದರು.

ಬಳಿಕ ಮಾತನಾಡಿದ ಉಮ್ಮರ್ ರವರು “ನೀರು ಕಾಮಗಾರಿ ಮಾಡುವವರು ಸಭೆಗೆ ಬಂದು ಈ ತಿಂಗಳು ಮುಗಿಸ್ತೇವೆ. ಮುಂದಿನ ತಿಂಗಳು ಎಂದು ಹೇಳಿ ಹೋಗ್ತಾರೆ. ಅದನ್ನು ಯಾಕೆ ಫಾಲೋ ಅಪ್ ಮಾಡ್ತಾ ಇಲ್ಲ. ಅವರನ್ನು ಪ್ರತ್ಯೇಕ ಸಭೆ ಕರೆದು ಯಾಕೆ ಮಾಡಿಲ್ಲ ಎಂದರಲ್ಕದೆ, ನಗರದ ಕಸದ ಸಮಸ್ಯೆ ಕುರಿತು ಮಾತನಾಡಿದರು.
ರಸ್ತೆ ಸರಪಡಿಸದಿದ್ದರೆ ಧರಣಿ ಕುಳಿತುಕೊಳ್ಳುವುದಾಗಿ ಉಮ್ಮರ್ ಹೇಳಿದರಲ್ಲದೆ, ಕುಳಿತಲ್ಲಿಂದ ಎದ್ದು ಮುಂದೆ ಬಂದರು. ನಗರದ ರಸ್ತೆ ಅವ್ಯವಸ್ಥೆ ಕುರಿತು ವೆಂಕಪ್ಪ ಗೌಡರು ಕೂಡಾ ಮಾತನಾಡಿದರು. ಅಧ್ಯಕ್ಷೆ ಶಶಿಕಲಾರವರು ಕೂಡಾ ರಸ್ತೆ ಸಮಸ್ಯೆ ಇರುವುದು ಹೌದು.‌ಈಗ ಇಂಜಿನಿಯರ್ ಬರುತ್ತಾರೆ. ಅವರಲ್ಲಿ ಈ ಕುರಿತು ಮಾತನಾಡೋಣ ಎಂದು ಹೇಳಿದ ಮೇರೆಗೆ ಉಮ್ಮರ್ ತಮ್ಮ ಆಸನಕ್ಕೆ ಹೋಗಿ ಕುಳಿತರು.