ಜೂ.13 ವಿಶ್ವ ತೊನ್ನು ಜಾಗ್ರತಿ ದಿನ

0

ತೊನ್ನು ಏನಿದರ ಮರ್ಮ?

ತೊನ್ನು ಎನ್ನುವುದು ಚರ್ಮಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆಯಾಗಿದ್ದು ಆಂಗ್ಲಭಾಷೆಯಲ್ಲಿ ಈ ರೋಗವನ್ನು ‘ವಿಟಿಲಿಗೊ’ ಎಂದು ಕರೆಯುತ್ತಾರೆ. ಈ ತೊನ್ನು ರೋಗ ಸಾಂಕ್ರಾಮಿಕ ರೋಗವಲ್ಲ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಸ್ಪರ್ಶದ ಮುಖಾಂತರ ಹರಡುವುದಿಲ್ಲ. ಅದೇ ರೀತಿ ತೊನ್ನು ರೋಗಕ್ಕೂ ಕುಷ್ಠ ರೋಗಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ತೊನ್ನು ರೋಗ ಯಾವುದೇ ವಯಸ್ಸಿನಲ್ಲಿ, ಯಾವುದೇ ಜಾತಿಯ, ಧರ್ಮದ ಮತ್ತು ಲಿಂಗದ ವ್ಯಕ್ತಿಗೆ ಬರಬಹುದು. ಸಂಪೂರ್ಣವಾಗಿ ತೊನ್ನು ರೋಗವನ್ನು ಗುಣಪಡಿಸುವ ಔಷಧಿ ಅಥವಾ ಚಿಕಿತ್ಸೆ ಲಭ್ಯವಿಲ್ಲದಿದ್ದರೂ, ಕೆಲವೊಂದು ಔಷಧಿಗಳ ಮೂಲಕ ತೊನ್ನು ವ್ಯಕ್ತಿಯ ದೇಹದಲ್ಲಿ ಹರಡದಂತೆ ತಡೆಯಬಹುದು. ಇತ್ತೀಚಿನ ದಿನಗಳಲ್ಲಿ ಬಿಳಿಕಲೆಗಳು ಹರಡದಂತೆ ಮತ್ತು ಕಾಣದಂತೆ ಮಾಡಲು ಹಲವಾರು ಚಿಕಿತ್ಸಾ ವಿಧಾನಗಳು ಬಂದಿದೆ. ಸೌಂದರ್ಯ ವರ್ಧಕ ಚಿಕಿತ್ಸೆ, ಯುವಿಕಿರಣ ಚಿಕಿತ್ಸೆ ಮತ್ತು ತೊನ್ನು ಉಂಟಾದ ಕಡೆ ಚರ್ಮದ ಕಸಿ ಮಾಡುವುದರ ಮುಖಾಂತರ ತೊನ್ನು ಕಾಣದಂತೆ ಮಾಡಲಾಗುತ್ತದೆ.

ಏನಿದು ತೊನ್ನು ರೋಗ? :-

ನಮ್ಮ ದೇಹದ ಚರ್ಮದಲ್ಲಿ ಬಣ್ಣ ಉತ್ಪತ್ತಿ ಮಾಡುವ ‘ಮೆಲನೋಸೈಟ್ಸ್’ ಎಂಬ ಜೀವಕಣಗಳು ಇರುತ್ತದೆ. ಇವು ಚರ್ಮಕ್ಕೆ ಬಗೆ ಬಗೆಯ ಬಣ್ಣವನ್ನು ನೀಡುತ್ತದೆ. ಈ ಜೀವಕಣಗಳು ಚರ್ಮ, ಕೂದಲು, ತುಟಿ, ಜನನಾಂಗ, ಕಣ್ಣು, ಗುಪ್ತಾಂಗ, ಬಾಯಿಯ ಒಳಭಾಗ, ಕಿವಿಯ ಒಳಭಾಗ, ಮೂಗಿನ ಹೊಳ್ಳೆಗಳು, ಗುಧದ್ವಾರ ಮುಂತಾದ ಕಡೆ ಹೇರಳವಾಗಿ ಇರುತ್ತದೆ. ಕಾರಣಾಂತರಗಳಿಂದ ಹೆಚ್ಚಾಗಿ ‘ಆಟೋ ಇಮ್ಯುನಿಟಿ’ ಅಂದರೆ, ದೇಹದ ರಕ್ಷಣಾ ವ್ಯವಸ್ಥೆಯ ವಿರುದ್ಧ ದೇಹದ ಜೀವಕಣಗಳು ಸಿಡಿದು ನಿಂತಾಗ ಈ ರೀತಿ ಸಮಸ್ಯೆಗಳು ಉದ್ಬವವಾಗುತ್ತದೆ. ಮೆಲನೋಸೈಟ್ಸ್ ಜೀವಕಣಗಳ ಮೇಲೆ ಪ್ರತಿಕಾಯಗಳು ಉತ್ಪತ್ತಿಯಾಗಿ ಈ ಜೀವ ಕಣಗಳು ತಮ್ಮ ಸತ್ವವನ್ನು ಕಳೆದುಕೊಳ್ಳುತ್ತದೆ. 95 ಶೇಕಡಾ ಮಂದಿಯಲ್ಲಿ ಇದೇ ಕಾರಣದಿಂದ ತೊನ್ನು ರೋಗ ಬರುತ್ತದೆ. ಕೆಲವೊಂದು ಸಂಶೋಧನೆಗಳು ವೈರಾಣು ಕೂಡಾ ಈ ತೊನ್ನು ರೋಗಕ್ಕೆ ಕಾರಣವಾಗುತ್ತದೆ. ಎಂದು ಹೇಳಿದ್ದರೂ, ಸಂಪೂರ್ಣವಾದ, ಪರಿಪೂರ್ಣವಾದ ಖಚಿತ ಮಾಹಿತಿ ಇರುವುದಿಲ್ಲ. ಯಾವುದೇ ಕಾರಣದಿಂದ ಈ ‘ಮೆಲನೋಸೈಟ್ಸ್’ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ, ತೊನ್ನು ಉಂಟಾಗುತ್ತದೆ. ಪ್ರಾರಂಭದಲ್ಲಿ ಸಾಧಾರಣ ತಿಳಿ ಬಣ್ಣದಿಂದ ಹಾಲು ಬಿಳಿಬಣ್ಣದ ಕಲೆಗಳು ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ. ಕಾಲ ಕ್ರಮೇಣ ಈ ಕಲೆಗಳು ದೊಡ್ಡದಾಗುತ್ತಾ ಹೋಗಿ ದೇಹದೆಲ್ಲೆಡೆ ಹರಡುತ್ತದೆ. ನಮ್ಮ ಭಾರತ ದೇಶದಲ್ಲಿ ಸುಮಾರು 2 ರಿಂದ 3 ಶೇಕಡಾ ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ. ಇದು ಸಾಂಕ್ರಾಮಿಕ ರೋಗವಲ್ಲದಿದ್ದರೂ, ರೋಗದಿಂದ ಬಳಲುವ ವ್ಯಕ್ತಿಗಳು ಸಮಾಜದ ದೃಪ್ಟಿಯಲ್ಲಿ ಗೇಲಿಗೊಳಗಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಜನರಲ್ಲಿ ಇರುವ ಮೂಡನಂಬಿಕೆಗಳು, ಪೂವ್ರಾಗ್ರಹ ಪೀಡಿತ ವಿಚಾರಗಳು, ಸೀಮಿತವಾದ ತಿಳುವಳಿಕೆ, ಕುಷ್ಟ ರೋಗದ ಬಗೆಗಿನ ಗೊಂದಲ ಮುಂತಾದ ಕಾರಣಗಳಿಂದ, ಹೆಚ್ಚಾಗಿ ತೊನ್ನು ರೋಗದಿಂದ ಬಳಲುತ್ತಿರುವವರು ಸಾಮಾಜಿಕವಾಗಿ ಹೆಚ್ಚು ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅನಕ್ಷರತೆ, ಅಜ್ಞಾನ ಮತ್ತು ಸಾಮಾನ್ಯ ಜ್ಞಾನದ ಕೊರತೆಯಿಂದಾಗಿ ರೋಗದ ಬಗ್ಗೆ ಅನಗತ್ಯ ಗೊಂದಲವನ್ನು ಜನರಲ್ಲಿ ಉಂಟುಮಾಡಲಾಗುತ್ತದೆ.

ತೊನ್ನು ಮತ್ತು ಮೂಡನಂಬಿಕೆಗಳು:-

  1. ತೊನ್ನು ರೋಗ ಸ್ಪರ್ಶದಿಂದ ಹರಡುತ್ತದೆ ಎನ್ನುವುದು ಮೂಡನಂಬಿಕೆಯ ಪರಮಾವಧಿ. ತೊನ್ನು ರೋಗ ಸಾಂಕ್ರಾಮಿಕ ರೋಗವಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಸ್ಪರ್ಶದಿಂದ ಹರಡುವುದೇ ಇಲ್ಲ.
  2. ತೊನ್ನು ರೋಗಕ್ಕೂ ಕುಷ್ಠ ರೋಗಕ್ಕೂ ಯಾವುದೇ ಸಂಬಂಧವಿಲ್ಲ. ಕುಷ್ಠರೋಗ ಸಾಂಕ್ರಾಮಿಕ ರೋಗವಾಗಿದ್ದು ಕೀಟಾಣುಗಳಿಂದ ಹರಡುತ್ತದೆ. ಆದರೆ ತೊನ್ನು ರೋಗ ಆಂತರಿಕವಾದ ತೊಂದರೆಯಿಂದ ಉಂಟಾಗುತ್ತದೆ.
  3. ದೈವಿಕ ತೊಂದರೆಯಿಂದ ದೇವರು ಮುನಿಸಿಕೊಂಡಾಗ ತೊನ್ನು ರೋಗ ಹರಡುತ್ತದೆ ಎಂಬುವುದು ಖಂಡಿತವಾಗಿಯೂ ಸತ್ಯಕ್ಕೆ ದೂರವಾದ ವಿಚಾರ.
  4. ಹಾಲು ಮತ್ತು ಇತರ ಬಿಳಿಬಣ್ಣದ ಆಹಾರ ಪದಾರ್ಥ, ಹುಳಿ ಆಹಾರ ಸೇವನೆ ಮತ್ತು ಮೀನು ತಿಂದ ಬಳಿಕ ಹಾಲು ಕುಡಿಯುವುದರಿಂದ ತೊನ್ನು ರೋಗ ಬರುತ್ತದೆ ಮತ್ತು ಉಲ್ಬಣವಾಗುತ್ತದೆ ಎಂಬುವುದು ಕೂಡ ಸತ್ಯಕ್ಕೆ ದೂರವಾದ ವಿಚಾರ.
  5. ಹಾವನ್ನು ಕೊಂದರೆ ತೊನ್ನು ರೋಗ ಬರುತ್ತದೆ ಎಂಬ ಮೂಡನಂಬಿಕೆ ಕೂಡ ತಪ್ಪು ಗ್ರಹಿಕೆ.

ತೊನ್ನು ರೋಗದ ಲಕ್ಷಣಗಳು ಏನು? :-

ಆರಂಭದಲ್ಲಿ ಹಾಲು ಬಿಳಿ ಬಣ್ಣದ ಚಿಕ್ಕ ಚಿಕ್ಕ ಹಚ್ಚೆಗಳು ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ. ಕ್ರಮೇಣ ಈ ಕಲೆಗಳು ಸುತ್ತಲಿನ ಚರ್ಮದ ಬಣ್ಣಕ್ಕೆ ಬಿನ್ನವಾಗಿ ಎದ್ದು ಕಾಣುತ್ತದೆ. ಕ್ರಮೇಣವಾಗಿ ಈ ಕಲೆಗಳು ದೊಡ್ಡದಾಗುತ್ತದೆ. ಕೆಲವರಲ್ಲಿ ಕೆಲವೇ ವಾರಗಳಲ್ಲಿ ದೊಡ್ಡದಾದರೆ ಇನ್ನುಳಿದವರಲ್ಲಿ ಈ ಕಲೆಗಳು ಹಲವಾರು ತಿಂಗಳುಗಳೇ ಬೇಕಾಗುತ್ತದೆ. ಸಾಮಾನ್ಯವಾಗಿ ದೇಹದೆಲ್ಲೆಡೆ ಕಾಣಿಸಿಕೊಳ್ಳುವ ಈ ಕಲೆಗಳು ಸೂರ್ಯನ ಬಿಸಿಲಿಗೆ ಹೆಚ್ಚು ಹೋದಾಗ ಉರಿಯುವ ಸಾಧ್ಯತೆ ಇರುತ್ತದೆ. ತೊನ್ನಿನ ಕಲೆಗಳು ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು ಆದರೆ ಹೆಚ್ಚಾಗಿ ತೋಳು, ಕಣ್ಣಿನ ಒಳಭಾಗ, ಮಣಿಗಂಟು, ಮೊಣಕೈ, ಬಾಯಿ, ಕಾಲು, ಕೈಗಳ ಹಿಂಭಾಗ ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ರೋಗದ ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಆದರೆ ಹೆಚ್ಚು ಕಪ್ಪು ವರ್ಣದ ವ್ಯಕ್ತಿಗಳಲ್ಲಿ ಈ ತೊನ್ನು ರೋಗ ಹೆಚ್ಚು ತೀವ್ರವಾಗಿ ಕಂಡು ಬಂದು ಎದ್ದು ಕಾಣುತ್ತದೆ. ಹೆಚ್ಚು ಬೆಳ್ಳಗಿರುವ ವ್ಯಕ್ತಿಗಳಲ್ಲಿ ರೋಗದ ತೀವ್ರತೆ ಕಡಮೆ ಇರುತ್ತದೆ.

ಚಿಕಿತ್ಸೆ ಹೇಗೆ?:

ತೊನ್ನು ರೋಗದಿಂದ ಬಳಲುತ್ತಿರುವವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಎಲ್ಲರಂತೆ ಇರುತ್ತಾರೆ. ಅವರಿಗೆ ಯಾವುದೇ ರೀತಿಯ ವಿಶೇಷ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಆದರೆ ಅವರನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿಟ್ಟಲ್ಲಿ, ಅಸ್ವಶ್ಥರಂತೆ ನೋಡಿದಲ್ಲಿ ಮಾನಸಿಕವಾಗಿ, ಜರ್ಜರಿತರಾಗಿ ಆತ್ಮಹತ್ಯೆಯಂತಹ ಪ್ರಯತ್ನಕ್ಕೆ ಮುಂದಾಗಬಹುದು. ಅಂತಹ ವ್ಯಕ್ತಿಗಳಿಗೆ ಆತ್ಮಸೈರ್ಯ ತುಂಬಿ, ಅವರಿಗೆ ಪ್ರೀತಿ ವಿಶ್ವಾಸ ನೀಡಿ, ಧೈರ್ಯ ನೀಡಿದ್ದಲ್ಲಿ ಅವರು ಕೂಡ ಇತರರಂತೆ ಜೀವನ ಸಾಗಿಸಬಹುದು. ಚರ್ಮದ ವೈದ್ಯರನ್ನು ಕಂಡು ಬಿಸಿಲಿಗೆ ಹೋಗುವಾಗ ಚರ್ಮಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಅದೇ ರೀತಿ ಕಣ್ಣಿನ ರೆಪ್ಪೆಯೊಳಗೆ ತೊನ್ನು ಇರುವವರಿಗೆ ದೃಷ್ಟಿ ದೋಷ ಮತ್ತು ಅತಿಯಾದ ಕಣ್ಣೀರು ಬರುವ ಸಾಧ್ಯತೆ ಇದೆ. ಕಣ್ಣಿನ ತಜ್ಞರನ್ನು ಬೇಟಿ ನೀಡಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳತಕ್ಕದ್ದು. ಅದೇ ರೀತಿ ಕಿವಿಯ ಒಳಭಾಗದಲ್ಲಿ ತೊನ್ನು ಇರುವವರಿಗೆ ಕಿವುಡುತನದ ಸಾಧ್ಯತೆ ಹೆಚ್ಚಾಗಿರುವುದರಿಂದ, ಕಿವಿ ಮತ್ತು ಗಂಟಲು ತಜ್ಞರ ಸಲಹೆ ಅತೀ ಅವಶ್ಯಕ, ಅದೇ ರೀತಿ ಮಾನಸಿಕ ತಜ್ಞರು ಕೂಡಾ, ರೋಗದ ಬಗೆಗಿನ ಅಜ್ಞಾನಗಳನ್ನು ತೊಡೆದು ಹಾಕಿ, ಮಾನಸಿಕ ಸ್ಥೆರ್ಯ ನೀಡಿದ್ದಲ್ಲಿ ತೊನ್ನು ರೋಗಿಗಳು ಇತರರಂತೆ ಸುಖ ಜೀವನ ನಡೆಸಬಹುದು. ಹೊಸ ವಿಧಾನಗಳಾದ ಚರ್ಮದ ಕಸಿ ಶಸ್ತ್ರಚಿಕಿತ್ಸೆ, ಯುವಿ ವಿಕಿರಣ ಚಿಕಿತ್ಸೆ, ಸೌಂದರ್ಯವರ್ಧಕ ಚಿಕಿತ್ಸೆಗಳಿಂದ ದೇಹದಲ್ಲಿ ಹೆಚ್ಚು ಕಾಣುವ ತೊನ್ನು ಉಂಟಾದ ಜಾಗವನ್ನು ಸರಿಪಡಿಸಿಕೊಂಡು, ಸಮಾಜದಲ್ಲಿ ಸುಖ ಜೀವನ ಖಂಡಿತವಾಗಿಯೂ ನಡೆಸಬಹುದು. ಕುಟುಂಬಸ್ಥರು, ಸ್ನೇಹಿತರು ಮತ್ತು ವೈದ್ಯರು ಮಾನಸಿಕ ಧೈರ್ಯ ನೀಡಿ ಆತ್ಮಸ್ಥೆರ್ಯ ಕುಸಿಯದಂತೆ ಮಾಡಬೇಕು.

ಕೊನೆ ಮಾತು :-

ತೊನ್ನು ಚರ್ಮಕ್ಕೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು, ಚರ್ಮದಲ್ಲಿ ಬಣ್ಣ ನೀಡುವ ‘ಮೆಲನಿನ್’ ಎಂಬ ವಸ್ತು ಉತ್ಪಾದನೆಯಾಗದ ಕಾರಣ, ಬಿಳಿಯಾದ ಹಾಲುಬಣ್ಣದ ಕಲೆಗಳು ಉತ್ಪತ್ತಿಯಾಗುತ್ತದೆ. ಪ್ರತಿ ವರ್ಷ ಜೂನ್ 13 ರಂದು “ವಿಶ್ವ ತೊನ್ನು ಜಾಗ್ರತಿ ದಿನ” ಎಂದು ಆಚರಿಸಿ, ಜನಸಾಮಾನ್ಯರಲ್ಲಿ ಈ ತೊನ್ನು ರೋಗದ ಬಗ್ಗೆ ಜಾಗ್ರತೆ ಮೂಡಿಸಿ, ರೋಗದ ಬಗ್ಗೆ ಇರುವ ಮೂಡನಂಬಿಕೆಗಳನ್ನು ತೊಡೆಯುವ ಯತ್ನ ಮಾಡಲಾಗುತ್ತದೆ. ಸಾಂಕ್ರಾಮಿಕವಲ್ಲದ, ಪ್ರಾಣಾಪಾಯವಿಲ್ಲದ ಕೇವಲ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವ ಈ ರೋಗದ ಬಗ್ಗೆ ಜನರಲ್ಲಿ ಹೆಚ್ಚು ಜಾಗ್ರತಿ ಮೂಡಿಸುವ ತುರ್ತು ಅಗತ್ಯ ಇದೆ. ಈ ರೋಗದಿಂದ ಬಳಲುತ್ತಿರುವ ಹಲವರಿಗೆ ಮಾನಸಿಕ ಸ್ಥೆರ್ಯ ನೀಡಿ, ಅವರನ್ನು ಅಸ್ಪಶ್ಯರಂತೆ ಕಾಣದೆ, ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುವುದು ನಮ್ಮೆಲ್ಲರ ಗುರುತರವಾದ ಹೊಣೆಗಾರಿಕೆ ಆಗಿದೆ. ಹಾಗಾದರೇ ಮಾತ್ರ ವಿಶ್ವ ತೊನ್ನು ದಿನದ ಆಚರಣೆಗೆ ಹೆಚ್ಚಿನ ಮೌಲ್ಯ ಬಂದು ಅರ್ಥಪೂರ್ಣವಾಗಬಹುದು. ಅದರಲ್ಲಿಯೇ ಸಮಾಜದ ಮತ್ತು ವಿಶ್ವದ ಉನ್ನತಿ ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ ಹೊಸಂಗಡಿ
ಮೊಬೈಲ್ ನಂ. 9845135787