ಬಿ.ಜೆ.ಪಿ.ಯವರ ಹೋರಾಟವೇನಿದ್ದರೂ ರಾಜಕೀಯ ಲಾಭ ಪಡೆಯಲು ಹೊರತು ಜನರಿಗೆ ಉಪಕಾರವಾಗುವಂತಾದ್ದೇನಾದರೂ ಅವರು ಮಾಡಿದ್ದಿದೆಯೇ ? : ಎಂ.ವೆಂಕಪ್ಪ ಗೌಡ ಪ್ರಶ್ನೆ

0

” ಬೆಂಗಳೂರಿನಲ್ಲಿ ಆರ್.ಸಿ.ಬಿ. ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟಿರುವ ವಿಚಾರವನ್ನು ಕಾಂಗ್ರೆಸ್ಸಿನ ತಲೆಗೆ ಕಟ್ಟುವ ಉದ್ದೇಶದಿಂದ ಹೋರಾಟಕ್ಕಿಳಿಯಲು ಬಿ.ಜೆ.ಪಿ. ನಿರ್ಧರಿಸಿರುವುದು ರಾಜಕೀಯ ಲಾಭ ಪಡೆಯಲು ಅವರು ಪ್ರಯತ್ನಿಸುತ್ತಿರುವ ಕಸರತ್ತೇ ಹೊರತು ಜನರಿಗೆ ಪ್ರಯೋಜನವಾಗಲಿ ಎಂದು ಅಲ್ಲ ” ಎಂದು ಕಾಂಗ್ರೆಸ್ ನಾಯಕ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡರು ಟೀಕಾಪ್ರಹಾರ ನಡೆಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ” ಭಾರತೀಯ ಜನತಾ ಪಕ್ಷದವರಿಗೆ ದೇಶದಲ್ಲಿ ಬಿಜೆಪಿ ಸರ್ಕಾರ ಇದ್ದಲ್ಲಿ ನಡೆಯುವ ದುರಂತಗಳು ಸಾವು ನೋವುಗಳು ಕಾಣುವುದಿಲ್ಲ. ವಿಮಾನ ದುರಂತದಲ್ಲಿ ಎಷ್ಟು ಮಂದಿ ಮೃತಪಟ್ಟರು, ಹೆಲಿಕಾಪ್ಟರ್ ದುರಂತದಲ್ಲಿ ಎಷ್ಟು ಮಂದಿ ಪ್ರಾಣ ತೆತ್ತರು, ಸೇತುವೆ ದುರಂತದಲ್ಲಿ ಎಷ್ಟು ಮಂದಿ ಸಾವಿಗೀಡಾದರು, ದೇವಸ್ಥಾನದ ನೂಕು ನುಗ್ಗಲಿನಲ್ಲಿ ಏನೆಲ್ಲ ಅನಾಹುತವಾಯಿತು ? ಕುಂಭ ಮೇಳದ ಸಂದರ್ಭ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಎಷ್ಟು ಮಂದಿ ದೇವರ ಪಾದ ಸೇರಿದರು ಎಂಬೆಲ್ಲ ವಿಚಾರಗಳು ಅವರಿಗೆ ಕಾಣುವುದೇ ಇಲ್ಲ. ದುರಂತಗಳಲ್ಲಿ, ಕೋಮು ಪ್ರಚೋದನೆಯಲ್ಲಿ ಜನ ಸಾವಿಗೀಡಾದರೆ ಅದರಿಂದ ತಮ್ಮ ಪಕ್ಷಕ್ಕೆ ಏನು ಲಾಭ ಆದೀತು ಎಂದು ಲೆಕ್ಕ ಹಾಕುತ್ತಾರೆ ಹೊರತು ದೇಶದ ಸೌಹಾರ್ದತೆಯ ಬಗ್ಗೆ , ಸಾಮರಸ್ಯದ ಬಗ್ಗೆ ,ಒಗ್ಗಟ್ಟಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಆಡಳಿತವಿರುವ ರಾಜ್ಯಗಳಲ್ಲಿ ಯಾರಾದರೂ ದುರಂತದಲ್ಲಿ ಸತ್ತರೆ ಅದು ಅವರಿಗೆ ಕಾಣುವುದಿಲ್ಲ. ನಮ್ಮ ದೊಡ್ಡ ದೊಡ್ಡ ಮಾಧ್ಯಮದಲ್ಲಿ ಕೂಡ ಅದು ಹೈಲೈಟ್ ಗೊಳ್ಳುವುದಿಲ್ಲ. ಎಲ್ಲಾದರೂ ಒಮ್ಮೆ ಫ್ಲಾಷ್ ನ್ಯೂಸ್ ಬರುತ್ತದೆ ಅಷ್ಟೆ. ಅದಕ್ಕೇ ಬಿಜೆಪಿ ನಾಯಕರು ಸಂತಾಪ ಸೂಚಿಸುತ್ತಾರೆ, ನಂತರ ಮರೆತು ಬಿಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ನಡೆದಿರುವ ವಿಮಾನ ದುರಂತ, ಹೆಲಿಕಾಪ್ಟರ್ ದುರಂತ, ಮಧ್ಯಪ್ರದೇಶ, ಉತ್ತರ ಪ್ರದೇಶ ದಲ್ಲಿ ನಡೆದ ಸೇತುವೆ ದುರಂತ ಗಳಲ್ಲಿ ನೂರಾರು ಜನರು ಸತ್ತರೆ ಅದನ್ನು ಮರೆತು ಬಿಟ್ಟು ನಮ್ಮ ಪ್ರಧಾನಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.ಆದರೆ ಕರ್ನಾಟಕದಲ್ಲಿ ಕೆ ಎಸ್ ಎ ಯ ಎಡವಟ್ಟು ನಿಂದ ನಡೆದ ದುರಂತದಲ್ಲಿ ಮಡಿದ 11 ಜನರ ಸಾವನ್ನು ತಮ್ಮ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ನೋಡುತ್ತಾರೆ. ಅಷ್ಟೆ.. ಅದಕ್ಕಾಗಿ ಬಿಜೆಪಿ ಯವರು ಪ್ರತಿಭಟನೆ ಸಭೆಗಳನ್ನು ಮಾಡುತ್ತಿದ್ದಾರೆ. ಆದರೆ ನಿನ್ನೆ ಮಹಾರಾಷ್ಟ್ರ ದಲ್ಲಿ ಉತ್ತರ ಪ್ರದೇಶ ದಲ್ಲಿ ನಡೆದ ಸೇತುವೆ ಅವಘಡ ಗಳಲ್ಲಿ ಸತ್ತವರ ಬಗ್ಗೆ ಇವರಿಗೆ ಅರಿವೇ ಇಲ್ಲ ಎಂದಾದರೆ ಇವರು ಮಾಡುತ್ತಿರುವ ಹೋರಾಟ ರಾಜಕೀಯ ಲಾಭಕ್ಕಾಗಿ ಅಲ್ಲದೆ ಮತ್ತಿನ್ನೇನು ? ” ಎಂದು ಎಂ.ವೆಂಕಪ್ಪ ಗೌಡರು ಪ್ರಶ್ನಿಸಿದ್ದಾರೆ.