ಕಟ್ಟಡ ಸೋರುತ್ತಿರುವುದಕ್ಕೆ ಆಕ್ಷೇಪ : ಗುತ್ತಿಗೆದಾರರಿಗೆ ಫೋನ್ ಮಾಡಿ, ಸರಿಪಡಿಸಲು ಸೂಚನೆ
ನಾಳೆ ಜೂ.18 ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆಗೊಳ್ಳಲಿರುವ ಸುಳ್ಯದ ಇಂಜಿನಿಯರಿಂಗ್ ಉಪವಿಭಾಗದ ನೂತನ ಕಚೇರಿ ಕಟ್ಟಡದ ಪರಿಶೀಲನೆಗೆ ಇಂದು ಹೋದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ತಂಡ, ಕಟ್ಟಡ ಸೋರುತ್ತಿದೆಯೆಂದು ಇಲಾಖಾ ಸಿಬ್ಬಂದಿಗಳನ್ನು ಹಾಗೂ ಗುತ್ತಿಗೆದಾರರನ್ನು ಪ್ರಶ್ನಿಸಿ, ಕೂಡಲೇ ಸರಿಪಡಿಸುವಂತೆ ಸೂಚನೆ ನೀಡಿರುವರೆನ್ನಲಾದ ಘಟನೆ ವರದಿಯಾಗಿದೆ.
ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೊಳ್ಳೂರು ನೇತೃತ್ವದ ತಂಡ ನಿನ್ನೆ, ನಾಳೆ ಉದ್ಘಾಟನೆಗೊಳ್ಳಲಿರುವ ಕಾಮಗಾರಿಗಳ ಪರಿಶೀಲನೆ ನಡೆಸಿತ್ತು. ಇಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ರಾಧಾಕೃಷ್ಣ ಪರಿವಾರಕಾನ, ಶಹೀದ್ ಪಾರೆ ಮೊದಲಾದವರು ಕಾಮಗಾರಿಗಳ ಪರಿಶೀಲನೆಗೆ ಹೋದರು.















ನೂತನ ಜಿ.ಪಂ.ಕಚೇರಿವನ್ನು ಕಾಂಗ್ರೆಸ್ ಮುಖಂಡರು ಹೋದಾಗ ಕಟ್ಟಡ ಸೋರುತ್ತಿರುವುದು ಕಂಡುಬಂತೆನ್ನಲಾಗಿದೆ. ಈ ಬಗ್ಗೆ ಅಲ್ಲಿದ್ದ ಕಚೇರಿ ಸಿಬ್ಬಂದಿಗಳನ್ನು ಪರಿಶ್ನಿಸಿದ ನಾಯಕರು, ಬಳಿಕ ಗುತ್ತಿಗೆದಾರರಿಗೆ ಕರೆ ಮಾಡಿ ಪ್ರಶ್ನಿಸಿದರೆಂದೂ, ಅದನ್ನೂ ಕೂಡಲೇ ಸರಿಪಡಿಸಬೇಕೆಂದು ಸೂಚನೆ ನೀಡಿದರೆಂದೂ ತಿಳಿದುಬಂದಿದೆ.
ಈ ಘಟನೆಯನ್ನು ಸುದ್ದಿಗೆ ತಿಳಿಸಿರುವ ಪಿ.ಎಸ್.ಗಂಗಾಧರ್ ” ಹೊಸ ಕಟ್ಟಡದಲ್ಲಿ ನೀರು ಸೋರುತ್ತಿರುವುದನ್ನು ಕಂಡು ಇಲಾಖೆಯವರಿಗೆ ಮತ್ತು ಕಂಟ್ರಾಕ್ಟರ್ ರಿಗೆ ಫೋನ್ ಮಾಡಿ ಕೇಳಿದ್ದೇವೆ. ಸಮಸ್ಯೆ ಸರಿಪಡಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ” ಎಂದು ಹೇಳಿದರು.
” ಕಟ್ಟಡ ಕಾಮಗಾರಿ ಕಳಪೆಯಾದುದಲ್ಲ. ಶೀಟ್ ಹಾಕಿರುವಲ್ಲಿ ವಾಷರ್ ಇಲ್ಲದೆ ನೀರು ಕೆಳಗಿಳಿಯುತ್ತಿತ್ತು. ಅದನ್ನು ಸರಿಪಡಿಸಲಾಗಿದೆ ” ಎಂದು ಜಿ.ಪಂ.ಇಂಜಿನಿಯರ್ ತಿಳಿಸಿದ್ದಾರೆ.










