ಆರೋಪ ಸಾಬೀತು : ಶಿಕ್ಷೆ ವಿಧಿಸಿದ ನ್ಯಾಯಾಲಯ
2024ರಲ್ಲಿ ಅಜ್ಜಾವರ ಗ್ರಾಮದ ಮಾರ್ಗ ಎಂಬಲ್ಲಿ ಜೀಪು ಮತ್ತು ಮೋಟಾರ್ ಸೈಕಲ್ ಅಪಘಾತದಲ್ಲಿ ಸವಾರ ಮೃತಪಟ್ಟಿದ್ದು ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಜೀಪು ಚಾಲಕನ ಆರೋಪ ಸಾಬೀತಾಗಿ ನ್ಯಾಯಾಲಯ ಶಿಕ್ಷೆ ವಿಧಿಸಿರುವುದಾಗಿ ತಿಳಿದುಬಂದಿದೆ.
ಮಹಮ್ಮದ್ ಆಲಿ ಎಂಬವರು 2024, ಏಪ್ರಿಲ್ 25 ರಂದು ಅಜ್ಜಾವರ ಗ್ರಾಮದ ಮಾರ್ಗ ಎಂಬಲ್ಲಿ ಸುಳ್ಯ ಕಡೆಯಿಂದ ಮಂಡೆಕೋಲು ಕಡೆಗೆ ಜೀಪನ್ನು ತನ್ನ ತೀರ ಬಲಬದಿಗೆ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ವಿನಾಯಕಮೂರ್ತಿ ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿರುವುದಾಗಿದೆ. ಡಿಕ್ಕಿಯ ಪರಿಣಾಮ ವಿನಾಯಕಮೂರ್ತಿ ರವರ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಅವರನ್ನು ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ವಿನಾಯಕಮೂರ್ತಿ ರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅವರ ಸಹಸವಾರೆ ಪತ್ನಿ ಮಂಜುಳರವರಿಗೆ ತಲೆಗೆ, ಬೆನ್ನಿಗೆ ಎಡ ಎದೆಗೆ ರಕ್ತಗಾಯ ಹಾಗೂ ದೇಹದ ಇತರ ಭಾಗಗಳಿಗೆ ಸಾಮಾನ್ಯ ಹಾಗೂ ಗಂಭೀರ ಸ್ವರೂಪದ ಗಾಯಗಳಾಗಿರುತ್ತದೆ. ಸದರಿ ಅಪಘಾತದಲ್ಲಿ ಆರೋಪಿಗೆ ಮತ್ತು ಆತನೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಸಪ್ವಾನ್ ರವರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿರುತ್ತದೆ.
ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ರವರ ಮುಂದೆ ಈ ಪ್ರಕರಣದ ವಿಚಾರಣೆ ನಡೆದು ಆರೋಪಿಯನ್ನು ಜೂನ್ 18, 2025 ರಂದು ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ಕೆಳಕಂಡಂತೆ ಪ್ರಕಟಿಸಿರುತ್ತಾರೆ.















ಕಲಂ 279 ರಡಿಯಲ್ಲಿನ ಅಪರಾಧಕ್ಕಾಗಿ
ಮೂರು ತಿಂಗಳ ಸಾದಾ ಕಾರಾಗೃಹ ವಾಸ ಮತ್ತು ₹1,000/- ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ತಿಂಗಳ ಹೆಚ್ಚುವರಿ ಸಾದಾಕಾರಾಗೃಹ ಶಿಕ್ಷೆ, ಕಲಂ 337 ರಡಿಯಲ್ಲಿನ ಅಪರಾಧಕ್ಕೆ ಮೂರು ತಿಂಗಳ ಸಾದಾ ಕಾರಾಗೃಹ ವಾಸ ಮತ್ತು ₹500 ದಂಡ, ಪಾವತಿಸದಿದ್ದಲ್ಲಿ ಒಂದು ತಿಂಗಳುಗಳ ಕಾಲ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ,ಕಲಂ 338 ರಡಿಯಲ್ಲಿನ ಅಪರಾಧಕ್ಕೆ ಮೂರು ತಿಂಗಳ ಸಾದಾ ಕಾರಾಗೃಹ ವಾಸ ಮತ್ತು ₹500 ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ತಿಂಗಳುಗಳ ಕಾಲ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ, ಕಲಂ 304ಎ ರಡಿಯಲ್ಲಿನ ಅಪರಾಧಕ್ಕಾಗಿ ಆರು ತಿಂಗಳುಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹10,000/- ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಎರಡು ತಿಂಗಳ ಕಾಲ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ.
ಮೇಲಿನ ಅಪರಾಧಗಳಿಗೆ ವಿಧಿಸಲಾದ ಶಿಕ್ಷೆಯನ್ನು ಏಕಕಾಲಕ್ಕೆ ಜಾರಿಗೊಳಿಸತಕ್ಕದ್ದು ಎಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ
ಸರ್ಕಾರದ ಪರವಾಗಿ ಪ್ರಕರಣವನ್ನು ಸಹಾಯಕ ಸರ್ಕಾರಿ ಅಭಿಯೋಜಕರು ನಡೆಸಿ, ವಾದ ಮಂಡಿಸಿರುತ್ತಾರೆ.










