ಕೆ.ಎಫ್.ಡಿ.ಸಿ. ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಅರಣ್ಯ ಸಚಿವರ ಭೇಟಿವೇತನ ಪರಿಶೀಲನೆ, ಆನೆ ಸಹಿತ ಕಾಡು ಪ್ರಾಣಿಗಳಿಂದ ರಕ್ಷಣೆಗೆ ಮನವಿ

0

ವೇತನ ಪರಿಶೀಲನೆ ಸಹಿತ ಕೆ.ಎಫ್.ಡಿ.ಸಿ. ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಕಾರ್ಮಿಕ ಸಂಘಟನೆಯ ಪ್ರಮುಖರು ಜೂ.೨೦ರಂದು ಬೆಂಗಳೂರಿಗೆ ತೆರಳಿ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರಿಗೆ ಮನವಿ ಸಲ್ಲಿಸಿದ್ದು, ಸಚಿವರು ಮನವಿಗೆ ಪೂರಕವಾಗಿ ಸ್ಪಂದಿಸಿರುವುದಾಗಿ ತಿಳಿದು ಬಂದಿದೆ.


ಕರ್ನಾಟಕ ಪ್ಲಾಂಟೇಶನ್ ವರ್ಕರ್‍ಸ್ ಆಂಡ್ ಟ್ರೇಡ್ ಯೂನಿಯನ್ ಅಧ್ಯಕ್ಷ ಶಿವಕುಮಾರ್ ಕಂದಡ್ಕ, ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯುದರ್ಶಿ ಮಂಜುನಾಥ್ ಕಂದಡ್ಕ, ಕಾರ್ಮಿಕರಾದ ಆನಂದ ಕುಮಾರ್ ನಾಗಪಟ್ಟಣ, ರಾಜ್ ಕುಮಾರ್ ವಿ, ರಕ್ಷಿತ್ ಗೂನಡ್ಕರವರು, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಬೆಂಗಳೂರು ಸೆಂಟ್ರಲ್ ನ ಇಂಟೆಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಪಿ.ಮುರುಗನ್ ಅಡ್ಯಡ್ಕರವರ ನೇತೃತ್ವದಲ್ಲಿ ಅರಣ್ಯ ಸಚಿವರನ್ನು ಭೇಟಿ ಮಾಡಿದರು.


ಈ ವೇಳೆ ಸಚಿವರಿಗೆ ಸಮಸ್ಯೆ ವಿವರಿಸಿ ಕಾರ್ಮಿಕ ನಾಯಕರು, “ಕೆ.ಎಫ್.ಡಿ.ಸಿ. ಕಾರ್ಮಿಕರ ವೇತನವನ್ನು ಪ್ರತೀ ಮೂರು ವರ್ಷಕ್ಕೊಮ್ಮೆ ಪರಿಶೀಲನೆ ಮಾಡಿ ಹೆಚ್ಚಳ ಮಾಡಲಾಗುತ್ತಿತ್ತು. ಆದರೆ ಇದೀಗ ೪ ವರ್ಷ ಕಳೆದರೂ ಪರಿಶೀಲನೆ ಆಗಿಲ್ಲ. ಮಳೆ ಸಂದರ್ಭ ರೆಡ್ ಅಲರ್ಟ್ ಇದ್ದ ಸಂದರ್ಭ ಕೆಲಸ ಮಾಡಲಾಗದ ದಿನದ ವೇತನ ನೀಡುವುದಾಗಿ ಅಧಿಕಾರಿಗಳು ಹೇಳಿದ್ದರೂ ಇನ್ನೂ ನೀಡಿಲ್ಲ. ಅದನ್ನು ತಡೆ ಹಿಡಿದಿದ್ದಾರೆ. ಆನೆ ಹಾವಳಿ ಹೆಚ್ಚಾಗಿದ್ದು ಬೆಳಗ್ಗಿನ ವೇಳೆ ಟ್ಯಾಪಿಂಗ್ ಹೋಗಲು ಭಯದ ವಾತಾವಣ ಸೃಷ್ಠಿಯಾಗಿದೆ. ಅಲ್ಲದೆ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಿದೆ. ಇದರಿಂದ ಕಾರ್ಮಿಕರಿಗೆ ರಕ್ಷಣೆ ನೀಡಬೇಕು. ಪ್ಲಾಂಟೇಶನ್‌ಗೆ ಗೊಬ್ಬರ ಹಾಕದೇ ಇಳುವರಿ ಕಡಿಮೆಯಾಗಿದೆ. ಆದ್ದರಿಂದ ಗೊಬ್ಬರ ಹಾಕುವಂತೆ ತಾವು ಅಧಿಕಾರಿಗಳಿಗೆ ಸೂಚಿಸಬೇಕು. ಮತ್ತು ಪ್ಲಾಂಟೇಶನ್ ನ ಕಾಡು ಸರಿಯಾಗಿ ಕಡಿಯುತ್ತಿಲ್ಲ, ವಸತಿ ಗೃಹಗಳು ದುರಸ್ತಿಯಾಗುತ್ತಿಲ್ಲ, ಕೆಲವು ಬೀಳುವ ಹಂತಕ್ಕೆ ಬಂದಿದೆ ಇತ್ಯಾದಿ ಬೇಡಿಕೆಯನ್ನು ಸಚಿವರ ಮುಂದಿಟ್ಟರು.


ಸಮಸ್ಯೆ ಆಲಿಸಿದ ಸಚಿವರು, ಈ ಕುರಿತು ಅಧಿಕಾರಿಗಳ ಜತೆಯಲ್ಲಿ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳೋಣ ಎಂದು ಭರವಸೆ ನೀಡಿದರೆಂದು ತಿಳಿದು ಬಂದಿದೆ.