














ಬಾಳಿಲ ಗ್ರಾಮದ ಬೊಮ್ಮನಮಜಲು ಸೇತುವೆಯ ಬಳಿ ಹಳೆಯ ಕಿರುಸೇತುವೆಯಲ್ಲಿ ಭಾರೀ ಗಾತ್ರದ ಕಸದ ರಾಶಿ ಶೇಖರಣೆಗೊಂಡಿದ್ದು, ಇದರಿಂದ ನೀರಿನ ಹರಿವಿಗೆ ಅಡಚಣೆಯುಂಟಾಗಿ ತಡೆಗೋಡೆಗೆ ಹಾನಿಯುಂಟಾಗುವ ಸಂಭವ ಎದುರಾಗಿದೆ.
ಸುಮಾರು ಒಂದು ತಿಂಗಳ ಹಿಂದೆ ಸುರಿದ ರಣಭೀಕರ ಮಳೆಗೆ ಹೊಳೆಯಲ್ಲಿ ಕಸ ಕಡ್ಡಿ, ಮರದ ಗೆಲ್ಲುಗಳು ತೇಲಿಕೊಂಡು ಬಂದು ಹಳೆಯ ಕಿರು ಸೇತುವೆ ಕಂಬದಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ನೀರು ಸರಾಗವಾಗಿ ಹರಿಯದೆ ಹೊಳೆಯ ತಟದಲ್ಲಿ ನಿರ್ಮಿಸಿರುವ ತಡೆಗೋಡೆಗಳಲ್ಲಿ ಸವೆತ ಉಂಟಾಗಿ ತಡೆಗೋಡೆ ಕುಸಿಯುವ ಭೀತಿ ಇರುವುದಲ್ಲದೆ, ಸಾಧಾರಣ ಮಳೆ ಬಂದರೂ ನೀರು ಸ್ಥಳೀಯ ಕೃಷಿ ಭೂಮಿಗೆ ನುಗ್ಗಿ ಕೃಷಿಗೆ ತೊಂದರೆಯಾಗುತ್ತಿರುವುದಾಗಿ ಸ್ಥಳೀಯರೊಬ್ಬರು ಗ್ರಾ.ಪಂ. ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ. ಆದರೆ ಈ ವರೆಗೆ ಸಂಬಂಧಿಸಿದ ಇಲಾಖೆಯಾಗಲೀ, ಜನಪ್ರತಿನಿಧಿಯಾಗಲೀ ಈ ಕಡೆ ಗಮನ ಹರಿಸಿಲ್ಲ ಎಂದು ಸುದ್ದಿಗೆ ತಿಳಿಸಿದ್ದಾರೆ.










