ನೀನಾಸಂ ರಂಗ ಶಿಕ್ಷಣಕ್ಕೆ ಹಾರಂಬಿ ಯತಿನ್ ಆಯ್ಕೆ

0

ನೀನಾಸಂ ರಂಗ ಶಿಕ್ಷಣ ಕೇಂದ್ರ ಹೆಗ್ಗೋಡು ಇಲ್ಲಿನ ರಂಗ ಪದವಿ ಪಡೆಯಲು ಕೊಡಗು ಜಿಲ್ಲೆಯ ಚೆಂಬು ಗ್ರಾಮದ ಹಾರಂಬಿ ಯತಿನ್ ವೆಂಕಪ್ಪ ಆಯ್ಕೆಯಾಗಿದ್ದಾರೆ.

ಸುಳ್ಯದ ರಂಗಮನೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ನಡೆಸಿದ ಅರೆಭಾಷೆ ರಂಗ ಶಿಬಿರದಲ್ಲಿ ಭಾಗವಹಿಸಿದ ಯತಿನ್ ರಂಗ ಮಾಂತ್ರಿಕ ಡಾ| ಜೀವನ್ ರಾಂ ಸುಳ್ಯರ ಗರಡಿಯಲ್ಲಿ ಪಳಗಿದವರು. ಪ್ರಪ್ರಥಮವಾಗಿ ಸಾಹೇಬ್ರು ಬಂದವೇ ಅರೆಭಾಷೆ ನಾಟಕದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದವರು.ತನ್ನ ಮೊದಲ ನಾಟಕದಲ್ಲೇ ರಾಜ್ಯದ ರಂಗಾಸಕ್ತರ ಪ್ರಶಂಸೆಗೆ ಪಾತ್ರವಾದ ಯತಿನ್ ನಂತರದಲ್ಲಿ ಆಳ್ವಾಸ್ ರಂಗ ತಂಡದ ದೂತವಾಕ್ಯ ನಾಟಕದ ದುರ್ಯೋಧನನಾಗಿ, ಕಾರ್ಕಳ ಯಕ್ಷ ರಂಗಾಯಣದ ಪರುಶುರಾಮ ನಾಟಕದ ಪರಶುರಾಮನಾಗಿ ಮತ್ತು ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟದ ಕಲ್ಯಾಣಸ್ವಾಮಿಯಾಗಿ, ಆಳ್ವಾಸ್ ನ ನಾಯಿಮರಿ ನಾಟಕದ ಅಜ್ಜನಾಗಿ, ನೀನಾಸಂ ರಂಗ ಶಿಬಿರದಲ್ಲಿ ಸಿದ್ಧವಾದ ಆಷಾಡದ ಒಂದು ದಿನ ನಾಟಕದ ಕಾಳಿದಾಸನಾಗಿ ಮಿಂಚಿದವರು.

ಒಂದಷ್ಟು ಕಿರುಚಿತ್ರಗಳಲ್ಲೂ ಅಭಿನಯಿಸಿದ ಯತಿನ್ ಭರತನಾಟ್ಯವನ್ನೂ ಅಭ್ಯಸಿಸಿದ್ದಾರೆ. ರಂಗಮನೆ ಮತ್ತು ಆಳ್ವಾಸ್ ನ ಅಭಿನಯ ಪ್ರಧಾನ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ, ಕುದ್ರೋಳಿ ಗಣೇಶ್ ರ ವಿಸ್ಮಯ ಜಾದೂ ತಂಡದಲ್ಲೂ ಕಲಾವಿದರಾಗಿ ಭಾಗವಹಿಸಿದ್ದಾರೆ. ಕಾನೂನು ಪದವೀಧರನಾಗಿರುವ ಯತಿನ್ ಕೃಷಿಕರಾದ ಹಾರಂಬಿ ಅರುಣೋದಯಕುಮಾರ್ ಹಾಗೂ ರೇಖಾ ಹಾರಂಬಿ ಇವರ ಪುತ್ರರಾಗಿದ್ದಾರೆ.

ಅರೆಭಾಷೆ ಶಿಬಿರದ ಮೂವರಿಗೆ ನೀನಾಸಂ ರಂಗ ಶಿಕ್ಷಣ

ನೀನಾಸಂ ಸಂದರ್ಶನದಲ್ಲಿ ಆಯ್ಕೆ ಆಗುವುದು ಅಷ್ಟು ಸುಲಭವಲ್ಲ. ನೂರಕ್ಕಿಂತ ಹೆಚ್ಚು ಜನ ಆಕಾಂಕ್ಷಿಗಳು ಸಂದರ್ಶನದಲ್ಲಿ ಭಾಗವಹಿಸ್ತಾರೆ. ಆಯ್ಕೆ ಪ್ರಕ್ರಿಯೆ ತುಂಬ ಪಾರದರ್ಶಕವಾಗಿರುತ್ತದೆ. ಕೇವಲ ಹದಿನಾರು ಜನರನ್ನು ಆಯ್ಕೆ ಮಾಡಲಾಗುವುದು. ಲಕ್ಷ್ಮೀನಾರಾಯಣ ಕಜೆಗದ್ದೆಯವರು ಕರ್ನಾಟಕ ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ರಂಗಮನೆಯಲ್ಲಿ ಹಮ್ಮಿಕೊಂಡ ಅರೆಭಾಷೆ ರಂಗ ಶಿಬಿರದಲ್ಲಿ ಭಾಗವಹಿಸಿದ ಮಮತಾ ಕಲ್ಮಕಾರು ಹಾಗೂ ಸುಶ್ಮಿತಾ ಮೋಹನ್ ಇಬ್ಬರೂ ಈಗಾಗಲೇ ನೀನಾಸಂ ರಂಗ ಪದವಿಯನ್ನು ಪಡೆದಿದ್ದಾರೆ. ಈ ವರ್ಷ ಪ್ರತಿಭಾವಂತ ಕಲಾವಿದ ಯತಿನ್ ಆಯ್ಕೆ ಆಗಿದ್ದಾರೆ. ಅರೆಭಾಷೆ ಶಿಬಿರದ ಒಟ್ಟು ಮೂರು ಜನರು ಪಡೆದಿದ್ದಾರೆ ರಂಗ ಶಿಕ್ಷಣವನ್ನು ಪಡೆದಂತಾಗುತ್ತದೆ. ಮೂವರೂ ನನ್ನ ಅಚ್ಚುಮೆಚ್ಚಿನ ಶಿಷ್ಯರು ಅನ್ನಲು ತುಂಬಾ ಸಂತೋಷವಾಗಿದೆ.

——ಡಾ| ಜೀವನ್ ರಾಂ ಸುಳ್ಯ