ನಾಳೆ (ಜೂ. 30) : ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಸೇವಾ ನಿವೃತ್ತಿ

0

ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ವಿಶ್ವನಾಥ ಬದಿಕಾನರು ಜೂನ್ 30 ರಂದು ಸೇವಾ ನಿವೃತ್ತಿಯಾಗಲಿದ್ದಾರೆ.

ನೆಹರು ಮೆಮೋರಿಯಲ್ ಕಾಲೇಜಿನಲ್ಲಿ 1991 ಅಧ್ಯಾಪನ ವೃತ್ತಿ ಆರಂಭಿಸಿದ ಇವರು ಅಲ್ಲಿ ಒಂದು ವರ್ಷಗಳ ಕಾಲ ಉಪನ್ಯಾಸಕರಾಗಿದ್ದರು. ಸುಧೀರ್ಘ 29 ವರ್ಷಗಳ ಅಧ್ಯಾಪನ ವೃತ್ತಿಯ ಅನುಭವ ಇರುವ ಇವರು, ಗೌಡ ಕನ್ನಡದ ಜನಪದ ಕತೆಗಳು ವರ್ಗ ಮತ್ತು ಆಶಯ ಸೂಚಿ, ಗಾದೆಗಳು, ಏ.ಕೆ.ರಾಮಾನುಜನ್ ಜೀವನ ಪರಿಚಯ, ತುಳುತ ಕತಾ ಸಂಸ್ಕೃತಿ, ಅರೆಬಾಸೆನ ಅಜ್ಜಿ ಕತೆಗ, ಕನ್ನಡ ಜಾನಪದ ಅಧ್ಯಯನದ ಮೊದಲ ಘಟ್ಟ ಎಂಬ ಆರು ಪುಸ್ತಕಗಳನ್ನು ಬರೆದಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಅರೆಭಾಷೆ ಪದಕೋಶದ ಪ್ರಧಾನ ಸಂಪಾದಕರಾಗಿದ್ದರು.
ಅಲ್ಲದೆ ಅರೆಭಾಷೆ ಪಾರಂಪರಿಕ ವಸ್ತುಕೋಶ, ಅರೆಭಾಷೆ ವಿಶ್ವಕೋಶ, ಅರೆಭಾಷೆ ಕೈಪಿಡಿ, ಕೆದಂಬಾಡಿ ರಾಮಯ್ಯ ಗೌಡ, ಗುಡ್ಡೆಮನೆ ಅಪ್ಪಯ್ಯ ಗೌಡ, ಕುರುಂಜಿ ವೆಂಕಟ್ರಮಣ ಗೌಡ, ಕಾವೇರಿಮನೆ ಬೋಜಪ್ಪ ಗೌಡ, ಕೊಳಂವೆ ಪುಟ್ಟಣ್ಣ ಗೌಡ, ಪುರುಷೋತ್ತಮ ಬಿಳಿಮಲೆ ಇತ್ಯಾದಿ ಕೃತಿಗಳ ಸಂಪಾದಕರಾಗಿ ಕೆಲಸ ಮಾಡಿದ್ದರು.

2014 ರಿಂದ ಈವರೆಗೆ ಕನ್ನಡ ಮತ್ತು ತುಳು ವಿಕಿಪೀಡಿಯದಲ್ಲಿ ಭಾಷೆ, ಸಂಸ್ಕೃತಿ, ಜಾನಪದ, ವಿಜ್ಞಾನ, ಇತಿಹಾಸ, ವ್ಯಕ್ತಿ ಪರಿಚಯ ಹೀಗೆ ಸಾವಿರಕ್ಕೂ ಹೆಚ್ಚು ಲೇಖನಗಳ ಸಂಪಾದಕರಾಗಿದ್ದು, 2016ರಲ್ಲಿ ತುಳುವಿಕಿಪೀಡಿಯ ಲೈವ್ ಮತ್ತು 2024ರಲ್ಲಿ ತುಳು ವಿಕ್ಷನರಿ ಲೈವ್ ಆಗುವುದಕ್ಕೆ ಪ್ರಮುಖ ಕಾರಣಕರ್ತರಾಗಿದ್ದಾರೆ. ಈ ನೆಲೆಯಲ್ಲಿ ವಿಕಿಪೀಡಿಯ ಸಂಪಾದನೆಗಾಗಿ ಮಂಗಳೂರಿನಲ್ಲಿ 2017ರಿಂದ ಕರಾವಳಿ ವಿಕಿಮೀಡಿಯನ್ ಯೂಸರ್ ಗ್ರೂಪ್ ಎಂಬ ವಿಕಿಪೀಡಿಯ ಸಂಪಾದಕರ ಜಾಗತಿಕ ಮಟ್ಟದ ಸಂಘಟನೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಕಿಮೀಡಿಯ ಫೌಂಡೇಶನ್ ಯೋಜನೆಗೆ ಪುರ್ಸೆರೆ ಕಟ್ಟುನ ಮತ್ತು ತುಳುವೆರೆ ಆಟಿ ಎಂಬ ಎರಡು ಜಾಗತಿಕ ಮಟ್ಟದ ಸಾಕ್ಷ್ಯಚಿತ್ರ ಮತ್ತು ದಾಖಲಾತಿಯನ್ನು ಸಂಘಟಿಸಿ, ವಿಕಿಪೀಡಿಯ ವೇದಿಕೆಯಲ್ಲಿ ದೇಶದ ಹಲವಾರು ನಗರಗಳಲ್ಲಿ ನಡೆದ ಜಾಗತಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.
ಸಂತ ಅಲೋಶಿಯಸ್ ಕಾಲೇಜಿನಲ್ಲಿ ತುಳುಕೂಟ ರಚಿಸಿ 20 ವರ್ಷಗಳ ಕಾಲ ತುಳು ಭಾಷೆ, ಸಂಸ್ಕೃತಿ ಮತ್ತು ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಾಗಾರಗಳನ್ನು ಕಾಲೇಜಿನಲ್ಲಿ ಏರ್ಪಡಿಸಿದ್ದಾರೆ. ಕಾಲೇಜು ಅಭ್ಯಾಸದ ಸಂದರ್ಭದಲ್ಲಿ ಎನ್.ಎಸ್.ಎಸ್. ಘಟಕದ ನಾಯಕನಾಗಿ ಮುಂದೆ ಸಂತ ಅಲೋಶಿಯಸ್ ಕಾಲೇಜಿನ ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿಯಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಘಟಕದ ನೋಡಲ್ ಅಧಿಕಾರಿಯಾಗಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ 20 ಕ್ಕೂ ಹೆಚ್ಚು ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ.50 ಕ್ಕಿಂತ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಾಜ್ಯ ರಾಷ್ಟ್ರ ಮಟ್ಟದ ವಿವಿಧ ವೇದಿಕೆಗಳಲ್ಲಿ ಮಂಡಿಸಿದ್ದಾರೆ. ಅಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದ ತುಳು ಅಧ್ಯಯನ ವಿಭಾಗ, ಮತ್ತು ಹಲವು ಸ್ವಾಯತ್ತ ಕಾಲೇಜುಗಳ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿಯ ಸದಸ್ಯರಾಗಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 2023 ರಿಂದ ಆರಂಭಗೊಂಡ ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಹಾಗೂ ಸಂಶೋಧನೆಗೆ ಸಂಬಂಧಿಸಿದ ಕೇಂದ್ರದ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
2 ವರ್ಷಗಳ ಅರೆಭಾಷೆ ಜನಪದ ಕತೆಗಳ ಸಂಶೋಧನೆಗೆ ಮಂಗಳೂರು ವಿವಿಯಿಂದ ಎಂ.ಫಿಲ್ ಪದವಿ, ಕನ್ನಡ ಜಾನಪದ ಸಂಶೋಧನೆಗೆ ಹಂಪಿ ಕನ್ನಡ ವಿವಿಯಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.

ಸುಳ್ಯದ ನೆಹರು ಸ್ಮಾರಕ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಇವರು ಮಂಡೆಕೋಲು ಗ್ರಾಮದ ಬದಿಕಾನ ದಿ. ಹೂವಪ್ಪ ಗೌಡ – ದಿ. ಲಿಂಗಮ್ಮ ದಂಪತಿಗಳ ಪುತ್ರ. ಡಾ. ವಿಶ್ವನಾಥ್ ರವರ ಪತ್ನಿ ಶ್ರೀಮತಿ ಸರೋಜಾರವರು ಗೃಹಿಣಿಯಾಗಿದ್ದು, ಹಿರಿಯ ಪುತ್ರ ಆಶಯ್ ಬದಿಕಾನ ತನ್ನದೇ ಸ್ವಂತ ಪಲ್ಸ್ ಕೋಡ್ ಎಂಬ ಸಂಸ್ಥೆ ನಡೆಸುತ್ತಿದ್ದಾರೆ. ಇನ್ನೊರ್ವ ಪುತ್ರ ಅನ್ವಿತ್ ಬದಿಕಾನರವರು ಬೆಂಗಳೂರಿನಲ್ಲಿ ಇಂಟರಿಯರ್ ಡಿಸೈನ್ ರಾಗಿದ್ದಾರೆ.