ಜಾಲ್ಸೂರಿನಲ್ಲಿ ಎರಡು ವರ್ಷದ ಹಿಂದೆ ನಡೆದ ಅಪಘಾತ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು ವಾಹನ ಚಾಲಕನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿರುವುದಾಗಿ ತಿಳಿದುಬಂದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಆರೋಪಿತನಾದ ಕೆ.ಜೆ. ಶಂಕರಮೂರ್ತಿ ದಿನಾಂಕ 31.08.2023 ರಂದು ತನ್ನ ಕಾರು ನಂಬ್ರ ಕೆ.ಎ.16 ಎಂ 6152 ರಲ್ಲಿ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕಾರ್ ಎಂಬಲ್ಲಿ ಬೆಳಿಗ್ಗೆ 6:45 ಗಂಟೆಗೆ ತಲುಪಿದಾಗ ತನ್ನ ತೀರಾ ಬಲಬದಿಗೆ ದುಡುಕುತನ ಮತ್ತು ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ಹೋಗಿ ರಸ್ತೆಯಲ್ಲಿ ನಿಂತಿದ್ದ ನಾಲ್ವರು ಕೂಲಿ ಕಾರ್ಮಿಕರಿಗೆ ಡಿಕ್ಕಿ ಪಡಿಸಿರುತ್ತಾರೆ. ಡಿಕ್ಕಿಯ ಕಾರಣದಿಂದ ಮೂರು ಜನರು ಮೃತ ಪಟ್ಟಿದ್ದು ಇನ್ನೊಬ್ಬರು ಗಂಭೀರ ಸ್ವರೂಪದ ಗಾಯಗೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಿದ ಪ್ರಕರಣವಾಗಿದೆ.
ಈ ಪ್ರಕರಣದ ವಿಚಾರಣೆಯು ಸುಳ್ಯ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ರವರು ನಡೆಸಿ ಆರೋಪಿಯನ್ನು 28.06.2025 ರಂದು ದೋಷಿ ಎಂದು ತೀರ್ಪು ನೀಡಿ ಈ ಕೆಳಕಂಡಂತೆ ಶಿಕ್ಷೆ ಪ್ರಕಟಿಸಿರುತ್ತಾರೆ.















ಆರೋಪಿತನಿಗೆ ಕಲಂ 279 ರಡಿಯಲ್ಲಿ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು ₹1000/- ದಂಡ, ಕಲಂ 338 ರಡಿಯಲ್ಲಿ 1 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹1000/- ದಂಡ, ಕಲಂ 304 ಎ ರಡಿಯಲ್ಲಿ 2 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹10,000/- ದಂಡ,
ಮೇಲೆ ವಿಧಿಸಲಾದ ಶಿಕ್ಷೆಯನ್ನು ಏಕಕಾಲಕ್ಕೆ ಜಾರಿಗೊಳಿಸತಕ್ಕದ್ದು ಎಂದು ನ್ಯಾಯಾಧೀಶರು ಆದೇಶ ನೀಡಿರುತ್ತಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ಪ್ರಕರಣ ನಡೆಸಿ, ವಾದ ಮಂಡಿಸಿರುತ್ತಾರೆ.










