ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಶಂಕೆ ದೂರ
ವೈದ್ಯರ ಮೇಲೆ ಹೆತ್ತವರ ದೂರು – ತನಿಖೆ ಆರಂಭ
ತೀವ್ರ ಜ್ವರ ಮತ್ತು ವಾಂತಿ ಎಂದು ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಶಾಲಾ ಬಾಲಕಿಯನ್ನು ಆಸ್ಪತ್ರೆಯಲ್ಲಿದ್ದ ಕಿಟ್ ನಿಂದ ಪರೀಕ್ಷಿಸಿದಾಗ ಗರ್ಭಿಣಿ ಎಂದು ಪಾಸಿಟಿವ್ ವರದಿ ಬಂದ ಹಾಗೂ ಬಾಲಕಿಯನ್ನು ತಾಲೂಕು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದಾಗ ಗರ್ಭಿಣಿ ಅಲ್ಲ ಎಂದು ದೃಢಪಟ್ಟ ಘಟನೆ ವರದಿಯಾಗಿದ್ದು, ಆರಂಭದಲ್ಲಿ ಪರೀಕ್ಷೆ ನಡೆಸಿ ಪಾಸಿಟಿವ್ ಬಂದ ಕಾರಣಕ್ಕಾಗಿ ಗರ್ಭಿಣಿಯಾಗಿರಬಹುದು ಎಂದು ಅನುಮಾನಪಟ್ಟ ವೈದ್ಯರು ಎಡವಟ್ಟು ನಡೆಸಿದ್ದಾರೆಂದು ಅವರ ಮೇಲೆ ಪೋಷಕರು ದೂರು ನೀಡಿರುವ ಹಿನ್ನೆಲೆಯಲ್ಲಿ ತನಿಖೆ ಆರಂಭಗೊಂಡಿರುವ ಘಟನೆ ಪಂಜದಿಂದ ವರದಿಯಾಗಿದೆ.
ಘಟನೆಯ ಹಿನ್ನೆಲೆ















ಕಡಬ ತಾಲೂಕಿಗೆ ಒಳಪಟ್ಟ ಪಂಜ ಸಮೀಪದ ಗ್ರಾಮವೊಂದರ 13 ವರ್ಷದ ಬಾಲಕಿಯನ್ನು ಜ್ವರದ ಹಿನ್ನೆಲೆ ಆಕೆಯ ಹೆತ್ತವರು ಚಿಕಿತ್ಸೆಗಾಗಿ ಜುಲೈ 1 ರಂದು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿನ ಕರ್ತವ್ಯನಿರತ ವೈದ್ಯಾಧಿಕಾರಿ ಡಾ. ಮಂಜುನಾಥ್ ಅವರು ಬಾಲಕಿಯನ್ನು ತಪಾಸಣೆ ಮಾಡಿ ಮೂತ್ರ ಮತ್ತು ರಕ್ತ ಪರೀಕ್ಷೆಗೆ ಲ್ಯಾಬ್ ಸ್ಲಿಪ್ ನೀಡಿದ್ದರು. ಸರಕಾರಿ ಆಸ್ಪತ್ರೆಯಲ್ಲಿರುವ ಪರೀಕ್ಷಾ ಕಿಟ್ ಮೂಲಕ ಪರೀಕ್ಷೆ ನಡೆಸಿದಾಗ UPT positive ಎಂದು ವರದಿ ಬಂದಿತ್ತು. ಎರಡು ಬಾರಿ ಪರೀಕ್ಷೆ ನಡೆಸಿದಾಗಲೂ ಪಾಸಿಟಿವ್ ಬಂದುದರಿಂದ ಹೊರ ರೋಗಿಗಳ ದಾಖಲಾತಿಯಲ್ಲಿ UPT Positive (ಗರ್ಭಿಣಿ) ಎಂದು ಬರೆದು ಇನ್ನಷ್ಟು ತಪಾಸಣೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ರೆಫರ್ ಮಾಡಿದ್ದರು .
ಮಗಳು ಗರ್ಭಿಣಿ ಎಂದು ವರದಿ ಬಂದಿರುವ ಬಗ್ಗೆ ವೈದ್ಯರು ತಿಳಿಸಿದಾಗ ಹೆತ್ತವರು ಗಾಬರಿಯಾದರು. ವೈದ್ಯರ ರೆಫರೆನ್ಸ್ ಲೆಟರ್ ತೆಗೆದುಕೊಂಡು ಸುಳ್ಯಕ್ಕೆ ಬಂದ ಅವರು ಮೊದಲು ಖಾಸಗಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡರು. ಆಗ ಬಾಲಕಿ ಗರ್ಭಿಣಿ ಅಲ್ಲ ಎಂಬ ವರದಿ ಬಂದಿತು. ಬಳಿಕ ಅವರು ಸುಳ್ಯದ ತಾಲೂಕು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡರು. ಅಲ್ಲಿ ಕೂಡ ನೆಗೆಟಿವ್ ( ಗರ್ಭಿಣಿ ಅಲ್ಲ ) ವರದಿ ಬಂದಿತು. ಅಲ್ಲಿಗೆ ಬಾಲಕಿಯ ಮೇಲೆ ಮೂಡಿದ್ದ ಶಂಕೆ ನಿವಾರಣೆಯಾಯಿತು.
ಆದರೆ ಪಂಜದ ವೈದ್ಯರು ತಮ್ಮಲ್ಲಿ ಬಂದಿದ್ದ ಪಾಸಿಟಿವ್ ವರದಿಯ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಹಾಗೂ ಮಹಿಳಾ ಕಲ್ಯಾಣ ಇಲಾಖೆಯವರಿಗೆ ತಿಳಿಸಿದ್ದುದರಿಂದ ಅವರು ಈ ಬಗ್ಗೆ ಬಾಲಕಿಯ ಮನೆಗೆ ಹೋಗಿ ಆರೋಗ್ಯ ವಿಚಾರಿಸಿದರೆನ್ನಲಾಗಿದೆ. ಇದರಿಂದಾಗಿ ನೆರೆಕರೆಯಲ್ಲಿ ಅಪಪ್ರಚಾರಕ್ಕೆ ಎಡೆಯಾಯಿತೆಂದು ಮನೆಯವರು ನೊಂದುಕೊಂಡರು.
ಅವರು ಕಡಬದ ಭೀಮ್ ಆರ್ಮಿಯವರಿಗೆ ವಿಷಯ ತಿಳಿಸಿದರು. ಭೀಮ್ ಆರ್ಮಿಯವರ ಮಾರ್ಗದರ್ಶನದ ಮೇರೆಗೆ ಬಾಲಕಿಯ ಮನೆಯವರು ಪಂಜ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಮಂಜುನಾಥರ ಮೇಲೆ ಡಿ.ಎಚ್.ಒ.ಗೆ ದೂರು ನೀಡಿದರು.
” ವೈದ್ಯಾಧಿಕಾರಿಯವರು ಈ ವಿಚಾರವನ್ನು ಆಶಾ ಕಾರ್ಯಕರ್ತೆಯರಿಗೆ ಆಸ್ಪತ್ರೆಯ ಸಿಬ್ಬಂದಿ ಮತ್ತಿತರರಿಗೆ ತಿಳಿಸಿದ್ದರಿಂದ ಸುಳ್ಳು ಮಾಹಿತಿ ಸಾರ್ವಜನಿಕವಾಗಿ ಹರಡಲು ಕಾರಣವಾಗಿದ್ದು, ಇದರಿಂದಾಗಿ ನಮ್ಮ ಕುಟುಂಬಕ್ಕೆ ಭಾರೀ ಮಾನಸಿಕವಾಗಿ ನೋವಾಗಿದೆ. ಅಪಪ್ರಚಾರದ ಪರಿಣಾಮವಾಗಿ ಈಗ ನನ್ನ ಮಗಳು ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾಳೆ. ಶಾಲೆಯ ಸಹಪಾಠಿಗಳು, ಶಿಕ್ಷಕರು ಮತ್ತು ಸ್ಥಳೀಯರು ಸಮುದಾಯದವರು ಮಾತುಮಾತಿನಲ್ಲಿ ಬಾಲಕಿಯನ್ನು ಮಾನಹಾನಿ ಮಾಡುತ್ತಿದ್ದಾರೆ. ಅಪ್ರಾಪ್ತ ವಯಸ್ಸಿನ ಮಗಳಿಗೆ ತಪ್ಪು ವೈದ್ಯಕೀಯ ಮಾಹಿತಿ ನೀಡಿವುದು ಹಾಗೂ ಅವಳ ಖಾಸಗಿ ಮಾಹಿತಿಯನ್ನು ಅನಧಿಕೃತವಾಗಿ ಬಹಿರಂಗಪಡಿಸುವುದು ಪೋಸ್ಕೋ ಕಾಯಿದೆ ಪ್ರಕಾರ ಗಂಭೀರ ಅಪರಾಧವಾಗಿರುತ್ತದೆ. ಆದ್ದರಿಂದ ಈ ವೈದ್ಯಾಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ತಮ ಕೈಗೊಳ್ಳಬೇಕು ಎಂದು ಬಾಲಕಿಯ ಹೆತ್ತವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪರಿಶೀಲನೆಗೆ ಬಂದ ಅಧಿಕಾರಿಗಳ ತಂಡ
ಈ ದೂರಿನ ಗಂಭೀರತೆ ಅರಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್.ಆರ್.ತಿಮ್ಮಯ್ಯ ಅವರು ತನಿಖೆಗಾಗಿ ತಂಡವನ್ನು ರಚಿಸಿ ಪಂಜಕ್ಕೆ ಕಳುಹಿಸಿದ್ದು , ಅವರು ಪಂಜಕ್ಕೆ ಬಂದು ಜುಲೈ10 ರಂದು ಮಾಹಿತಿ ಸಂಗ್ರಹಿಸಿದ್ದಾರೆ. ಆರ್.ಸಿ.ಹೆಚ್. ( ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ) ಡಾ.ರಾಜೇಶ್, ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿ ಡಾ. ದಿಲ್ಷಾದ್ , ಜಿಲ್ಲಾ ಶುಶ್ರೂಷಣಾಧಿಕಾರಿ ಜೆಸ್ಸಿ ಕೆ.ವಿ. , ತಾಲೂಕು ಆರೋಗ್ಯಾಧಿಕಾರಿ ಡಾ.ತ್ರಿಮೂರ್ತಿ ಪರಿಶೀಲನೆಗೆ ಬಂದ ತಂಡದಲ್ಲಿದ್ದರು.
ಪೊಲೀಸರಿಗೂ ದೂರು
ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ದಲಿತ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಕೇಸು ದಾಖಲಿಸಬೇಕೆಂದು ಪೋಲೀಸರಿಗೂ ಅವರು ದೂರು ನೀಡಿದ್ದಾರೆ.
ಕೂಲಿ ಕಾರ್ಮಿಕನಾಗಿರುವ ಬಾಲಕಿಯ ತಂದೆ ವೈದ್ಯಾಧಿಕಾರಿಯ ವರದಿಯಿಂದ ತಬ್ಬಿಬ್ಬುಗೊಂಡು ಸಹಾಯಕ್ಕಾಗಿ ಕಡಬದ ಭೀಮ್ ಆರ್ಮಿ ಸಂಘಟನೆಯನ್ನು ಸಂಪರ್ಕಿಸಿದ್ದರು. ಅವರಿಗೆ ಸೂಕ್ತ ಮಾಹಿತಿ ನೀಡಿ ದೂರು ನೀಡುವ ಬಗ್ಗೆ ತಿಳಿಸಿದ್ದೇವೆ. ಅದರಂತೆ ದೂರು ನೀಡಲಾಗಿದೆ. ಸಂಘಟನೆಯ ಪ್ರಮುಖರೂ ಬಾಲಕಿ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದೇವೆ. ಸುಳ್ಳು ವರದಿ ನೀಡಿ ಬಾಲಕಿಯ ಮಾನಹಾನಿಗೆ ಕಾರಣವಾದ ವೈದ್ಯಾಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು. ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟನೆ ಹೊರಾಟದ ಹಾದಿ ಹಿಡಿಯಲಿದೆ.
– ರಾಘವ ಕಳಾರ,
ಜಿಲ್ಲಾ ಉಪಾಧ್ಯಕ್ಷರು,
ಭೀಮ್ ಆರ್ಮಿ ಕಡಬ









