ಇನ್ನು ಮುಂದೆ ದ್ವೇಷ ಭಾಷಣ ಮಾಡುವಂತಿಲ್ಲ. ಈಗಾಗಲೇ ದಾಖಲಾಗಿರುವ ಸೆಕ್ಷನ್ ಗಳ ಅಪರಾಧವನ್ನು ಪುನರಾವರ್ತಿಸುವಂತಿಲ್ಲ ಎಂದು ಹೈಕೋರ್ಟ್ ಬೆಳ್ತಂಗಡಿಯ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಶೆಟ್ಟಿಯವರಿಗೆ ಆದೇಶ ನೀಡಿದ್ದು ಈ ಪ್ರಕರಣದಲ್ಲಿ ಸುಳ್ಯ ಮೂಲದ ನ್ಯಾಯವಾದಿ ವಹೀದಾ ಆರಿಸ್ ತೆಕ್ಕಿಲ್ ಸರಕಾರದ ಪರವಾಗಿ ವಾದಿಸಿದ್ದರು.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಶೆಟ್ಟಿಯವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡ ಬೇಕೆಂದು ಭಾರತಿಯವರ ಪರವಾಗಿ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಅರುಣ್ ಶ್ಯಾಮ್ ರವರ ಜೂನಿಯರ್ ಸುಯೋಗ್ ಹೇರ್ಲೆ ಯವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.















ಗುರುವಾಯನಕೆರೆಯಲ್ಲಿ ನಡೆದ ಸುಹಾಸ್ ಶೆಟ್ಟಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಮಾತನಾಡಿದ್ದ ಬಗ್ಗೆ ಹರಿಪ್ರಸಾದ್ ಇರ್ವತ್ತಾಯ ಎಂಬವರು ನೀಡಿದ ದೂರಿನ ಮೇರೆಗೆ ಕೇಸು ದಾಖಲಾಗಿತ್ತು.
ಈ ಬಗ್ಗೆ ಜು.18 ರಂದು ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆಗೆ ಬಂದಿದ್ದು, ಸರ್ಕಾರದ ಪರ ವಕೀಲ ರಾದ ವಹೀದಾ ಆರಿಸ್ (HCGP) ವಾದ ಮಂಡಿಸಿ
ಈ ರೀತಿಯ ದ್ವೇಷ ಭಾಷಣಗಳಿಂದಾಗಿ ಮಂಗಳೂರು ಕಡೆಗಳಲ್ಲಿ ಹೆಣಗಳ ಮೇಲೆ ಹೆಣಗಳು ಬೀಳುತ್ತಿದೆ. ಮತ್ತು ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತದೆ.
ಈ ರೀತಿಯ ಭಾಷಣಗಳಿಗೆ ನ್ಯಾಯಾಲಯಗಳು ಕಡಿವಾಣ ಹಾಕಿದರೆ ಮಾತ್ರ ಅಲ್ಲಿಯ ಜನತೆಗೆ ಶಾಂತಿ ದೊರಕಬಹುದು. ಆದ್ದರಿಂದ ನ್ಯಾಯಾಲಯವು ಇದನ್ನು ಗಂಭೀರವಾಗಿ ಪರಿಗಣಿಸಿ ಮಂಗಳೂರುನಲ್ಲಿ ಶಾಂತಿ ನೆಲೆಗೊಳ್ಳಲು ಸಹಕಾರಿಯಾಗುವ ನಿಟ್ಟಿನಲ್ಲಿ ಆದೇಶ ನೀಡಬೇಕೆಂದು ವಾದ ಮಂಡಿಸಿದರು.
ವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಾಲಯದ ಕೋರ್ಟ್ ಸಂಖ್ಯೆ 10 ರ ನ್ಯಾಯಾಧೀಶರಾದ ಕೃಷ್ಣ ಕುಮಾರ್ ರವರು ಆದೇಶವನ್ನು ನೀಡಿ ” ಆರೋಪಿತರು ಇನ್ನು ಮುಂದೆ ಯಾವುದೇ ದ್ವೇಷ ಭಾಷಣ ಮಾಡಬಾರದು. ಈಗಾಗಲೇ ಅವರ ವಿರುದ್ಧ ದಾಖಲಾಗಿರುವ ಅಪರಾಧಿಕ ಸೆಕ್ಷನ್ ಗಳ ಅಪರಾಧವನ್ನು ಪುನರಾವರ್ತಿಸುವಂತಿಲ್ಲ” ಎಂದು ಮಹತ್ವದ ಆದೇಶ ನೀಡಿದ್ದಾರೆ.










