
” ಪಶ್ಚಿಮ ಘಟ್ಟಗಳಲ್ಲಿ ಬುಡಕಟ್ಟು ಸಮುದಾಯದ ಜನರು ಅರಣ್ಯವನ್ನು ರಕ್ಷಿಸುತ್ತಿದ್ದರು ಅವರನ್ನು ಅಪರಾಧಿ ಭಾವನೆಯಿಂದ ಕಾಣಲಾಗುತ್ತಿದೆ. ಮಾನವನೇ ಕಾಡಿಗೆ ಹೋಗಿದ್ದಾನೆ ಹೊರತು ಪ್ರಾಣಿಗಳು ನಾಡಿಗೆ ಬಂದಿಲ್ಲ. ಆಧುನಿಕರಣದ ಭರಾಟೆಯಲ್ಲಿ ಪರಿಸರ ನಾಶ ಸಂಭವಿಸುತ್ತಿದ್ದು ಇದು ವನ್ಯಜೀವಿಗಳ ಹಾಗೂ ಮಾನವನ ಭವಿಷ್ಯಕ್ಕೆ ಕುತ್ತು ತಂದಿದೆ. ಸಾಲುಮರದ ತಿಮ್ಮಕ್ಕ, ತುಳಸಿ ಗೌಡ, ಸುಕ್ರಿ ಬೊಮ್ಮ ಗೌಡ ಇನ್ನಿತರ ಸಿದ್ದಿ ಜನಾಂಗದ ಪರಿಸರ ರಕ್ಷಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಾದ ಅನಿವಾರ್ಯತೆ ಇದೆ. ಸ್ನೇಹ ಶಾಲೆಯ ಪ್ರಕೃತಿಯ ಮಡಿಲಲ್ಲಿ ಬೆಳೆದ ತಾವುಗಳು ಪರಿಸರ ಮತ್ತು ಮಾನವ ಸಮಾಜದ ನಡುವಿನ ಕೊಂಡಿಯಾಗಿ ಬೆಳೆದು ಭಾರತದ ಭವ್ಯ ಭವಿಷ್ಯದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಪರಿಸರವಾದಿ ದಿನೇಶ್ ಹೊಳ್ಳರವರು ಹೇಳಿದರು.
ಇವರು ಜು.27ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ವತಿಯಿಂದ ಜರಗಿದ ಪರಿಸರ ಜಾಗೃತಿಯಾನ – ಪರಿಸರ ಗೀತೆ ಗಾಯನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.















ಇವರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಶ್ಚಿಮ ಘಟ್ಟದ ಅಳಿವು ಮತ್ತು ಉಳಿವಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ ಚಂದ್ರಶೇಖರ ದಾಮ್ಲೆಯವರು ಮಾತನಾಡಿ ” ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಆಗಿದ್ದು ಪರಿಸರ ಜಾಗೃತಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ತಾವೆಲ್ಲರೂ ಪರಿಸರ ಸಂರಕ್ಷಣೆಯ ಕಾರ್ಯ ಅನುಷ್ಠಾನ ಮಾಡಬೇಕೆಂದು” ತಮ್ಮ ಅನುಭವದ ನುಡಿಗಳೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸದಸ್ಯರಾಗಿರುವ ರಾಮಚಂದ್ರ ಪಲ್ಲತಡ್ಕರವರು ಮಾತನಾಡಿ “ಪರಿಸರದ ನಡುವೆಯೇ ನಿರ್ಮಿತವಾಗಿರುವ ಸ್ನೇಹ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪರಿಸರದ ಬಗೆಗೆ ಕಾಳಜಿ ಮತ್ತು ಅದರ ಸಂರಕ್ಷಣೆಯ ಜ್ಞಾನವಿದೆ” ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀಮತಿ ಸಂಧ್ಯಾ ಮಂಡೆಕೋಲು ಇವರಿಂದ ಕನ್ನಡ ನಾಡು ನುಡಿ ಮತ್ತು ಪರಿಸರಕ್ಕೆ ಸಂಬಂಧಿಸಿದ ಗೀತಾ ಗಾಯನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಘಟಕದ ಅಧ್ಯಕ್ಷರಾಗಿರುವ ಚಂದ್ರಶೇಖರ ಪೇರಾಲು ರವರು ಮಾತನಾಡಿ ” ಪರಿಸರ ಮತ್ತು ಕನ್ನಡಕ್ಕೆ ಅವಿನಾಭಾವ ಸಂಬಂಧವಿದೆ. ಆ ಮುಖೇನ ಸಾಹಿತ್ಯ ರಚನೆಯಲ್ಲಿ ಪರಿಸರದ ಪಾತ್ರ ಅತಿ ಪ್ರಾಮುಖ್ಯವಾದುದು. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಘಟಕದ ವತಿಯಿಂದ ಪ್ರತಿ ವರ್ಷವೂ ವಿವಿಧ ಕಾರ್ಯಕ್ರಮಗಳನ್ನು ವಿವಿಧ ಶಾಲೆಗಳಲ್ಲಿ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಮಕ್ಕಳಲ್ಲಿ ಪರಿಸರದ ಜಾಗೃತಿಯನ್ನು ಮೂಡಿಸಿದಾಗ ಭವಿಷ್ಯ ಚೆನ್ನಾಗಿ ಇರುತ್ತದೆ ಎಂಬ ಆಶಯದೊಂದಿಗೆ ಪರಿಸರಯಾನ ಕಾರ್ಯಕ್ರಮವನ್ನು ಪ್ರಕೃತಿದತ್ತವಾದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿರುವುದು ಅತ್ಯಂತ ಖುಷಿ ತಂದಿದೆ” ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಮೊದಲು ಶಾಲಾ ಆವರಣದಲ್ಲಿರುವ ಸುಮಾರು ನೂರು ಸಸಿಗಳ ಎಲೆಗಳನ್ನು ಗುರುತಿಸುವ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
5 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿಭಾಗದ ಹತ್ತನೇ ತರಗತಿಯ ವಿದ್ಯಾರ್ಥಿನಿ ವಿದ್ಯುಲತ ಪಿ ಯನ್ನು ಪ್ರಥಮ ಬಹುಮಾನವನ್ನು ಪಡೆದುಕೊಂಡರೆ 9ನೇ ತರಗತಿಯ ವಿದ್ಯಾರ್ಥಿ ಗಿರೀಶ ದ್ವಿತೀಯ ಬಹುಮಾನವನ್ನು ಪಡೆದುಕೊಂಡನು. ಅದೇ ರೀತಿ ಪ್ರಾಥಮಿಕ ವಿಭಾಗದಲ್ಲಿ ಆರನೇ ತರಗತಿಯ ದಿಶಾಂತ್ ಬಿ. ಜಿ ಪ್ರಥಮ ಬಹುಮಾನವನ್ನು ಪಡೆದುಕೊಂಡರೆ ಏಳನೇ ತರಗತಿಯ ಸಾನಿಕ ಎ. ಪಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಳು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಘಟಕದ ಸದಸ್ಯರಾಗಿರುವ ಶಶ್ಮಿ ಭಟ್ ಅಜ್ಜಾವರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ,
ಸಾಹಿತ್ಯ ಪರಿಷತ್ತಿನ
ಗೌರವ ಕಾರ್ಯದರ್ಶಿಗಳಾಗಿರುವ ತೇಜಸ್ವಿ ಕಡಪಳ ವಂದಿಸಿದರು. ಸ್ನೇಹ ಶಾಲಾ ಶಿಕ್ಷಕ ದೇವಿಪ್ರಸಾದ ಜಿ. ಸಿ ಕಾಯರ್ತೋಡಿ ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










