ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ 12ನೇ ವರ್ಷದ ವಾರ್ಷಿಕ ಸಂಭ್ರಮ

0

ದೀಪಾಂಜಲೀ ಮಹಿಳಾ ಭಜನಾ ಮಂಡಳಿ (ರಿ) ಶಾಂತಿನಗರ, ಇದರ 12ನೇ ವರ್ಷದ ವಾರ್ಷಿಕ ಸಂಭ್ರಮವು ಇತ್ತೀಚೆಗೆ ಉಡುಪಿಯ ಪರ್ಯಾಯ ಶ್ರೀ ಕೃಷ್ಣ ಮಠದ ರಾಜಾಂಗಣ ವೇದಿಕೆಯಲ್ಲಿ ಜರುಗಿತು.

ಭಕ್ತಿ ಪ್ರಧಾನವಾದ ಈ ಕಾರ್ಯಕ್ರಮಕ್ಕೆ ಪೂರಕವಾಗಿ ಒಂದು ವಾರದ ಮುಂಚಿತವಾಗಿ ಸುಳ್ಯದಲ್ಲಿ ಆಯ್ದ ಏಳು ಮನೆಗಳಲ್ಲಿ ಮನೆ ಮನೆ ಭಜನಾ ಅಭಿಯಾನ ಯಶಸ್ವಿಯಾಗಿ ಜರುಗಿತ್ತು.


ವಾರ್ಷಿಕ ಸಂಭ್ರಮದ ಸಭಾ ಕಾರ್ಯಕ್ರಮದಲ್ಲಿ ಉಡುಪಿಯ ಪರ್ಯಾಯ ಮಠದ ಸ್ವಾಮೀಜಿಯವರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರವರು ದಿವ್ಯ ಉಪಸ್ಥಿತರಿದ್ದು, ದೀಪ ಪ್ರಜ್ವಲಿಸಿ ಆಶೀರ್ವಾದಗೈದು ಮಂತ್ರಾಕ್ಷತೆ ನೀಡಿದರು. ಶ್ರೀ ಕೃಷ್ಣ ಮಠದ ಸಾಂಸ್ಕೃತಿಕ ಕಾರ್ಯ ನಿರ್ವಾಹಕ ರಮೇಶ್ ಭಟ್ ರವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಭಜನಾ ಗುರುಗಳಾದ ಮಧ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆಯವರಿಗೆ ದೀಪಾಂಜಲೀ ಮಹಿಳಾ ಭಜನಾ ಮಂಡಳಿ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು.

ಪ್ರಸಿದ್ಧ ಹಾಗೂ ಪವಿತ್ರ ಕ್ಷೇತ್ರವಾದ ಉಡುಪಿಯಲ್ಲಿ ಜರುಗಿದ 12ನೇ ವರ್ಷದ ವಾರ್ಷಿಕ ಸಂಭ್ರಮ ಸಮಾರಂಭದ ರೂಪುರೇಷೆಗಳ ಬಗ್ಗೆ ಸಲಹೆ ಸೂಚನೆ ಮಾರ್ಗದರ್ಶನಗಳನ್ನಿತ್ತ ಮಣಿಪಾಲದ ‘ಕೃಷ್ಣ- ಗಾನ-ಸುಧಾ ಸಂಗೀತ ಪಾಠಶಾಲೆಯ ಶ್ರೀಮತಿ ಉಷಾ ಹೆಬ್ಬಾರ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಾಗೂ ದೀಪಾಂಜಲೀ ಮಹಿಳಾ ಮಂಡಳಿಯಲ್ಲಿ ಸುಮಾರು 22 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಸದಸ್ಯೆ ಶ್ರೀಮತಿ ಹೇಮಲತಾ ಕಜೆಗದ್ದೆಯವರ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಭಜನಾ ಗುರುಗಳಾದ ಮಧ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆಯವರಿಂದ ದಾಸರ ಪದಗಳ ಗಾಯನ ನೆರವೇರಿತು. ಇದೇ ಸಂದರ್ಭದಲ್ಲಿ ಜರುಗಿದ ನೃತ್ಯ ವೈಭವ ಕಾರ್ಯಕ್ರಮದಲ್ಲಿ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ರವರ ಶಿಷ್ಯೆಯರಾದ ಕು. ಆಕಾಂಕ್ಷ ಕಜೆಗದ್ದೆ, ಕು.ಭಾನವಿಕೃಷ್ಣ, ಕು.ವಿಷ್ಣುಪ್ರಿಯ ದರ್ಬೆ ಇವರಿಂದ ನೃತ್ಯ ವೈಭವ ಸೇವೆ ಜರುಗಿತು. ನಂತರ ಕಾಟುಕುಕ್ಕೆ ಬಳಗದ ಭಜನಾ ಸಮಿತಿಯ ಸುಮಾರು 20 ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನಾ ಸೇವೆ ನಡೆಯಿತು. ಕನಕಮಜಲಿನ ಕನಕದಾಸ ಮಕ್ಕಳ ಭಜನಾ ಮಂಡಳಿ ಹಾಗೂ ಕಂಬಾರಿನ ಮಕ್ಕಳ ತಂಡದ ಮಕ್ಕಳಿಂದ ಕುಣಿತ ಭಜನಾ ಸೇವೆ ಜರುಗಿತು.
ದೀಪಾಂಜಲೀ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಹರ್ಷಾಕರುಣಾಕರ ಸೇರ್ಕಜೆ ಅವರು ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ಕುಸುಮ ಎಂ ಎಸ್ ಮೊಂಟಡ್ಕ ವಂದಿಸಿದರು. ಕು. ಆಕಾಂಕ್ಷಾ ಕಜೆಗದ್ದೆ ಕು.ಭಾನವಿ ಕೃಷ್ಣ, ಕು.ವಿಷ್ಣುಪ್ರಿಯ ದರ್ಬೆ ಪ್ರಾರ್ಥಿಸಿದರು. ಶ್ರೀಮತಿ ಹೇಮಲತಾ ಗಣೇಶ್ ಕಜೆಗದ್ದೆ ಯವರು ಕಾರ್ಯಕ್ರಮ ನಿರೂಪಣೆಗೆೈದರು. ಕು.ಪೂಜಾ ಸೇರ್ಕಜೆ ಸಹಕರಿಸಿದರು.