ವಿಭಿನ್ನ ಬೆಳೆ ಹಾಗೂ ಪಹಣಿ ಪತ್ರದಲ್ಲಿ ಖಾಲಿ ಎಂದು ಸ್ಥಳ ಬಿಟ್ಟಿರುವ ಎಲ್ಲಾ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ನೀಡುವಂತೆ ಕೊಡಗು ಜಿಲ್ಲಾಧಿಕಾರಿಗಳಿಗೆ ಹರೀಶ್ ಕೊಳಂಗಾಯ ಮನವಿ

0

ರಾಜ್ಯ ಸರ್ಕಾರ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಲ್ಲಿ ನಷ್ಟ ಪರಿಹಾರಕ್ಕೆ ವಿಮಾ ಕಂತು ಪಾವತಿಸಲು ಆ. 30 ಕೊನೆಯ ದಿನವೆಂದು ಅದೇಶಿಸಿದ್ದು, ಪೆರಾಜೆ, ಸಂಪಾಜೆ, ಚೆoಬು ಗ್ರಾಮದ ಬಹಳಷ್ಟು ಕೃಷಿಕರು ಈ ಯೋಜನೆಯ ಲಾಭ ಪಡೆಯಲು ಆಗದೆ ತೊಂದರೆ ಅನುಭವಿಸುವ ಸ್ಥಿತಿಯಲ್ಲಿದ್ದಾರೆ. ಈ ಭಾಗದ ಹೆಚ್ಚಿನ ರೈತರು ವಾಣಿಜ್ಯ ಬೆಳೆಯಾದ ಅಡಿಕೆ ಮತ್ತು ಕರಿಮೆಣಸು ಕೃಷಿಯನ್ನು ಬೆಳೆಯುತ್ತಿದ್ದು ರೈತರ ಆರ್.ಟಿ.ಸಿ. ಯಲ್ಲಿ ಕಂದಾಯ ಇಲಾಖೆಯು ಕಾಲಕಾಲಕ್ಕೆ ಕೃಷಿಯನ್ನು ಕೂಡ ಅದಲು ಬದಲು ಮಾಡುತ್ತಿದ್ದು ಇದರಿಂದ ಈ ಗ್ರಾಮದ ದೀರ್ಘಾವಧಿ ಬೆಳೆಯಾದ ಅಡಿಕೆ ಕರಿಮೆಣಸು ಕೃಷಿ ಪಹಣಿ ಪತ್ರದಿಂದ ರದ್ದು ಆಗುವ ಕಾರಣಕ್ಕೆ ಸರ್ಕಾರದ ಉದ್ದೇಶಿತ ಧನ ಸಹಾಯ ಎಲ್ಲ ರೈತರಿಗೆ ಲಭಿಸುತ್ತಿಲ್ಲ. ಅಲ್ಲದೆ ಕೆಲವು ರೈತರಿಗೆ ಪಹಣಿ ಪತ್ರಗಳಲ್ಲಿ ಅಡಿಕೆ ಕೃಷಿ ಇದ್ದರೂ ಕೂಡ ಯಾವುದೇ ಬೆಳೆ ಇಲ್ಲವೆನ್ನುವ ಮಾಹಿತಿ ಪಹಣಿ ಪತ್ರಗಳಲ್ಲಿ ಸಾಕಷ್ಟು ಇದೆ. ಇಲ್ಲವೇ ರಬ್ಬರ್, ಭತ್ತ, ತೆಂಗು, ಅಡಿಕೆ ಇನ್ನಿತರ ಬೆಳೆಗಳೆಂದು ಅನಗತ್ಯವಾಗಿ ಸೇರ್ಪಡೆಗೊಂಡಿದೆ. ಹಾಗಾಗಿ ಪ್ರತಿವರ್ಷ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಬೆಳೆ ಸಮೀಕ್ಷೆಗೆ ಮುಂದಾಗುವ ಕೃಷಿ ಇಲಾಖೆ ಖಾಸಗಿ ವ್ಯಕ್ತಿಗಳಿಗೆ ಬೆಳೆ ಸಮೀಕ್ಷೆ ಮಾಡುವ ಹೊಣೆಗಾರಿಕೆ ನೀಡುತ್ತದೆ. ನಂತರ ವೆಬ್ಸೈಟ್ನಲ್ಲಿ ಅವುಗಳನ್ನು ಸರಿಯಾಗಿ ನಮೂದಿಸುತ್ತಿಲ್ಲ. ಇದರಿಂದಾಗಿ ರೈತರು ಬೆಳೆ ಪರಿಹಾರ ಸಂದರ್ಭದಲ್ಲಿ ಪರಿಹಾರ ಸಿಗದೆ ಸಂಕಷ್ಟ ಎದುರಿಸುತ್ತಾ ಇದ್ದಾರೆ. ರೈತರ ಭೂಮಿಗಳಲ್ಲಿ ಅಡಿಕೆ ಮತ್ತು ಕರಿಮೆಣಸು ಇದ್ದವರಿಗೂ ಹಾಗೂ ಸರ್ವೆ ಕಾರ್ಯ ಸಮರ್ಪಕವಾಗಿ ನಡೆಯದೆ ವಿಭಿನ್ನ ಬೆಳೆ ಹಾಗೂ ಪಹಣಿ ಪತ್ರದಲ್ಲಿ ಖಾಲಿ ಎಂದು ಸ್ಥಳ ಬಿಟ್ಟಿರುವ ಎಲ್ಲಾ ರೈತರಿಗೆ 2024- 25 ನೇ ಸಾಲಿನ ಹವಾಮಾನ ಆಧರಿತ ಬೆಳೆ ವಿಮೆಯನ್ನು ಪಹಣಿ ಪತ್ರ ಹೊಂದಿರುವ ಎಲ್ಲಾ ರೈತರಿಗೆ ನೀಡುವಂತೆಯೂ, ಅಲ್ಲದೆ ಮುಂದಿನ ವರ್ಷದ ಕೃಷಿ ಇಲಾಖೆಯ ಬೆಳೆ ಸಮೀಕ್ಷೆ ಕಾರ್ಯ ಮಾಡುವ ಸಂದರ್ಭದಲ್ಲಿ ಈ ಹಿಂದೆ ತಪ್ಪಾಗಿ ಮುದ್ರಣಗೊಂಡಿರುವ ರೈತರ ಕೃಷಿಗಳನ್ನು ಕೂಲಂಕುಶವಾಗಿ ಸರ್ವೇ ನಡೆಸುವ ಮುಖಾಂತರ ಮೇಲ್ಕಂಡ ಭಾಗದ ರೈತರ ಸಮಸ್ಯೆ ಶಾಶ್ವತ ಪರಿಹಾರ ಆಗುವಂತೆ ಕ್ರಮಕೈಗೊಳ್ಳಬೇಕೆಂದೂ ಹರೀಶ್ ಕೊಳಂಗಾಯ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.