ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ

0

ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಬದುಕಿಗಾಗಿ ವಿಜ್ಞಾನ ಎಂಬ ವಿಷಯದ ಅಡಿಯಲ್ಲಿ ಕೋಡ್ ಕ್ರಾಫ್ಟ್ ವಿಜ್ಞಾನ ಮೇಳವು ಆ. 19ರಂದು ನಡೆಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕಾರ್ಯರೂಪ ಮಾದರಿಯ ಪ್ರದರ್ಶನವನ್ನು ಮಾಡಲಾಯಿತು. ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ನ ಸ್ವಯಂಸೇವಕರಾದ ಶ್ರೀವತ್ಸ, ಅನಿತಾ, ಅಕ್ಷತಾ, ಹೇಮಂತ್ ಸರ್ ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳ ಕಾರ್ಯರೂಪಕ್ಕೆ ತೀರ್ಪುಗಾರರಾಗಿ ಆಗಮಿಸಿ, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ನ. ಸೀತಾರಾಮ ಮಾತನಾಡಿ ಜ್ಞಾನ ಎಂಬುದು ವಿಶೇಷವಾದ, ಸ್ಪಷ್ಟವಾದ, ಅಭಿವೃದ್ಧಿಯ ಆಸಕ್ತಿಯೇ ವಿಜ್ಞಾನ ಎಂದು ಹೇಳಿದರು.

ಸಂಸ್ಥೆಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಜಯಪ್ರಸಾದ್ ಕಾರಿಂಜ ವಿದ್ಯಾರ್ಥಿಗಳನ್ನು ಅಭಿನಂದನೆಗಳನ್ನು ಸಲ್ಲಿಸುತ್ತಾ ವಿಜ್ಞಾನ ಕಾರ್ಯ ರೂಪದ ಮಾದರಿಗಳ ಬಗ್ಗೆ ಸಲಹೆ ನೀಡಿದರು. ಸ್ಪರ್ಧೆಗಳ ಫಲಿತಾಂಶವಾಗಿ ಪ್ರಾಥಮಿಕ ವಿಭಾಗದಲ್ಲಿ ಶ್ರೀವತ್ಸ 7ನೇ ತರಗತಿ ಪ್ರಥಮ,
ಪ್ರಣವಿ ಕಾರಿಂಜ 6ನೇ ತರಗತಿ ದ್ವಿತೀಯ, ಬ್ರಿಜೇಶ್ 7ನೇ ತರಗತಿ ತೃತಿಯ, ಪ್ರೌಢ ಶಾಲಾ ವಿಭಾಗದಲ್ಲಿ ತುಷಾರ್ ಮತ್ತು ಜಶ್ವಿನ್ 10 ನೇ ತರಗತಿ ಪ್ರಥಮ, ಅಜಿತ್ ಕೃಷ್ಣ ಮತ್ತು ಜನಿತ್ 8 ನೇ ತರಗತಿ ದ್ವಿತೀಯ, ಲೋಹಿತ್ ಮತ್ತು ಚಂದ್ರು 9ನೇ ತರಗತಿ ತೃತೀಯ ಸ್ಥಾನ ಪಡೆದು ನಗದು ಬಹುಮಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಬಹುಮಾನವನ್ನು ಆಕಾಂಕ್ಷೆ ಚಾರಿಟೇಬಲ್ ಟ್ರಸ್ಟ್ ಸಂಸ್ಥೆ ನೀಡಿತ್ತು. ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕಿ ತೇಜಸ್ವಿ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ವಿಜ್ಞಾನ ಶಿಕ್ಷಕಿ ಪೂರ್ಣಿಮಾ ಕಾರಿಂಜ ನಿರೂಪಿಸಿದರು. ಪ್ರಾಥಮಿಕ ಶಾಲಾ ಸಹ ಶಿಕ್ಷಕರಾದ ಆಶಿಶ್ ದೊಡ್ಡೇರಿ ಸಹಕರಿಸಿದರು.