ಸುಳ್ಯದಲ್ಲಿ “ಕಾಪಿಕೊ” ಕಾರ್ಯಾಗಾರ

0

ಇದು ಅಡಿಕೆಗೆ ಪರ್ಯಾಯವಲ್ಲ – ಅಡಿಕೆಯ ಜತೆಗೆ ಕಾಫಿ ಬೆಳೆಸೋಣ : ಕ್ಯಾ.ಚೌಟ

ಕಾಫಿ ಬೆಳೆಸಿ. ಕಾಫಿ ಬೋರ್ಡ್ ನಿಮ್ಮ ಜತೆಗಿರುತ್ತದೆ : ದಿನೇಶ್ ಎಂ.ಜೆ.

ಇದು ಅಡಿಕೆಗೆ ಪರ್ಯಾಯವಲ್ಲ. ಅಡಿಕೆಯ ಜತೆಗೆ ಕಾಫಿ ಬೆಳೆಯಬೇಕು. ಅಡಿಕೆಗೆ ಬಂದಿರುವ ಹಳದಿ ಎಲೆ ರೋಗದಿಂದ ಕಂಗೆಟ್ಟಿರುವ ರೈತರಿಗೆ ಧೈರ್ಯ ತುಂಬಿಸುವ ಉದ್ದೇಶದಿಂದ ಎಲ್ಲರೂ ಸೇರಿ ವೈಜ್ಞಾನಿಕವಾಗಿ ಯೋಚಿಸಿ ಸರ್ವ ವ್ಯವಸ್ಥೆಯನ್ನೂ ಮಾಡಿಕೊಂಡು ಕಾಫಿ ಬೆಳೆಯಬೇಕೆಂಬ ಗುರಿಯೊಂದಿಗೆ ಈ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕ್ಯಾ.ಬ್ರಿಜೇಶ್ ಚೌಟರು ಹೇಳಿದರು.

ಅಡಿಕೆ ಬೆಳೆಗೆ ಹಳದಿ ರೋಗ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕಾಫಿ ಬೆಳೆಗೆ ಪ್ರೋತ್ಸಾಹ ನೀಡಲು ಸಂಸದರ ನೇತೃತ್ವದಲ್ಲಿ “ಕಾಪಿಕೊ ಕಾರ್ಯಾಗಾರ” ಹಮ್ಮಿಕೊಳ್ಳಲಾಗಿದ್ದು, ಆ.25 ರಂದು ಸುಳ್ಯದ ಸಿ.ಎ.ಬ್ಯಾಂಕ್ ನ ಎ.ಎಸ್.ವಿಜಯಕುಮಾರ್ ಸಭಾಭವನದಲ್ಲಿ ಅಯೋಜನೆಗೊಂಡ ಕಾರ್ಯಕ್ರಮವನ್ನು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಎಂ.ಜೆ. ಜತೆಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು.

” ರೈತರ ಮತ್ತು ಸೈನಿಕರ ಬದುಕು ಅನಿಶ್ಚಿತತೆಯಿಂದ ಕೂಡಿರುತ್ತದೆ. ಇವರಿಬ್ಬರೂ ದೇಶದ ಆಧಾರಸ್ಥಂಭಗಳು. ಅದಕ್ಕಾಗಿಯೇ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ಹಿರಿಯರು ನೀಡಿದರು. ಈಗ ಅದು ಜೈಜವಾನ್,ಜೈಕಿಸಾನ್, ಜೈವಿಜ್ಞಾನ್ ಮತ್ತು ಜೈಅನುಸಂಧಾನ್ ಆಗಿದೆ. ರೈತರು ಅನಿಶ್ಚಿತತೆ ಯಿಂದ ನಿಶ್ಚಿತ ಗುರಿಯೆಡೆಗೆ ಸಾಗುವ ಉದ್ದೇಶಕ್ಕೆ ವಿಜ್ಞಾನದ ನೆರವನ್ನೂ ಪಡೆದುಕೊಳ್ಳಬೇಕೆಂಬ ಉದ್ದೇಶ ನಮ್ಮದು. ಹಳದಿರೋಗದ ಸಮಸ್ಯೆಯಿಂದಾಗಿ ಸುಳ್ಯ ತಾಲೂಕಿನ ಹತ್ತು ಗ್ರಾಮಗಳಲ್ಲಿ ಅಡಿಕೆ ಕೃಷಿಕರ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಅಂತಹ ಕಂಗೆಟ್ಟ ರೈತರಿಗೆ ಅಲ್ಪ ನೆರವು ಕೊಟ್ಟರೂ ಸಾಕು. ಉಳಿದುದನ್ನು ಅವರೇ ಮಾಡಿಕೊಳ್ಳುತ್ತಾರೆ” ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು. ” ಕಾಫಿ ಬೋರ್ಡಿನವರು ದ.ಕ. ಜಿಲ್ಲೆಯ ಸುಳ್ಯ ,ಪುತ್ತೂರು, ಕಡಬ ಮತ್ತು ಬೆಳ್ತಂಗಡಿ ತಾಲೂಕುಗಳನ್ನು ಕಾಫಿಬೆಳೆಸಲು ಕಾಫಿಬೋರ್ಡಿನ ವ್ಯಾಪ್ತಿಗೆ ತರಬೇಕು ” ಎಂದು ಅವರು ಕಾಫಿ ಬೋರ್ಡ್ ಅಧ್ಯಕ್ಷರನ್ನು ವಿನಂತಿಸಿಕೊಂಡರು.

ಕಾಫಿ ಬೋರ್ಡ್ ಅಧ್ಯಕ್ಷ ದಿನೇಶ್ ಎಂ.ಜೆ.ಯವರು ಮಾತನಾಡಿ, ” ವರ್ಷಕ್ಕೆ ಏಳು ಲಕ್ಷ ಟನ್ ಕಾಫಿ ಉತ್ಪಾದನೆ ಪ್ರತೀ ವರ್ಷ ಅಸಗಬೇಕೆಂಬ ಗುರಿ ಬೋರ್ಡಿಗಿದೆ. ಆದ್ದರಿಂದ ಕಾಫಿ ಬೆಳೆಯ ವಿಸ್ತರಣೆ ಆಗಬೇಕಾಗಿದೆ. ಆದರೆ ಕಾಫಿಗೆ ಬೆಲೆ ಇದೆ ಎಂದು ನೀವು ಕಾಫಿ ಬೆಳೆಗಾರರಾಗುವುದು ಬೇಡ. ಸರಿಯಾಗಿ ತಿಳಿದುಕೊಂಡು ಇತರ ರೈತರ ಅನುಭವ ಪಡೆದುಕೊಂಡು ಸಮರ್ಪಕ ರೀತಿಯಲ್ಲಿ ಕಾಫಿ ಬೆಳೆಯುವುದಾದರೆ ಮಾತ್ರ ಕಾಫಿ ಬೆಳೆಯಲು ಆರಂಭಿಸಿ” ಎಂದು ಹೇಳಿದರು.
ಕಾಫಿ ಬೋರ್ಡಿನ ವಿಸ್ತರಣಾ ವಿಭಾಗದ ಡೆಪ್ಯುಟಿ ಡೈರೆಕ್ಟರ್ ಡಾ.ಚಂದ್ರಶೇಖರ್, ನಬಾರ್ಡ್ ಅಧಿಕಾರಿ ಶ್ರೀಮತಿ ಡಾ.ಸಂಗೀತ ಕರ್ತ, ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಮಂಜುನಾಥ್, ಹಾಸನದ ಸೆವೆನ್ ಬೀಮ್ ಅಧ್ಯಕ್ಷ ಡಾ.ಪ್ರದೀಪ್, ಸಂಪನ್ಮೂಲ ವ್ಯಕ್ತಿ ಡಾ.ಧರ್ಮರಾಜ್, ಬಿ.ಜೆ.ಪಿ. ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ನ.ಪಂ.ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ. ನೀರಬಿದಿರೆ, ಅಯಾ ಫರ್ಟಿಲೈಸರ್ ನ ಬೋಪಣ್ಣ, ಜೈನ್ ಇರಿಗೇಶನ್ ನ ಕಾರ್ತಿಕ್ ಮಂಜುನಾಥ್, ಶಶಿಕಲಾ ನೀರಬಿದಿರೆ, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಪಿಕೊ ಕಾರ್ಯಾಗಾರದ ಸಂಚಾಲಕ ಅರಂತೋಡು ತೊಡಿಕಾನ ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಸಂಚಾಲಕ ಬೆಳ್ಳಾರೆ ಸೊಸೈಟಿ ಅಧ್ಯಕ್ಷ ಆರ್.ಕೆ. ಭಟ್ ಕುರುಂಬುಡೇಲು ಉಪಸ್ಥಿತರಿದ್ದರು. ಕು.ಶುಭದಾ ಆರ್. ಪ್ರಕಾಶ್ ಪ್ರಾರ್ಥಿಸಿದರು.