ಸೆ. 29ರಿಂದ ಅ. 07ರವರೆಗೆ ಸುಳ್ಯ ದಸರಾ ಉತ್ಸವ

0

ಶಾರದಾಂಬ ಸಮೂಹ ಸಮಿತಿಗಳ ಪೂರ್ವ ಭಾವಿ ಸಭೆ

ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ (ರಿ) ಮತ್ತು ಶಾರದಾಂಬಾ ಸಮೂಹ ಸಮಿತಿಗಳ ಪದಾಧಿಕಾರಿಗಳು ಹಾಗೂ ಸಮಿತಿಯ ಸರ್ವ ಸದಸ್ಯರ ಸಭೆ ಆ. 25 ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾರದಾಂಬ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಲೀಲಾಧರ್ ಡಿ ವಿ ಯವರು 54ನೇ ವರ್ಷದ ಸುಳ್ಯ ದಸರಾ 2025 ಸೆ.29ರಂದು ಪ್ರಾರಂಭಗೊಂಡು ಅ. 07ರ ವರೆಗೆ 9ದಿನಗಳ ಕಾಲ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜನೆ ಮತ್ತು ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನೀಡಿದರು. ಮತ್ತು ಶೋಭಯಾತ್ರೆಯನ್ನು ಶಾಂತಿಯುತವಾಗಿ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸುವ ಬಗ್ಗೆ ಮಾಹಿತಿ ನೀಡಿದರು.

ಶಾರದಾಂಬಾ ಸೇವಾ ಸಮಿತಿಯ ಗೌರವಧ್ಯಕ್ಷ ಗೋಕುಲ್ ದಾಸ್ ಮಾತನಾಡಿ ನೂತನವಾಗಿ ಆಯ್ಕೆಯಾದ ಶಾರದಾಂಬಾ ಮಹಿಳಾ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಶುಭಹಾರೈಸಿ, ಶ್ರೀ ಶಾರದಾಂಬ ಉತ್ಸವದ ಆಚರಣೆಯ ಯಶಸ್ವಿ ಸಂಘಟನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ, ಶಾರದಾಂಬ ಶೋಭಯಾತ್ರೆಯಲ್ಲಿ ಭಾಗವಹಿಸುವ ಸ್ತಬ್ದಚಿತ್ರಗಳ ಸಮಯ ಹೊಂದಾಣಿಕೆಯಿಂದಾಗುವ ಅಡಚಣೆ ಬಗ್ಗೆ ಎಲ್ಲಾ ಸಂಘ ಸಂಸ್ಥೆಗಳ ಸಭೆಯನ್ನು ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಕರೆದು ಎಲ್ಲರ ಸಹಕಾರವನ್ನು ಪಡೆಯುವಂತೆ ಸಲಹೆ ನೀಡಿದರು.

ಶಾರದಾಂಬ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಮಾತನಾಡಿ 54ನೇ ವರ್ಷದ ಸುಳ್ಯ ದಸರಾ 2025ರ ಆಚರಣೆಗೆ ಈಗಾಗಲೇ ಪೂರ್ವತಯಾರಿಮಾಡಿರುವ ಕಾರ್ಯಕ್ರಮದ ಬಗ್ಗೆ ಮತ್ತು ಅನ್ನದಾನದ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ ಸಮೂಹ ಸಮಿತಿಗಳ ಎಲ್ಲಾ ಸದಸ್ಯರು ಮತ್ತು ಊರಿನ ಸಮಸ್ತ ಜನತೆಯ ಸಹಕಾರದಿಂದ ಪಕ್ಷ ಬೇಧ ಮರೆತು ಪ್ರತಿ ವರ್ಷದಂತೆ ಯಶಸ್ವಿಯಾಗಿ ದಸರಾ ಕಾರ್ಯಕ್ರಮ ನಡೆಸುವ ಮತ್ತು 9 ದಿನಗಳ ಕಾರ್ಯಕ್ರಮದ ವೆಚ್ಚವನ್ನು ಭರಿಸಲು ಸಮೂಹ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರ ತಂಡವನ್ನು ರಚನೆ ಮಾಡಿ ಮುಂದಿನ ಒಂದು ವಾರದ ಒಳಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ನಂತರ ನಿಧಿ ಸಂಗ್ರಹಮಾಡುವ ಜವಾಬ್ದಾರಿ ನೀಡಿದರು.

ಶಾರದಾಂಬ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಲತಾ ಮಧುಸೂಧನ್ ರವರು ಮಾತನಾಡಿ ಈ ಬಾರಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಿಳಾ ತಂಡದ ಸದಸ್ಯರು ಹೆಚ್ಚಿನ ಜವಾಬ್ದಾರಿವಹಿಸಿಕೊಂಡು ಸೌಹಾರ್ದಯುತವಾಗಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸಹಕರಿಸುವಂತೆ ಮನವಿ ಮಾಡಿದರು.

ದಸರಾ ಉತ್ಸವ ಸಮಿತಿಯ ಗೌರವ ಸಲಹೆಗಾರರಾದ ನ್ಯಾಯವಾದಿ ಎಂ ವೆಂಕಪ್ಪ ಗೌಡ ಮಾತನಾಡಿ ಊರಿನ ಎಲ್ಲಾ ಗಣ್ಯರ ಸಹಕಾರ ಮತ್ತು ಸುಳ್ಯದ ಜನತೆ ಎಲ್ಲಾ ಒಟ್ಟು ಸೇರಿ ನಡೆಸುವ ಸುಳ್ಯ ದಸರಾ ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲರೂ ಜೊತೆಸೇರಿ ಪಾಲ್ಗೊಲ್ಲುವುದು ಹೆಮ್ಮೆಯ ವಿಚಾರವಾಗಿದೆ ಎಂದು ಅಭಿಪ್ರಾಯ ಪಟ್ಟರು.

ವೇದಿಕೆಯಲ್ಲಿ ಶಾರದಾಂಬ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಯಶೋದಾ ರಾಮಚಂದ್ರ, ಕೋಶಾಧಿಕಾರಿ ಅಶೋಕ್ ಪ್ರಭು, ಉತ್ಸವ ಸಮಿತಿಯ ಕೋಶಾಧಿಕಾರಿ ಬೆಳ್ಯಪ್ಪ ಗೌಡ, ದಸರಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ ಕೆ ಸತೀಶ್, ಉಪಸ್ಥಿತರಿದ್ದರು ಶಾರದಾಂಬ ಸಮೂಹ ಸಮಿತಿಗಳ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಶಾರದಾಂಬ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್ ಸ್ವಾಗತಿಸಿ, ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ ಕೋಶಾಧಿಕಾರಿ ಸುನಿಲ್ ಕುಮಾರ್ ಕೇರ್ಪಳ ವಂದಿಸಿದರು. ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು.