ಕಲ್ಚೆರ್ಪೆ ಸಮಸ್ಯೆ ಪರಿಹಾರಕ್ಕೆ ಆಲೆಟ್ಟಿ ಪಂ. ನಿಯೋಗ
ಎ. ಸಿ ಭೇಟಿಗೆ ನಿರ್ಧಾರ
ಹೆಸರಿಗೆ ಜನಸ್ನೇಹಿ ಪೋಲಿಸರು,
ಕರ್ತವ್ಯದಲ್ಲಿ ಲಾಭಿ ನಡೆಸುತ್ತಿದ್ದಾರೆಯೇ…?
ಅಧಿಕಾರಿಗಳು ಪೆನ್ನು ಪೇಪರ್ ಹಿಡಿದು ಹಗಲು ದರೋಡೆ ಮಾಡುತ್ತಿದ್ದಾರೆ- ಗ್ರಾಮಸ್ಥರ ಗಂಭೀರ ಆರೋಪ
ಆಲೆಟ್ಟಿ ಗ್ರಾಮ ಪಂಚಾಯತ್ ಇದರ 2025-26 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು
ಆ. 29 ರಂದು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ಅಲೆಟ್ಟಿ ಯವರ ಅದ್ಯಕ್ಷತೆಯಲ್ಲಿಪಂಚಾಯತ್ ಸಭಾಭವನದಲ್ಲಿ ನಡೆಯಿತು.
ನೋಡೆಲ್ ಅಧಿಕಾರಿಯಾಗಿ ಯುವಜನ ಕ್ರೀಡಾ ಇಲಾಖೆಯ ಅಧಿಕಾರಿ ದೇವರಾಜ್ ಮುತ್ಲಾಜೆ ಯವರು ಸಭೆಯ ಕಲಾಪ ನಡೆಸಿಕೊಟ್ಟರು.
ಕೊಲ್ಚಾರು ಪೈಂಬೆಚಾಲು ಪ್ರದೇಶದಲ್ಲಿ ಮುಖ್ಯರಸ್ತೆಯ ಬದಿಯ ಚರಂಡಿಗಳು ಮುಚ್ಚಿ ಹೋಗಿ ಮಳೆನೀರು ಕಾಂಕ್ರೀಟ್ ರಸ್ತೆಯ ಮೇಲೆ ನಿಂತಿದೆ ಕೆಸರಿನಿಂದಾಗಿ ಕಾಂಕ್ರೀಟ್ ರಸ್ತೆ ಕಾಣದಂತಾಗಿದೆ ಎಂದು ಸುದರ್ಶನ ಪಾತಿಕಲ್ಲು ದೂರಿದರು.
ಮನೆಗೆ ಹೋಗುವ ರಸ್ತೆ ಸಂಪರ್ಕಕ್ಕೆ ಚರಂಡಿಗೆ ಮೋರಿ ಹಾಕದೆ ಚರಂಡಿ ಮುಚ್ಚಿರುವುದುದರಿಂದ ಮುಖ್ಯ ರಸ್ತೆ ಮೇಲೆ ನೀರು ನಿಂತು ಸಮಸ್ಯೆಯಾಗಿದೆ. ಪಂಚಾಯತ್ ನಿಂದ ನೋಟಿಸ್ ನೀಡಿ ಮೋರಿ ಅಳವಡಿಸುವಂತೆ ಸೂಚನೆ ನೀಡಿ ಎಂದುಕರುಣಾಕರ ಹಾಸ್ಪರೆ ತಿಳಿಸಿದರು.
ಈ ಹಿಂದೆ ಚರಂಡಿ ದುರಸ್ಥಿ ಕಾರ್ಯ ಮಾಡಲಾಗಿದೆ. ಖಾಸಗಿ ಜಾಗದಿಂದ ರಸ್ತೆಗೆ ನೀರು ಬರುವುದರಿಂದ ರಸ್ತೆ ಹಾಳಾಗಿದೆ.ಮೋರಿ ಹಾಕದೆ ಸಂಪರ್ಕ ಕಲ್ಪಿಸಿರುವ ಮನೆಯವರಿಗೆ ನೋಟೀಸ್ ನೀಡುತ್ತೇವೆ. ಚರಂಡಿ ದುರಸ್ಥಿ ಮಾಡಿಸುವುದಾಗಿ ಎಂದು ಸದಸ್ಯೆ ಗೀತಾ ಕೊಲ್ಚಾರು ಉತ್ತರಿಸಿದರು.
ನಾರ್ಕೊಡು ಕೊಲ್ಚಾರು ರಸ್ತೆಯಲ್ಲಿ ಚರಂಡಿ ವ್ಯವಸ್ಧೆ ಇಲ್ಲದೆ ರಸ್ತೆ ಹಾಳಾಗುತ್ತಿದೆ.
ಮೋರಿ ಇಲ್ಲದೆ ರಸ್ತೆಯಲ್ಲಿ ನೀರು ಹರಿಯುತ್ತಿದೆ
ಲೋಕೋಪಯೋಗಿ ಇಲಾಖೆ ಗೆ ಸೇರಿದ ರಸ್ತೆ ಇದಾಗಿದ್ದು ಕೇರಳದಿಂದ ಬಸ್ಸು ಸಂಚಾರ ಹಾಗೂ ಈ ಭಾಗದಿಂದ ಘನ ಗಾತ್ರದ ವಾಹನಗಳು ಓವರ್ ಲೋಡ್ ಹಾಕಿ ಸಂಚರಿಸುತ್ತಿದೆ. ಪರ್ಮಿಟ್ ಇಲ್ಲದಿರುವ ವಾಹನಗಳ ಸಂಚಾರಕ್ಕೆ ತಡೆ ಹಾಕಿ ಕ್ರಮ ಕೈಗೊಳ್ಳಬೇಕು ಎಂದು ಧನಂಜಯ ಕುಂಚಡ್ಕ ರವರು ಪ್ರಸ್ತಾಪಿಸಿದರು.
ಜೆಸಿಬಿ ಮೂಲಕ ಚರಂಡಿ ದುರಸ್ಥಿ ಕಾಮಗಾರಿ ನಮ್ಮ ಗಮನಕ್ಕೆ ತಾರದೆ ಅಸಮರ್ಪಕವಾಗಿ ಮಾಡಿದ್ದಾರೆ. ಸಮರ್ಪಕವಾಗಿ ಕೆಲಸ ಮಾಡಿದ ನಂತರ
ಬಿಲ್ ಪಾಸ್ ಮಾಡಬೇಕು ಎಂದು ಸತ್ಯ ಪ್ರಸಾದ್ ಗಬ್ಬಲ್ಕಜೆ ತಿಳಿಸಿದರು.
ಕಲ್ಚರ್ಪೆಯಲ್ಲಿ ಕುಡಿಯುವ ನೀರು ಕಲುಷಿತಗೊಂಡಿದೆ ಎಂಬ ವಿಚಾರ ಪ್ರಸ್ತಾಪವಾಗಿದ್ದು ಇದರ ಮಾದರಿ ಸಂಗ್ರಹ ಮಾಡಿ ಪರೀಕ್ಷೆಗೆ ಒಳಪಡಿಸುವ ಬಗ್ಗೆ ಹಾಗೂ ಘನತ್ಯಾಜ್ಯ ಘಟಕದಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ಸಮಸ್ಯೆ ತಲೆದೋರಿರುವ
ಕುರಿತು ಕಳೆದ ಗ್ರಾಮ ಸಭೆಯಲ್ಲಿ ಪ್ರಸ್ತಾವನೆ ಮಾಡಲಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಅಶೋಕ್ ಪೀಚೆ ಪ್ರಶ್ನಿಸಿದರು.
ಕಲ್ಚರ್ಪೆ ಕುರಿತು ಎ. ಸಿ. ಯವರನ್ನು ಭೇಟಿಯಾಗುವುದಾಗಿ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು.ಆದರೆ ಭೇಟಿ ಮಾಡಲಾಗಿಲ್ಲ ಎಂದು
ಪಿ. ಡಿ. ಒ ತಿಳಿಸಿದರು.
ಈ ವಿಚಾರದ ಕುರಿತು ಎ. ಸಿ ಯವರಿಗೆ ಯಾಕೆ ಮಾಹಿತಿ ನೀಡಲಿಲ್ಲ. 2007 ರಿಂದ ಈ ವಿಚಾರದ ಬಗ್ಗೆ ಪ್ರತಿ ಗ್ರಾಮ ಸಭೆಯಲ್ಲಿಪ್ರಸ್ತಾಪವಾಗುತ್ತಿದೆ. ನಮ್ಮ ಭಾಗದ ತೆರಿಗೆ ಪಂಚಾಯಿತಿಗೆ ಬೇಡವೇ..? ಸ್ಥಳೀಯ ಆಡಳಿತದಲ್ಲಿ ಕೇಳದೇ ಬೇರೆ ನಾವು ಎಲ್ಲಿ ಪ್ರಶ್ನಿಸಬೇಕು..? ಎಂದು ಅಶೋಕ್ ರವರು ಮರು ಪ್ರಶ್ನಿಸಿದರು.
ಮುಂದಿನ ಒಂದು ತಿಂಗಳೊಳಗೆ ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಒ ಹಾಗೂ ಸದಸ್ಯರ ನಿಯೋಗ ಎ. ಸಿ ಯವರನ್ನು ಮುಖತ: ಭೇಟಿಯಾಗಿ ಸಮಸ್ಯೆ ಬಗ್ಗೆ ತಿಳಿಸಬೇಕು. ಕಲ್ಚರ್ಪೆ ಸಮಸ್ಯೆಗೆ ಪರಿಹಾರ ಸಿಗುವಂತೆ ಪ್ರಯತ್ನಿಸಬೇಕು ಎಂದು ನೋಡೆಲ್ ಅಧಿಕಾರಿಗಳು ಸೂಚಿಸಿದರು.
ಭೇಟಿಯಾಗಿ ಮಾತುಕತೆ ನಡೆಸಿದರೆ ಮಾತ್ರ ಇದಕ್ಕೆ ಪರಿಣಾಮಕಾರಿ ಪರಿಹಾರ ಸಿಗಬಹುದು ಹೊರತು ಪತ್ರ ವ್ಯವಹಾರ ಮಾಡಿ ಪ್ರಯೋಜನವಿಲ್ಲ ಎಂದು ರಾಧಾಕೃಷ್ಣ ಪರಿವಾರಕಾನ ಸಲಹೆ ನೀಡಿದರು.
ಡಿಮ್ಡ್ ಫಾರೆಸ್ಟ್ ಎನ್ನುವ ಅಸ್ತ್ರವನ್ನು ಹಿಡಿದುಕೊಂಡು ಅಧಿಕಾರಿಗಳು ನಮ್ಮ ತಾಲೂಕಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ.10 ವರ್ಷದಿಂದ ಅಧಿಕೃತ ಮರಳುಗಾರಿಕೆಗೆ ಅವಕಾಶ ಸಿಕ್ಕಿಲ್ಲ.ಅಧಿಕಾರಿಗಳು ಪೆನ್ನು ಪೇಪರ್ ಹಿಡಿದು ಸಾಮಾನ್ಯ ಜನರ ಮೇಲೆ ಹಗಲು ದರೋಡೆ ಮಾಡುತ್ತಿದ್ದಾರೆ.
ಡಿಮ್ಡ್ ಫಾರೆಸ್ಟ್ ಎಂಬುದು ಅಧಿಕೃತವೊ, ಅನಧಿಕೃತವೊ ನಮಗೆಮೂಡಿರುವ ಸಂಶಯವಾಗಿದೆ. ಹೈಕೋರ್ಟ್ ನಲ್ಲಿ ತಿರಸ್ಕೃತಗೊಳಿಸಿದ್ದರು ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳು ಡೀಮ್ಡ್ ಪದ ಬಳಸಿಕೊಂಡು ನಾಟಕ ಮಾಡುತ್ತಿದ್ದಾರೆ. ಮರಳು ಮತ್ತು ಕೆಂಪು ಕಲ್ಲು ಇಂದು ದುಬಾರಿಯಾಗಿದ್ದು ಸಾಮಾನ್ಯ ಜನರಿಗೆ ಮನೆ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಆಯಾಯ ಗ್ರಾಮದಲ್ಲಿ ಅಧಿಕೃತ ಮರಳುಗಾರಿಕೆಗೆ ಅನುಮತಿ ನೀಡುವ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಕಳುಹಿಸಬೇಕು.
ಡೀಮ್ಡ್ ಫಾರೆಸ್ಟ್ ಎಂಬ ವಿಷಯದ ಕುರಿತು ಎಲ್ಲಿಯೂ ಸಮರ್ಪಕ ಉತ್ತರ ನೀಡದೆ ಶತಾಯಿಸುತ್ತಿದ್ದಾರೆ ಎಂದು ಅನಿಲ್ ಪರಿವಾರಕಾನ ನೇರವಾಗಿ ಆರೋಪಿಸಿದರು.
ಮರಳುಗಾರಿಕೆ ಮತ್ತು ಕೆಂಪು ಕಲ್ಲು ತೆಗೆಯಲು ಅನುಮತಿ ಪಡೆದು ನಮ್ಮ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ಅನಧಿಕೃತವಾಗಿ ಸಾಗಾಟಮಾಡುವುದರಿಂದ ಇಂದು ಮರಳು ಕೆಂಪು ಕಲ್ಲು ದುಬಾರಿಯಾಗಿದೆ. ಇದಕ್ಕೆ ಕಡಿವಾಣ ಹಾಕಿ ಪಂಚಾಯತ್ ಮಟ್ಟದಲ್ಲಿ ಮಾತ್ರ ಅನುಮತಿ ನೀಡಬೇಕುಎಂದು ರಾಧಾಕೃಷ್ಣ ಪರಿವಾರಕನಾ ಹೇಳಿದರು.
ಈ ವಿಚಾರ ಜಿಲ್ಲಾಧಿಕಾರಿಯವರ ಸಮಕ್ಷಮದಲ್ಲಿ ನಡೆಯಬೇಕಾಗಿದ್ದು ಸಭೆಯಲ್ಲಿ ಬಂದ ವಿಚಾರ ವನ್ನುನಿರ್ಣಯ ಮಾಡಿ ಪತ್ರ ಬರೆದು ಕಳುಹಿಸಬೇಕು ಎಂದು ನೋಡೆಲ್ ಅಧಿಕಾರಿ ಸೂಚಿಸಿದರು.















ನಾರ್ಕೋಡು ಕೋಲ್ಚಾರು ರಸ್ತೆ ಬದಿಯಲ್ಲಿ ಹೖಟೆನ್ಶನ್ ತಂತಿಯ ಮೇಲೆ ಮರಗಳು ಬೀಳುವ ಸಾಧ್ಯತೆ ಇದ್ದು ಅರಣ್ಯ ಇಲಾಖೆಯವರು ಗಮನ ಹರಿಸಿ ಅಪಾಯಕಾರಿ
ಮರಗಳನ್ನು ತೆರವುಗೊಳಿಸುವಂತಾಗಬೇಕು ಎಂದು ಧನಂಜಯ ಕುಂಚಡ್ಕ ಸೂಚಿಸಿದರು.
ರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಮಾರ್ಕ್ ಮಾಡಿದ ಮರಗಳನ್ನು ಇನ್ನು ಕೂಡ ತೆರವುಗೊಳಿಸಿಲ್ಲ ಯಾಕೆ ಎಂದು ಚಿದಾನಂದ ಕೊಲ್ಚಾರ್ ಕೇಳಿದರು.
ಮನೆ ಮನೆಗೆ ಪೊಲೀಸ್ ಅಭಿಯಾನ ಹಾಗೂ
ಜನಸ್ನೇಹಿ ಕಾರ್ಯಕ್ರಮ ಮತ್ತು ಗ್ರಾಮದ ಬಿಟ್ ಬಗ್ಗೆ ಮಾಹಿತಿಯನ್ನು ಸತೀಶ್ ಪೊಲೀಸ್ ನೀಡಿದರು.
ಕೊಲ್ಚಾರ್ ರಸ್ತೆಯಲ್ಲಿ ದಿನನಿತ್ಯಘನ ಗಾತ್ರದ ವಾಹನಗಳು ಓವರ್ಲೋಡ್ ಹಾಕಿ ಸಂಚರಿಸುತ್ತಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಂಡಿದ್ದೀರಾ..?
ಈ ವಾಹನಗಳು ಅನುಮತಿ ಇದ್ದು ಸಂಚರಿಸುತ್ತಿದೆಯೇ..?
ಅಂತರ್ ರಾಜ್ಯ ರಸ್ತೆ ಆದ್ದರಿಂದ ಅಕ್ರಮ ಮದ್ಯ ಸಾಗಾಟವು ನಡೆಯುತ್ತಿದೆ. ಕೇರಳದಿಂದ ಬಂದ ವ್ಯಕ್ತಿ ಸುಳ್ಯ ಪೊಲೀಸರ ಜತೆ ಅಡ್ಜಸ್ಟ್ ಮಾಡಬಹುದು ಕೇರಳದಲ್ಲಿ ಆಗುವುದಿಲ್ಲ ಎಂದು ನೇರವಾಗಿ ಹೇಳುತ್ತಾರೆ. ಇದರ ಹಿಂದೆ ಪೊಲೀಸ್ ಲಾಭಿ ನಡೆಯುತ್ತಿದೆಯೇ ಎಂಬ ಸಂಶಯವಿದೆ.
ಅಲೆಟ್ಟಿರಸ್ತೆಯಲ್ಲಿ ವಿಶ್ರಾಂತಿ ಗೃಹದ ಬಳಿ ತಿರುವಿನಲ್ಲಿ ಗಸ್ತು ನಡೆಸುತ್ತಿದ್ದೀರಿ. ಅತ್ಯಂತ ಅಪಾಯಕಾರಿ ತಿರುವು ಆಗಿರುವುದರಿಂದ ಸಡನ್ ಪೊಲೀಸರನ್ನು ಕಂಡು ಸವಾರರು ನಿಯಂತ್ರಣ ಕಳೆದು ಬಿದ್ದಿರುವ ಘಟನೆ ನಡೆದಿದೆ.
ಪೋಲಿಸರು ಬೇರೆ ಜಾಗದಲ್ಲಿ ನಿಲ್ಲುವುದು ಸೂಕ್ತವಾಗುವುದು.
ಸಣ್ಣ ಪುಟ್ಟ ವಿಚಾರದಲ್ಲಿ ಮಾತ್ರ ಗಮನ ಹರಿಸುವ ಪೊಲೀಸರು ದೊಡ್ಡ ಮಟ್ಟದ ಅಕ್ರಮಗಳ ಬಗ್ಗೆ ಯಾಕೆ ಹಿತಾಸಕ್ತಿ ವಹಿಸುತ್ತಿಲ್ಲ. ನಮ್ಮ ರಸ್ತೆ ಉಳಿಯಬೇಕು ಅದಕ್ಕಾಗಿ ಹೆಚ್ಚುವರಿ ಭಾರ ಹಾಕಿ ಪರ್ಮಿಟ್ ಇಲ್ಲದೆ
ಓಡಾಡುವ ವಾಹನಗಳ ಮೇಲೆ ಕ್ರಮ ಕೈಗೊಳ್ಳಬೇಕು. ಅದಕ್ಕೆ ಕಡಿವಾಣ ಹಾಕಬೇಕು
ಎಂದು ಸುದರ್ಶನ ಅಗ್ರಹಿಸಿದರು.
ಪುತ್ತೂರಿನಿಂದ ಪಿಕ್ ಆಪ್ ನಲ್ಲಿ ಗಣಪತಿ ಮೂರ್ತಿ ತರುವ ವೇಳೆಯಲ್ಲಿ ಮೂರ್ತಿ ಹಿಡಿದುಕೊಳ್ಳಲು ಇಬ್ಬರನ್ನು ಕೂರಿಸಿದ ಕಾರಣಕ್ಕೆ ಹೈವೇ ಪಟ್ರೊಲ್ ಪೊಲೀಸ್ ನವರು ನಿಲ್ಲಿಸಿ ಉಡಾಫೆಯಾಗಿ ವರ್ತಿಸಿದ್ದಾರೆ. ಈಗಲೇ ದಂಡ ಕಟ್ಟಬೇಕು ಇಲ್ಲವಾದಲ್ಲಿ ದಾಖಲೆ ಪತ್ರ ಕೊಡಬೇಕು ಎಂದರು. ನಾನು ಈಗ ದಂಡ ಕಟ್ಟುವುದಿಲ್ಲ ಒಂದು ವೇಳೆ ಕಟ್ಟಲೇಬೇಕಾದರೆ ಕೋರ್ಟ್ ಮೂಲಕ ಕಟ್ಟುತ್ತೇನೆ ಎಂದು ಹೇಳಿದ್ದರಿಂದ
ನಮ್ಮ ವಾಹನದ ದಾಖಲೆ ಪತ್ರವನ್ನು ತೆಗೆದಿರಿಸಿಕೊಂಡಿದ್ದಾರೆ. ಪಂಚಾಯತ್ ಸದಸ್ಯ ಎಂದು ಹೇಳಿದರು ಗೌರವ ಕೊಡದೆ ಏಕವಚನ ಬಳಸಿ ದರ್ಪದಿಂದ ಮಾತನಾಡಿದ್ದಾರೆ. ಬಾಡಿಗೆ ರೂಪದಲ್ಲಿ ಹೋಗಿದ್ದರೆ ಕಾನೂನು ಪ್ರಕಾರ ದಂಡ ಹಾಕುವ ನಿಯಮ ಹೌದು. ಆದರೆ ನಾನು ಸೇವೆಯಾಗಿ ಮೂರ್ತಿ ತರಲು ಹೋಗಿರುವುದು ಎಂದು ವಿನಂತಿಸಿದರೂ ಸೌಜನ್ಯತೋರಿಸದೆ ಉಡಾಫೆಯಾಗಿ ವರ್ತಿಸಿರುವುದು ಸರಿಯಲ್ಲ. ಜನಸ್ನೇಹಿ ಪೊಲೀಸರು ಎಂದು ಬರಿ ಬಾಯಿ ಮಾತಲ್ಲಿ ಹೇಳಿದರೆ ಸಾಲದು ಕರ್ತವ್ಯದಲ್ಲಿಯು ಮಾನವೀಯತೆ ಇರಬೇಕು
ಎಂದು ಪಂಚಾಯತ್ ಸದಸ್ಯ ರತೀಶನ್ ರವರು ದೂರಿದರು.
ಇದಕ್ಕೆ ಧ್ವನಿಗೂಡಿಸಿದ ಗ್ರಾಮಸ್ಥರು ನಮ್ಮ ಧಾರ್ಮಿಕ ಕಾರ್ಯಕ್ರಮಕ್ಕೆ ಎಲ್ಕದಕ್ಕೂ ಅಡ್ಡಿ ಪಡಿಸುತ್ತಿದ್ದೀರಿ. ಗ್ರಾಮಸ್ಥರು ನಿಮಗೆ ಸಹಕಾರ ನೀಡಬೇಕು. ಆದರೆ
ನೀವು ಮಾತ್ರ ಅಡ್ಜಸ್ಟ್ಮೆಂಟ್ ವ್ಯವಹಾರ ಮಾಡುತ್ತೀರಿ ಎಂದು ಆರೋಪಿಸಿದರು.
ಈ ರೀತಿಯಾಗಿ ಆರೋಪ ಮಾಡುವುದಾದರೆ ಎಸ್. ಪಿ ಯವರಿಗೆ ನಿಮ್ಮ ಮೇಲೆ ಕಂಪ್ಲೇಂಟ್ ಮಾಡಬೇಕಾಗುವುದು ಎಂದು ಸತೀಶ್ ರವರು ಹೇಳಿದಾಗ ಸ್ವಲ್ಪ ಮಟ್ಟಿಗೆ ಪೊಲೀಸ್ ಮತ್ತು ಗ್ರಾಮಸ್ಥರ ನಡುವೆ ಗೊಂದಲ ಉಂಟಾಯಿತು.
ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರವನ್ನು ಮತ್ತು ಇಲಾಖೆಯ ಮಾಹಿತಿಯನ್ನು ಕೊಡುವ ಕೆಲಸ ಮಾತ್ರ ಮಾಡಬೇಕೆಂದು ನೋಡೆಲ್ ಅಧಿಕಾರಿ ಸೂಚನೆ ನೀಡಿ ಸಮಾಧಾನಿಸಿದರು.
ಸಾಮಾನ್ಯ ಸಭೆಯಲ್ಲಿ ಪೊಲೀಸ್ ಅಧಿಕಾರಿಯ ವರು ಬಂದಿರುವ ಸಂದರ್ಭದಲ್ಲಿ ಗ್ರಾಮದ ಸಮಸ್ಯೆಯ ಬಗ್ಗೆ ಮತ್ತು
ಈ ಎಲ್ಲ ವಿಚಾರಗಳ ಬಗ್ಗೆ ಜನಪ್ರತಿನಿಧಿಗಳಾದ ನಾವು ಪ್ರಸ್ತಾಪಿಸಿದ್ದೇವೆ ಎಂದು ಗೀತಾ ಕೊಲ್ಚಾರ್ ತಿಳಿಸಿದರು.
ಪರಿವಾರಕಾನ ಕಟ್ರಚೋಡಿ ಅಂಗನವಾಡಿಯಿಂದ ಹೋಗುವ ರಸ್ತೆ ದುರಸ್ತಿ ಕಾಮಗಾರಿ ಮಾಡಬೇಕಾಗಿದೆ
ಸ್ವಂತ ಖರ್ಚಿನಿಂದ ರಸ್ತೆ ನಿರ್ಮಿಸಿದ್ದೇನೆ. ಈಗ
ಪಂಚಾಯತ್ ನವರ ಸ್ವಾಧೀನಕ್ಕೆ ಬಿಟ್ಟು ಕೊಟ್ಟಿದ್ದೇನೆ. ಇನ್ನು ಕೂಡ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಿಲ್ಲ ಎಂದು ಚೆನ್ನಪ್ಪ ನಾಯ್ಕ ರವರು ದೂರಿದರು.
ಜಿಲ್ಲಾ ಪಂಚಾಯಿತಿಯಿಂದ ಕಟ್ರಚೋಡಿ ರಸ್ತೆಗೆ ಅನುದಾನ ಇರಿಸಲಾಗಿದೆ ಅದರಲ್ಲಿ ಉಳಿಕೆಯಾದ ಹಣದಲ್ಲಿಅಂಗನವಾಡಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಿಸುವ ಬಗ್ಗೆ ಸುದೇಶ್ ಅರಂಬೂರು ತಿಳಿಸಿದರು.
ಜೆಜೆಎಂ ನೀರಿನ ಪೈಪ್ ಲೈನ್ ಈಗಾಗಲೇ ಹಾಕಲಾಗಿದ್ದು ಟ್ಯಾಂಕ್ ನಿರ್ಮಿಸಿದಲ್ಲಿ ಸ್ವಚ್ಛಗೊಳಿಸಲು ಏಣಿಯ ವ್ಯವಸ್ಥೆ ಮಾಡಿಲ್ಲ.ಕೆಲಸದ ವಿವರ ಗುತ್ತಿಗೆದಾರರು ನೀಡುವಂತೆ ತಿಳಿಸಿದರು.
ಗ್ರಾಮಕ್ಕೆಘನ ತ್ಯಾಜ್ಯ ಘಟಕಕ್ಕೆ ಸ್ಥಳ ಕಾಯ್ದಿರಿಸಲಾಗಿದ್ದು ಅದರ ಪ್ರಕ್ರಿಯೆ ಹೇಗೆ ಮುಂದುವರೆದಿದೆ..? ನಿವೇಶನಕ್ಕೆ ಕೂಡ ಪಂಚಾಯತ್ ವತಿಯಿಂದ ಸ್ಥಳ ಗುರುತಿಸಲಾಗಿದೆ. ಇದರ ಕೆಲಸಗಳು ಎಲ್ಲಿ ತನಕ ನಡೆದಿದೆ ಎಂದು ಸುದರ್ಶನ್ ಪ್ರಶ್ನಿಸಿದರು.
ಮೈಂದೂರಿನಲ್ಲಿ ಜಾಗ
ಗುರುತಿಸಲಾಗಿದ್ದು ಪಂಚಾಯತ್ ಆರ್ ಟಿ ಸಿ ಹೊಂದಿದ 1 ಎಕ್ರೆ ಜಾಗ ಗಡಿ ಗುರುತು ಮಾಡಲಾಗಿದೆ. ಇದಕ್ಕೆ ತಾಗಿಕೊಂಡು ಸರಕಾರಿ ಜಾಗವಿದ್ದು ಕಂದಾಯ ಇಲಾಖೆಯ ಸೂಚನೆಯಂತೆ ಒತ್ತುವರಿ ಮಾಡಲಾಗಿತ್ತು.
ಆದರೆ ಅಲ್ಲಿನ ಸ್ಥಳೀಯರ ಆಕ್ಷೇಪವಿದ್ದುದರಿಂದ ಮಾತುಕತೆ ನಡೆಸಲಾಗಿತ್ತು.
ಗುರುತು ಮಾಡಿದ ಜಾಗವನ್ನು ಸ್ಥಳೀಯರೊಬ್ಬರು ನಮ್ಮ ಸ್ವಾಧಿನದ ಜಾಗವೆಂದು ಹೇಳಿ ಬೇಲಿ ಹಾಕಿ ಅತಿಕ್ರಮಿಸಿದ್ದಾರೆ. ಇದರಿಂದಾಗಿ ಕೆಲಸ ಮುಂದುವರಿಸಲಾಗಿಲ್ಲ ಎಂದು ಅಧ್ಯಕ್ಷರು ತಿಳಿ ಸಿದರು.
ಈ ಬಗ್ಗೆ ತಹಶಿಲ್ದಾರ್ ರವರ ಗಮನಕ್ಕೆ ತಂದು ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಪೊಲೀಸ್ ಸಮಕ್ಷಮದಲ್ಲಿ ತೆರಳಿ ಪಂಚಾಯತ್ ಜಾಗಕ್ಕೆ ಹಾಕಿದ ಬೇಲಿ ತೆರವು ಮಾಡಿ ಘಟಕ ಸ್ಥಾಪಿಸುವ ಯೋಜನೆ ಕೈಗೊಳ್ಳಬೇಕು ಎಂದು ನೋಡೆಲ್ ಅಧಿಕಾರಿ ತಿಳಿಸಿದರು.
ನಿವೇಶನಕ್ಕೆ ಮಂಜುರಾತಿ ಯಾಗಿದ್ದುಅನುದಾನದ ಕೊರತೆ ಇರುವುದರಿಂದ ಮುಂದುವರಿಲಿಲ್ಲ. ಈಗಾಗಲೇ ಗಡಿ ಗುರುತು ಮಾಡಿ ಬೇಲಿ ಹಾಕಿ ಸಮತಟ್ಟು ಮಾಡಲಾಗಿದೆ. ಎತ್ತರದ ಪ್ರದೇಶವಾದ್ದರಿಂದ ಹೆಚ್ಚಿನ ಅನುದಾನವಿಲ್ಲದೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪಿ. ಡಿ. ಒ ತಿಳಿಸಿದರು.
ಅಲೆಟ್ಟಿ ದೊಡ್ಡ ಗ್ರಾಮ ವಾಗಿದ್ದು ಗ್ರಾಮ ಸಭೆಯಲ್ಲಿ ಹೆಚ್ಚಿನ ವಿಶೇಷ ಅನುದಾನ ಒದಗಿಸಿಕೊಡುವಂತೆ ಬೇಡಿಕೆ ಇರಿಸಿದ್ದು ಪತ್ರ ಬರೆದು ಕಳುಹಿಸಲಾಗಿದೆ ಬೆಳವಣಿಗೆ ಏನಾಗಿದೆ ಎಂದು ಬಾಪು ಸಾಹೇಬ್ ರವರು ಪ್ರಶ್ನಿಸಿದರು.
ಹೆಚ್ಚಿನ ಅನುದಾನಗಳು ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಮತ್ತು ಶಾಸಕರ ಕೋಟದಲ್ಲಿ ಬರುವುದರಿಂದ ಗಮನಕ್ಕೆ ಬರುವುದಿಲ್ಲ. ಕೆಲವೊಂದು ಕಾಮಗಾರಿಗಳು ನಡೆದ ಬಳಿಕ ನಮ್ಮ ಗಮನಕ್ಕೆ ತರುತ್ತಾರೆ ಎಂದು ಪಿ. ಡಿ. ಒ ತಿಳಿಸಿದರು
ಅಲೆಟ್ಟಿ ಸರಕಾರಿ ಪ್ರೌಢ ಶಾಲೆ ಎತ್ತರ ಪ್ರದೇಶದಲ್ಲಿ ಇದೆ ಗ್ರಾಮಕ್ಕೆ ಒಂದು ಹೈಸ್ಕೂಲ್ ಇರುವ ಕಾರಣ ಅದನ್ನು ನಾರ್ಕೊಡಿಗೆ ವರ್ಗಾಯಿಸಿದರೆ ಎಲ್ಲಾ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವುದು ಎಂದು ಸುದರ್ಶನ ರವರು ಸಲಹೆ ನೀಡಿದರು.
ಹೈಸ್ಕೂಲು ಆಶ್ರಮ ಶಾಲೆ ಅಂಗನವಾಡಿಗೆ ಹೋಗುವ ರಸ್ತೆ ಕಳೆದ ಬಹಳಷ್ಟು ಸಮಯಗಳಿಂದ ನಾದು ರಸ್ತಿಯಲ್ಲಿದೆ ಹಾಗೂ ಈಗಾಗಲೇ ರೋಗರುಜಿನಗಳು ಸೊಳ್ಳೆ ಕಾಟದಿಂದಾಗಿ ಹರಡುತ್ತಿದೆ. ಆರೋಗ್ಯ ಇಲಾಖೆ ವತಿಯಿಂದ ಫಾಗಿಂಗ್ ವ್ಯವಸ್ಥೆ ಮಾಡಬೇಕು ಎಂದು ಶಿವಪ್ರಸಾದ್ ಅಲೆಟ್ಟಿ ಪ್ರಸ್ತಾಪಿಸಿದರು.
ಅಧ್ಯಕ್ಷರ ಮಾತು:
ನಮ್ಮಆಡಳಿತಾವಧಿಯಲ್ಲಿಯೇ ಹೈಸ್ಕೂಲ್ ರಸ್ತೆ ಕಾಂಕ್ರಿಟ್ ಕಾಮಗಾರಿ ಮಾಡಿಸುತ್ತೇವೆ. ಕೊನೆಯ ಗ್ರಾಮಸಭೆ ಇದಾಗಿದ್ದು ಆರೋಗ್ಯಕರ ಚರ್ಚೆಯು ನಡೆದಿದೆ.
ಕಲ್ಚೆರ್ಪೆ ಸಮಸ್ಯೆ ಕುರಿತು ನಡೆದ ಪ್ರತಿಭಟನೆಯಲ್ಲಿ ನಾನು ಸ್ವತಃ ಪಾಲ್ಗೊಂಡಿದ್ದೇನೆ. ಒಂದು ತಿಂಗಳೊಳಗೆ ದಿನ ನಿಗದಿಪಡಿಸಿ ಎ.ಸಿ ಅವರ ಸಮಯವನ್ನು ಕೇಳಿಕೊಂಡು ಪಂಚಾಯತ್ ನಿಯೋಗದೊಂದಿಗೆ ಭೇಟಿಯಾಗಿ ಮಾತುಕತೆ ನಡೆಸಿ ಸಮಸ್ಯೆಗೆ ತಾರ್ಕಿಕ ಪರಿಹಾರದ ವ್ಯವಸ್ಥೆಯನ್ನು ಮಾಡುವ ಬಗ್ಗೆ ಪ್ರಯತ್ನಿಸುತ್ತೇವೆ.
ಘನ ತ್ಯಾಜ್ಯ ಘಟಕದ ನಿರ್ಮಾಣದ ಕುರಿತು ಈಗಾಗಲೇ ನೋಡೆಲ್ ಅಧಿಕಾರಿಗಳು ತಿಳಿಸಿದಂತೆ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ತೆರಳಿ ಮಾತುಕತೆ ನಡೆಸಿ ಘಟಕ ಸ್ಥಾಪಿಸುವ ಬಗ್ಗೆ ಮುತುವರ್ಜಿ ವಹಿಸಲಾಗುವುದು.
ಸರಕಾರಿ ಪ್ರೌಢಶಾಲೆಯನ್ನು ನಾರ್ಕೋಡಿಗೆ ವರ್ಗಾಯಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸದಸ್ಯರ, ಗ್ರಾಮಸ್ಥರ ಅಭಿಪ್ರಾಯದ ಮೇರೆಗೆ ಕಾರ್ಯ ಕೖಗೆತ್ತಿಕೊಳ್ಳುವ ಚಿಂತನೆ ನಡೆಸಲಾಗುವುದು.
ಸಕಾಲಕ್ಕೆ ಸರಿಯಾಗಿ ಗ್ರಾಮಸ್ಥರು ತೆರಿಗೆ ಹಾಗೂ ನೀರಿನ ಬಿಲ್ಲನ್ನು ಪಾವತಿಸಿದರೆ ಗ್ರಾಮದ ಅಭಿವೃದ್ಧಿಗೆ ಪೂರಕವಾಗುವುದು.
ನಮ್ಮ ಆಡಳಿತಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಕೊನೆಯ ಗ್ರಾಮ ಸಭೆಯಲ್ಲಿ ಹೇಳಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ
ಕೆ ಕಮಲ ನಾಗಪಟ್ಟಣ, ಸದಸ್ಯರಾದ ಸತ್ಯ ಕುಮಾರ್ ಆಡಿಂಜ, ದಿನೇಶ್ ಕೆ, ಧರ್ಮಪಾಲ ಕೊಯಿಂಗಾಜೆ, ಚಂದ್ರಕಾಂತ ನಾರ್ಕೋಡು, ಸತ್ಯ ಪ್ರಸಾದ್ ಗಬ್ಬಲ್ಕಜೆ, ಶಿವಾನಂದ ರಂಗತ್ತಮಲೆ, ರತಿಶನ್ ಅರಂಬೂರು, ಸುದೇಶ್ ಕೆ ಅರಂಬೂರು, ಗೀತಾ ಕೋಲ್ಚಾರು, ಎಂ. ಜಿ ಭಾಗೀರಥಿ, ವೇದಾವತಿ ಎಂ ಪಿ,ಅನಿತಾ ಎಸ್, ಮೀನಾಕ್ಷಿ ಕೆ, ಕುಸುಮ ಬಿಲ್ಲರಮಜಲು, ಶಂಕರಿ ಕೊಲ್ಲರಮೂಲೆ, ಪಿಡಿಒ ಸೃಜನ್ ಎ.ಜಿ ಉಪಸ್ಥಿತರಿದ್ದರು.
ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.










